ಅಧಿಕಾರ ಲಾಲಸೆಯಿಂದ ಕಾಂಗ್ರೆಸ್​ನಲ್ಲಿ ಅಂತಃಕಲಹ: ಎಂಎಲ್​ಸಿ ಆಯನೂರು ಮಂಜುನಾಥ್ ಹೇಳಿಕೆ

 ಶಿವಮೊಗ್ಗ: ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿ ಹಾಗೂ ಅಧಿಕಾರ ಹಂಚಿಕೆಯ ವ್ಯತ್ಯಾಸವೇ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಭಿನ್ನಮತಕ್ಕೆ ಕಾರಣ ಎಂದು ಎಂಎಲ್​ಸಿ, ಬಿಜೆಪಿ ಶಿವಮೊಗ್ಗ ವಿಭಾಗ ಪ್ರಭಾರಿ ಆಯನೂರು ಮಂಜುನಾಥ್ ಹೇಳಿದರು.

ಕಾಂಗ್ರೆಸ್​ನಲ್ಲಿ ಅಧಿಕಾರ ಆಸೆ ಅಧಿಕವಿರುವುದರಿಂದ ಅಂತಃಕಲಹ ಹೆಚ್ಚಿದೆ. ಪಕ್ಷದ ಮುಖಂಡರು ಪರಸ್ಪರ ದೂಷಣೆಯಲ್ಲಿ ತೊಡಗಿದ್ದಾರೆ. ಎಚ್.ಡಿ.ರೇವಣ್ಣ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ. ಸಿದ್ದರಾಮಯ್ಯ, ಸುಧಾಕರ್, ರಮೇಶ್ ಜಾರಕಿಹೊಳಿ ಸೇರಿ ಎಲ್ಲರೂ ಭಿನ್ನಮತೀಯ ಹೇಳಿಕೆ ನೀಡುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕಾಂಗ್ರೆಸ್, ಜೆಡಿಎಸ್ ಮುಖಂಡರ ಹೇಳಿಕೆಯಿಂದ ಉಂಟಾದ ಭಿನ್ನಮತೀಯ ಚಟುವಟಿಕೆಗಳಿಗೆ ಬಿಜೆಪಿ ಹೇಗೆ ಕಾರಣ? ಭಿನ್ನಮತ ಸ್ಪೋಟಕ್ಕೆ ಬಿಎಸ್​ವೈ ಆಗಲಿ, ಬಿಜೆಪಿಯಾಗಲಿ ಕಾರಣವಲ್ಲ. 37 ಸ್ಥಾನ ಗೆದ್ದವರಿಗೆ ಸಿಎಂ ಆಗುವ ಆಸೆ ಇದ್ದ ಮೇಲೆ 104 ಸ್ಥಾನ ಪಡೆದ ಬಿಜೆಪಿ ಅಧಿಕಾರ ಬಯಸುವುದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡರ ನಾಲಿಗೆ-ಮಿದುಳಿಗೂ ಸಂಬಂಧ ತಪ್ಪಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅವರ ವರ್ತನೆ, ನಡವಳಿಕೆ, ಆಂಗಿಕ ಭಾಷೆಯ ಉಚ್ಛಾರ, ಬಿಎಸ್​ವೈ ವಿರುದ್ಧ ಕೆಟ್ಟ ಪದ ಬಳಕೆ ಗಮನಿಸಿದರೆ ನಿಮ್ಮ ಮಾತಿಗೂ ಮಿದುಳಿಗೂ ಸಂಬಂಧ ತಪ್ಪಿರಬಹುದೆಂದು ಅನಿಸುತ್ತದೆ ಎಂದು ತಿರುಗೇಟು ನೀಡಿದರು.

ಬಿಜೆಪಿ ಮುಖಂಡರಾದ ಬಿಳಕಿ ಕೃಷ್ಣಮೂರ್ತಿ, ಎಚ್.ಸಿ.ಬಸವರಾಜಪ್ಪ, ಕೆ.ಜಿ.ಕುಮಾರಸ್ವಾಮಿ, ಅನಿತಾ ರವಿಶಂಕರ್, ಅಶೋಕ್ ಪೈ, ಮಧುಸೂದನ್, ರತ್ನಾಕರ್ ಶೆಣೈ, ಹಿರಣ್ಣಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

ರೆಸಾರ್ಟ್ ರಾಜಕಾರಣಕ್ಕೆ ಪ್ರತಿಕ್ರಿಯಿಸಲಿ: ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿದ ಬೆನ್ನಲ್ಲೇ ಶಾಸಕರ ಕಟ್ಟಿಹಾಕಲು ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿರುವುದು ಭಿನ್ನಮತ ಇರುವುದಕ್ಕೆ ಸ್ಪಷ್ಟ ನಿದರ್ಶನ ಎಂದು ಆಯನೂರು ಮಂಜುನಾಥ್ ಹೇಳಿದರು.

ಶಾಸಕಾಂಗ ಸಭೆಯಲ್ಲಿ ಐದಾರು ಕಾಂಗ್ರೆಸ್ ಶಾಸಕರು ಅಸಮಾಧಾನವನ್ನು ನೇರವಾಗಿ ವ್ಯಕ್ತಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಉರುಳಿ ಹೋಗುವ ಭಯದಲ್ಲಿ ರೆಸಾರ್ಟ್​ಗೆ ಕರೆದುಕೊಂಡು ಹೋಗಿದ್ದಾರೆ. ಬಿಜೆಪಿಯ ರೆಸಾರ್ಟ್ ವಾಸ್ತವ್ಯ ಪ್ರಶ್ನಿಸುವ ಕಾಂಗ್ರೆಸ್, ಜೆಡಿಎಸ್ ಮುಖಂಡರು ಪ್ರಸ್ತುತ ತಮ್ಮ ರೆಸಾರ್ಟ್ ರಾಜಕಾರಣಕ್ಕೆ ಏನನ್ನುತ್ತಾರೆ ಎಂದು ಪ್ರಶ್ನಿಸಿದರು.

ಹತ್ತಾರು ಬಾರಿ ಜೈಲು ಸೇರಬೇಕಿತ್ತು: ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ 35 ಸಾವಿರ ಕೋಟಿ ರೂ. ವ್ಯತ್ಯಾಸ ಕಂಡುಬಂದಿದೆ ಎನ್ನಲಾಗುತ್ತಿದೆ. ಅವರ ಸಚಿವ ಸಂಪುಟದಲ್ಲಿ ಹಾಸಿಗೆ-ದಿಂಬು, ಆರೋಗ್ಯ ಸೇರಿ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆದಿದೆ. ಬಲಿಷ್ಠ ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಹತ್ತಾರು ಬಾರಿ ಜೈಲಿಗೆ ಹೋಗಬೇಕಿತ್ತು ಎಂದು ಆಯನೂರು ಮಂಜುನಾಥ್ ಟೀಕಿಸಿದರು.

ಭಿನ್ನಮತೀಯರಲ್ಲಿ ಬಹುತೇಕರು ಸಿದ್ದರಾಮಯ್ಯಗೆ ನಿಷ್ಠೆಯಿಂದ ಇರುತ್ತೇವೆ ಎನ್ನುತ್ತಾರೆ. ಬಹುಶಃ ಸಿದ್ದರಾಮಯ್ಯ ತಮ್ಮ ಪ್ರಭಾವ ಕಡಿಮೆಯಾಗುತ್ತಿದೆ ಎನಿಸಿದಾಗೆಲ್ಲ ಈ ರೀತಿ ಭಿನ್ನಮತೀಯ ಆಟ ಕಟ್ಟುತ್ತಾರೆ ಎನಿಸುತ್ತದೆ. ಅಲ್ಲದೆ ಹಾವು ಮುಂಗಸಿಯಂತಿದ್ದ ಎಚ್​ಡಿಕೆ ಹಾಗೂ ಡಿಕೆಶಿ ಒಂದಾಗಿರುವುದು ಸಹ ಸಿದ್ದರಾಮಯ್ಯ ಹತಾಶ ವರ್ತನೆಗೆ ಕಾರಣ ಎಂದು ಅಭಿಪ್ರಾಯಪಟ್ಟರು.