ಅಧ್ಯಾತ್ಮದಿಂದ ಶಾಂತಿ, ನೆಮ್ಮದಿ ಪ್ರಾಪ್ತಿ

ನರಗುಂದ : ಮನುಷ್ಯನ ಜಂಜಾಟದ ಬದುಕಿನಲ್ಲಿ ಶಾಂತಿ, ನೆಮ್ಮದಿ ಮೂಡಿಸುವ ಶಕ್ತಿ ಅಧ್ಯಾತ್ಮಕ್ಕಿದೆ ಎಂದು ನರಗುಂದ ವಿರಕ್ತಮಠದ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ವಿರಕ್ತಮಠದ ಚನ್ನಬಸವ ಶಿವಯೋಗಿಗಳ 150ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಚನ್ನಬಸವ ಮಹಾಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಅಧ್ಯಾತ್ಮ ಅಳವಡಿಸಿಕೊಂಡು ಆದರ್ಶಮಯ ಜೀವನ ನಡೆಸಿದಾಗ ಸುಂದರ ಬದುಕು ನಮ್ಮದಾಗುತ್ತದೆ. ಸುಂದರ ಸಮಾಜ ನಿರ್ವಿುಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸದೃಢ ಭಾರತ ನಿರ್ವಣಕ್ಕೆ ನಿರಂತರ ಸೇವೆ ಸಲ್ಲಿಸುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕು ಎಂದರು.

ಇಲಕಲ್ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಮಹಾಸ್ವಾಮಿಗಳು ಮಾತನಾಡಿ, ಸ್ವಾರ್ಥದ ಬದುಕು ಬಿಡಬೇಕು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕ, ತುಪ್ಪದ ಕುರಹಟ್ಟಿಯ ವಾಗೀಶ ಪಂಡಿತಾರಾಧ್ಯ, ಪ್ರಭುಲಿಂಗ ಸ್ವಾಮಿಗಳು ಮಾತನಾಡಿದರು. ಚನ್ನಬಸವ ಮಹಾಶಿವಯೋಗಿಗಳ ಜೀವನ ದರ್ಶನ ಪ್ರವಚನವನ್ನು ಮಡಿವಾಳಯ್ಯ ಶಾಸ್ತ್ರಿಗಳು ಪ್ರಸ್ತುತ ಪಡಿಸಿದರು. ಸಂಗಮೇಶ ಸ್ವಂತ, ರಾಜಶೇಖರ ಸಂಗಾವಿ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಶಶಿಕುಮಾರ ದೇವರು, ಸಿ.ಸಿ. ಗುಡ್ಡಾಪೂರಮಠ ನಿರ್ವಹಿಸಿದರು.

ಫೋಟೋ-25 ಎನ್​ಆರ್​ಡಿ 2: ನರಗುಂದ ಪಟ್ಟಣದ ವಿರಕ್ತಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚನ್ನಬಸವ ಮಹಾಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ವಿರಕ್ತಮಠದ ಶಿವಕುಮಾರ ಸ್ವಾಮಿಗಳು ಉದ್ಘಾಟಿಸಿದರು. ಗುರುಮಹಾಂತ ಶ್ರೀಗಳು, ವಾಗೀಶ ಪಂಡಿತಾರಾಧ್ಯ, ಪ್ರಭುಲಿಂಗ ಶ್ರೀಗಳು, ಇತರರಿದ್ದರು.

Leave a Reply

Your email address will not be published. Required fields are marked *