ಅಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ

ಮಾಗಡಿ : ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಸಹೋದರ, ಕೂಟಗಲ್ ಜಿಪಂ ಸದಸ್ಯ ಎಚ್.ಎನ್. ಅಶೋಕ್ ಅವರಿಗೆ ಜಿಪಂ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮಾಗಡಿ ಕಾಂಗ್ರೆಸ್ ನಾಯಕರು ಸಂಸದ ಡಿ.ಕೆ.ಸುರೇಶ್ ಬೆಂಗಳೂರು ನಿವಾಸಕ್ಕೆ ಮನೆಗೆ ತೆರಳಿ ಗುರುವಾರ ಮನವಿ ಮಾಡಿದರು.

ಎಚ್.ಎನ್.ಅಶೋಕ್ ಮಾತನಾಡಿ, ಜಿಪಂ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಅಧ್ಯಕ್ಷ ಸ್ಥಾನ ನೀಡಿದರೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ನೆರವಾಗಲಿದೆ. ಈ ವಿಚಾರದಲ್ಲಿ ವರಿಷ್ಠರ ತೀರ್ವನಕ್ಕೆ ಬದ್ಧ ಎಂದು ತಿಳಿಸಿದರು.

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಯಾರೆಂದು ಇನ್ನೂ ತೀರ್ವನಿಸಿಲ್ಲ. ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸಿ.ಎಂ.ಲಿಂಗಪ್ಪ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಎಚ್.ಎನ್.ಅಶೋಕ್ ಅವರ ಮನವಿಯನ್ನೂ ಪರಿಗಣಿಸಲಾಗುವುದು ಎಂದರು.

ಕುತೂಹಲ ಕೆರಳಿಸಿರುವ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು, ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಯಾರ ಹೆಸರನ್ನು ಸೂಚಿಸುತ್ತಾರೋ ಅವರು ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಧನಂಜಯ್ಯ, ಪಿಎಲ್​ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸೀಬೇಗೌಡ, ಮಾಡಬಾಳ್ ಜಯರಾಂ, ಪಾಪಣ್ಣ ಇತರ ಮುಖಂಡರು ಇದ್ದರು.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಜಿಪಂ ಸದಸ್ಯ ಅಶೋಕ್​ಗೆ ನೋಟಿಸ್ : ಪಕ್ಷ ವಿರೊಧಿ ಚಟುವಟಿಕೆ ಹಿನ್ನೆಲೆಯಲ್ಲಿ ಉತ್ತರ ನೀಡುವಂತೆ ಕೂಟಗಲ್ ಜಿಪಂ ಸದಸ್ಯ ಹಾಗೂ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಸಹೋದರ ಎಚ್.ಎನ್.ಅಶೋಕ್ ಅವರಿಗೆ ಜಾತ್ಯತೀತ ಜನತಾದಳ ರಾಜ್ಯ ಕಾರ್ಯಾಧ್ಯಕ್ಷರು ನೋಟಿಸ್ ಜಾರಿ ಮಾಡಿದ್ದಾರೆ.

ಜೆಡಿಎಸ್ ಕಾರ್ಯಾಧ್ಯಕ್ಷ ಎಂ.ಎಸ್. ನಾರಾಯಣ್​ರಾವ್ ಅ.3ರಂದು ಅಶೋಕ್​ಗೆ ನೋಟಿಸ್ ಜಾರಿ ಮಾಡಿದ್ದು, 5 ದಿನದೊಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ಆರೋಪವೇನು?: ಜೆಡಿಎಸ್​ನಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ಅಶೋಕ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಪ್ರಚಾರ ಕೈಗೊಂಡಿದ್ದಲ್ಲದೆ, ಪಕ್ಷದ ವರಿಷ್ಠರು ಮತ್ತು ಮುಖಂಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದಾರೆ ಮತ್ತು ಪಕ್ಷದ ಕಾರ್ಯಚಟುವಟಿಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ರಾಮನಗರ ಜಿಲ್ಲಾ ಮುಖಂಡರು ಪಕ್ಷದ ರಾಜ್ಯ ನಾಯಕರ ಬಳಿ ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಒಂದು ವೇಳೆ ಉತ್ತರ ನೀಡದಿದ್ದರೆ, ಆರೋಪವನ್ನು ಒಪ್ಪಿಕೊಂಡಿದ್ದೀರಿ ಎಂದು ಪರಿಗಣಿಸಿ ಶಿಸ್ತುಕ್ರಮ ಜರುಗಿಸಿ ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂದು ನಾರಾಯಣರಾವ್ ನೋಟಿಸ್​ನಲ್ಲಿ ತಿಳಿಸಿದ್ದಾರೆ.

ಜಿಪಂ ಚುನಾವಣೆ ಸನಿಹ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುಣಾವಣೆ ಅ.9ರಂದು ನಿಗದಿಯಾಗಿದ್ದು, ಚುನಾವಣೆ ಸನಿಹವೇ ಅಶೋಕ್​ಗೆ ನೋಟಿಸ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.