ಅಧಿಕಾರ ಹಿಡಿಯಲು ಪ್ರಯತ್ನಿಸುವುದರಲ್ಲಿ ತಪ್ಪೇನಿದೆ?

ಶಿವಮೊಗ್ಗ: ರಾಜ್ಯದಲ್ಲಿ ಅಧಿಕಾರ ಹಿಡಿಯಲು 104 ಶಾಸಕರನ್ನು ಹೊಂದಿರುವ ಬಿಜೆಪಿ ನಿರಂತರವಾಗಿ ಪ್ರಯತ್ನಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಕೇವಲ 38 ಶಾಸಕರಿರುವ ಜೆಡಿಎಸ್ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆಸುವಾಗ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುವುದರಲ್ಲಿ ತಪ್ಪೇನಿದೆ? ಆಪರೇಷನ್ ಕಮಲ ಎಂದೇಕೆ ಕರೆಯುತ್ತೀರಿ? ಸರ್ಕಾರ ರಚಿಸಲು ನಡೆಸುವ ಪ್ರಯತ್ನವಿದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.

ಆಡಿಯೋ ಪ್ರಕರಣದಲ್ಲಿ ಬಿಜೆಪಿಗೆ ಮುಜುಗರ ಆಗಿರುವುದು ನಿಜ. ಆದರೆ ದುಡ್ಡು ಪಡೆಯುವ ಆರೋಪದಲ್ಲಿ ಸಿಕ್ಕಿಕೊಂಡಿರುವ ಸಚಿವರ ಬಗ್ಗೆ ಆಡಳಿತಾರೂಢ ಸರ್ಕಾರ ಚಕಾರ ಎತ್ತುವುದಿಲ್ಲ. ಆಡಿಯೋದಲ್ಲಿ ಹಣವೆಂಬ ಪದ ಬಳಕೆಯಾದ ಕೂಡಲೆ ದೊಡ್ಡದಾಗಿ ಬಿಂಬಿಸಲಾಗಿದೆ. ಪ್ರಕರಣ ನಿರ್ವಹಣೆಯಲ್ಲಿ ಸ್ಪೀಕರ್ ವಿಫಲರಾದರು ಎಂದು ಹೇಳಿದರು.

ಆಡಿಯೋ ಪ್ರಕರಣ ಎಸ್​ಐಟಿಗೆ ವಹಿಸಲು ಬಿಜೆಪಿ ವಿರೋಧವಿದೆ. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೂಡ ವಿಚಾರಣೆ ಮಾಡಬೇಕಾಗಬಹುದು. ಎಸ್​ಐಟಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪ್ರಕರಣ ತನಿಖೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ಬಿಜೆಪಿ ಉಪಾಧ್ಯಕ್ಷ ಬಿಳಕಿ ಕೃಷ್ಣಮೂರ್ತಿ, ಎನ್.ಜೆ.ರಾಜಶೇಖರ್, ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ಬಸವರಾಜಪ್ಪ, ಮಧುಸೂದನ್, ರತ್ನಾಕರ ಶೆಣೈ, ಹಿರಣ್ಣಯ್ಯ, ಮಹೇಂದ್ರನಾಥ, ಸುರೇಂದ್ರ, ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.