ಅಧೀನ ಕಚೇರಿಗಳಿಗೆ ಭೇಟಿ ನೀಡಿ

ಕಾರವಾರ: ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನ ಕಚೇರಿಗಳಿಗೆ ಹಾಗೂ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಅರಿಯಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೋಬಳಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಎಲ್ಲ ಕಡೆ ನಿಯಂತ್ರಣ ಕೊಠಡಿ ತೆರೆಯಿರಿ. ಸಾರ್ವಜನಿಕ ದೂರು ಕೇಂದ್ರ ತೆರೆಯಿರಿ. ವಿಸಿಟರ್ಸ್ ಬುಕ್ ಮಾಡಿ. ಹಿರಿಯ ಅಧಿಕಾರಿಗಳು ಎಲ್ಲೆಡೆ ಸಸ್ಪೆನ್ಸ್ ವಿಸಿಟ್ ಮಾಡಿ ಎಂದರು.

ತಾಪಂ, ಜಿಪಂ ಸಭೆಗಳು ಹಾಗೂ ಗ್ರಾಮ ಸಭೆಗಳಿಗೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಈ ಕುರಿತು 3 ದಿನದಲ್ಲಿ ಎಲ್ಲ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗೆ ಸೂಚನೆ ನೀಡಿದರು.

413 ಗ್ರಾಮಗಳಲ್ಲಿ ನೀರಿನ ತೊಂದರೆ

ಜಿಲ್ಲೆಯಲ್ಲಿ 413 ಗ್ರಾಮಗಳಲ್ಲಿ ನೀರಿನ ತೊಂದರೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಎಲ್ಲೆಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಬೋರ್​ವೆಲ್​ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲು ಸಿದ್ಧತೆ ಮಾಡಲಾಗಿದೆ. ಹೊನ್ನಾವರ ಹೊರತುಪಡಿಸಿ ಉಳಿದೆಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಕುಡಿಯುವ ನೀರು ಪೂರೈಕೆಗೆ ಹಣವಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ವಿವರಿಸಿದರು.

ಕಾಲು ಸಂಕ ಸರ್ವೆ ಮಾಡಿ

ವಿದ್ಯಾರ್ಥಿಗಳು, ಶಾಲೆ, ಕಾಲೇಜ್​ಗೆ ತೆರಳಲು ತೊಂದರೆ ಆಗುತ್ತಿದ್ದರೆ ಅಂಥಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಕಾಲು ಸಂಕ ನೀಡಲು ಸರ್ಕಾರ ಯೋಜಿಸಿದೆ. ಅಗತ್ಯ ಕಾಲು ಸಂಕಗಳ ಬಗೆಗೆ ಡಿಡಿಪಿಐಗಳ ಸಹಕಾರ ಪಡೆದು ಪಿಡಿಒ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಪಟ್ಟಿ ಸಿದ್ಧಪಡಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಎಂದು ಸಚಿವರು ಸೂಚಿಸಿದರು.

ಶಿಥಿಲವಾಗಿರುವ ಸಣ್ಣ ಸೇತುವೆಗಳ ಬಗೆಗೂ ಮಾಹಿತಿ ನೀಡುವಂತೆ ಸೂಚಿಸಿದರು.

ಶಾಸಕ ದಿನಕರ ಶೆಟ್ಟಿ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಜಿಪಂ ಸಿಇಒ ಎಂ.ರೋಶನ್ ಇದ್ದರು.

ಕುಡಿಯುವ ನೀರಿನ ಅನುದಾನ ಕಡಿತ

ಕಾರವಾರ: ಕುಡಿಯುವ ನೀರಿಗೆ ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡುತ್ತಿರುವ ಕುರಿತು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕುಡಿಯುವ ನೀರು ಪೂರೈಕೆಗಾಗಿ ರಾಜ್ಯ ಸರ್ಕಾರ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಈ ಬಾರಿ ಕೇವಲ 300 ಕೋಟಿ ರೂ.ಗಳನ್ನು ನೀಡಿದೆ. ವರ್ಷದಿಂದ ವರ್ಷಕ್ಕೆ

ಕೇಂದ್ರ ಸರ್ಕಾರವು ಕುಡಿಯುವ ನೀರಿನ ಅನುದಾನವನ್ನು ಕಡಿಮೆ ಮಾಡುತ್ತಿರುವುದರಿಂದ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಹಾಗೂ ಸಾಮಗ್ರಿ ವೆಚ್ಚ ಬಾಕಿ ಸುಮಾರು 1400 ಕೋಟಿ ರೂಪಾಯಿ ಇದೆ. ನಮ್ಮ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಕೇಂದ್ರ ಕೃಷಿ ಸಚಿವರನ್ನು ಭೇಟಿಯಾದ ನಂತರ 117 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಕಳೆದ ವರ್ಷದ ಕೂಲಿ ಬಾಕಿಯೇ 913 ಕೋಟಿ ರೂ. ಬಾಕಿ ಇದೆ. ಇನ್ನು ಸಾಮಗ್ರಿ ವೆಚ್ಚದಲ್ಲಿ ಕೇಂದ್ರ ಶೇ. 75 ಹಾಗೂ ರಾಜ್ಯ ಶೇ. 25 ರಷ್ಟು ಹಣ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡಿದೆ. ಆದರೆ, ಸಾಮಗ್ರಿ ವೆಚ್ಚವೆಲ್ಲ ಸೇರಿ ಕೇಂದ್ರದ ಪಾಲಿನ ಈ ವರ್ಷದ ಅಂದಾಜು 500 ಕೋಟಿಗೂ ಹೆಚ್ಚು ಹಣ ಬಾಕಿ ಇದೆ. ಜನರಿಗೆ ತೊಂದರೆ ಆಗಬಾರದು ಎಂದು ರಾಜ್ಯ ಸರ್ಕಾರ ಕೇಂದ್ರದ ಪಾಲಿನ ಹಣ ನೀಡಬೇಕಾಗಿ ಬಂದಿದೆ. ಆದರೆ, ಉದ್ಯೋಗ ಖಾತ್ರಿ ಎಲ್ಲ ವ್ಯವಹಾರ ವೆಬ್ ಪೋರ್ಟಲ್ ಮೂಲಕ ನಡೆಯುವುದರಿಂದ ಹಾಗೆ ಮಾಡಲೂ ಕೆಲ ತಾಂತ್ರಿಕ ತೊಂದರೆಗಳಿವೆ. ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ತಂಡ ಮಾಡಿಕೊಂಡು ಬರ ಅಧ್ಯಯನಕ್ಕೆ ತೆರಳುತ್ತಿದ್ದಾರೆ. ಒಳ್ಳೆಯದು. ಅವರು ಕೇಂದ್ರದ ಮೇಲೆ ಒತ್ತಡ ಹೇರಿ ಬಾಕಿ ಹಣ ಬಿಡುಗಡೆಗೆ ಸಹಕರಿಸಲಿ ಎಂದು ಹೇಳಿದರು.