ಅಧ್ಯಕ್ಷರಾಗಿ ಎ.ಬಿ. ಪಾಟೀಲ ಆಯ್ಕೆ

ಹಾವೇರಿ: ಜಿಲ್ಲೆಯಾದ್ಯಂತ ನೌಕರರ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎ.ಬಿ. ಪಾಟೀಲ, ರಾಜ್ಯ ಪರಿಷತ್ ಸದಸ್ಯರಾಗಿ ಎಸ್.ಜಿ. ಸುಣಗಾರ, ಖಜಾಂಚಿಯಾಗಿ ಎಂ.ಎಸ್. ಜಂಗರಡ್ಡೇರ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಸಿ.ಎಸ್. ಹಾಲಪ್ಪನವರಮಠ, ಎ.ಬಿ. ಪಾಟೀಲ, ಎಸ್.ಎಸ್. ಹುರಕಡ್ಲಿ, ಸಿ.ವಿ. ಹಿರೇಮಠ ಸ್ಪರ್ಧಿಸಿದ್ದರು. ಇದರಲ್ಲಿ ಕಂದಾಯ ಇಲಾಖೆ ಶಿರಸ್ತೆದಾರ್ ಎ.ಬಿ. ಪಾಟೀಲ 28 ಮತಗಳನ್ನು ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿ ಹಾಲಪ್ಪನವರಮಠ 24, ಎಸ್.ಎಸ್. ಹುರಕಡ್ಲಿ 9, ಸಿ.ವಿ. ಹಿರೇಮಠ ಶೂನ್ಯ ಮತಗಳನ್ನು ಪಡೆದರು.

ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಎಸ್.ಜಿ. ಸುಣಗಾರ, ಕೆ.ವೈ. ಪಿಡ್ಡಿ, ಸಿದ್ದಣ್ಣ ಯಲಿಗಾರ ಸ್ಪರ್ಧಿಸಿದ್ದರು. ಇದರಲ್ಲಿ ಸಹಕಾರ ಇಲಾಖೆಯ ನೌಕರ ಎಸ್.ಜಿ. ಸುಣಗಾರ 27 ಮತಗಳನ್ನು ಪಡೆದು ಆಯ್ಕೆಯಾದರು. ಕೆ.ವೈ. ಪಿಡ್ಡಿ 22, ಸಿದ್ದಣ್ಣ ಯಲಿಗಾರ 12 ಮತಗಳಿಸಿ ಸೋಲುಕಂಡರು.

ಖಜಾಂಚಿ ಸ್ಥಾನಕ್ಕೆ ಮಲ್ಲರಡ್ಡಿ ಜಂಗರಡ್ಡೇರ, ವಾಚಪ್ಪ ಲಮಾಣಿ, ಎಚ್.ಎಂ. ಮುರುಗೇಶ ನಾಯ್ಕ ಸ್ಪರ್ಧಿಸಿದ್ದರು. ಇದರಲ್ಲಿ ಶಿಕ್ಷಕ ಮಲ್ಲರಡ್ಡಿ ಜಂಗರಡ್ಡೇರ 26 ಮತಗಳಿಸಿ ಆಯ್ಕೆಯಾದರು. ವಾಚಪ್ಪ ಲಮಾಣಿ, 20, ಎಚ್.ಎಂ. ಮುರುಗೇಶ ನಾಯ್ಕ 15 ಮತ ಗಳಿಸಿ ಸೋಲುಕಂಡರು.

ಜಿಲ್ಲೆಯ ವಿವಿಧ ಇಲಾಖೆಗಳಿಂದ ಒಟ್ಟು 55 ನಿರ್ದೇಶಕರು, ಆರು ತಾಲೂಕು ನೌಕರರ ಸಂಘದ ಅಧ್ಯಕ್ಷರು ಸೇರಿ ಒಟ್ಟು 61 ಮತದಾರರಿದ್ದರು. ಎಲ್ಲರೂ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಎಸ್.ಬಿ. ಪಂಪಣ್ಣನವರ ಹಾಗೂ ಎಸ್.ಎನ್. ಮೆಡ್ಲೇರಿ ‘ವಿಜಯವಾಣಿ’ಗೆ ತಿಳಿಸಿದರು.

ಅಧ್ಯಕ್ಷನಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ. ನನ್ನ ಮೇಲೆ ನಂಬಿಕೆಯಿಟ್ಟು ನೌಕರರು ಆಯ್ಕೆಗೊಳಿಸಿದ್ದು, ಮೊದಲನೇಯದಾಗಿ ಎನ್​ಪಿಎಸ್ ನೌಕರರ ಸಮಸ್ಯೆ ಪರಿಹಾರಕ್ಕೆ ಸಂಘಟಿತ ಹೋರಾಟ ನಡೆಸುತ್ತೇನೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನೌಕರರಿಗೆ ನೆಲೆ ಕಲ್ಪಿಸುವ ಗುರಿ ಹೊಂದಿದ್ದೇನೆ. ಈಗಾಗಲೇ ಕೆಲ ತಾಲೂಕುಗಳಲ್ಲಿ ಕಟ್ಟಡಗಳಿದ್ದು, ಅವುಗಳನ್ನು ದುರಸ್ಥಿಗೊಳಿಸಿ ನೌಕರರ ಬಳಕೆಗೆ ಅನುಕೂಲ ಕಲ್ಪಿಸುತ್ತೇನೆ.
| ಎ.ಬಿ. ಪಾಟೀಲ, ಸರ್ಕಾರಿ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷ

ಜಿಲ್ಲೆಯ ಎಲ್ಲ ಸರ್ಕಾರಿ ನೌಕಕರು ನನ್ನ ಮೇಲೆ ಭರವಸೆಯಿಟ್ಟು ಆಯ್ಕೆಗೊಳಿಸಿದ್ದಾರೆ. ಅವರ ಭರವಸೆಗೆ ತಕ್ಕಂತೆ, ಜಿಲ್ಲೆಯ ನೌಕರರ ಕುಂದುಕೊರತೆಗಳನ್ನು ರಾಜ್ಯ ಸಂಘದ ಗಮನಸೆಳೆದು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಜಿಲ್ಲೆಯಲ್ಲಿಯೂ ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ.
| ಎಸ್.ಜಿ. ಸುಣಗಾರ, ಸರ್ಕಾರಿ ನೌಕರರ ಸಂಘದ ನೂತನ ರಾಜ್ಯ ಪರಿಷತ್ ಸದಸ್ಯ

Leave a Reply

Your email address will not be published. Required fields are marked *