ಅಧಿಕಾರಿ ಮೇಲೆ ಎಸಿಬಿ ಅಸ್ತ್ರ?

ಪರಶುರಾಮ ಭಾಸಗಿ

ವಿಜಯಪುರ: ಹಾಲಿ ನಗರ ಶಾಸಕ ಮತ್ತು ಹಿಂದಿನ ವಿಧಾನ ಪರಿಷತ್ ಸದಸ್ಯರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ ಹೋರಾಟದ ಮೂಲಕ ದಕ್ಷ-ಪ್ರಾಮಾಣಿಕ ಅಧಿಕಾರಿ ಪಟ್ಟ ಮುಡಿಗೇರಿಸಿಕೊಂಡಿದ್ದ ಪಾಲಿಕೆಯ ಹಿಂದಿನ ಆಯುಕ್ತ ಶ್ರೀಹರ್ಷಾ ಶೆಟ್ಟಿ ತಲೆ ಮೇಲೆಯೇ ಇಂದು ಎಸಿಬಿ ತನಿಖೆ ಕುಣಿಕೆ ನೇತಾಡುತ್ತಿದೆ !

ಹೌದು, ಸದಸ್ಯರ ಸರ್ವಾನು ಮತದೊಂದಿಗೆ ಮಂಡನೆ ಗೊಂಡ ಠರಾವು ಪ್ರತಿ ಆಧರಿಸಿ ಹಾಲಿ ಆಯುಕ್ತ ಡಾ.ಔದ್ರಾಮ್ ಅವರು ಈಗಾಗಲೇ ಎಸಿಬಿ ತನಿಖೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜತೆಗೆ ಠರಾವು ಪ್ರತಿ ಕೂಡ ಸಲ್ಲಿಸಿದ್ದು, ತನಿಖೆ ಚೆಂಡನ್ನು ರಾಜಧಾನಿಗೆ ಪಾಸ್ ಮಾಡಿದ್ದಾರೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಹಿಂದಿನ ನಡಾವಳಿ ಬಗ್ಗೆ ಚರ್ಚೆಯಾ ಗಲಿದ್ದು, ಹಾಲಿ ಆಯುಕ್ತರು ಸ್ಪಷ್ಟತೆ ನೀಡಬೇಕಿರುವ ಕಾರಣ ಅಷ್ಟರೊಳಗೆ ಪ್ರಕರಣದ ತನಿಖೆ ಆರಂಭಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಆಯುಕ್ತರು ಸಹ ‘ಫಾಲೋಅಪ್’ ಮಾಡುತ್ತಿದ್ದು, ಶೀಘ್ರದಲ್ಲಿ ತನಿಖೆ ಆರಂಭಗೊಳ್ಳುವ ಸಾಧ್ಯತೆ ಇದೆ.

ಎಸಿಬಿ ತನಿಖೆಗೆ ಠರಾವು ಪಾಸು

2017-18ನೇ ಸಾಲಿನ ನಗರದ ವಿವಿಧ ಯೋಜನೆಗಳಲ್ಲಿ ತೆಗೆದುಕೊಂಡ ರಸ್ತೆ, ವಿದ್ಯುತ್, ಒಳಚರಂಡಿ ಮತ್ತು ಇನ್ನಿತರ ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯವಹಾರ ಕಂಡುಬಂದಿದೆ. ಕಳಪೆ ಕಾಮಗಾರಿಯಾದರೂ ಆಯುಕ್ತರು ‘ಬಿಲ್‌ಪಾಸ್’ ಮಾಡಿರುವ ಆರೋಪ ಶ್ರೀಹರ್ಷಾ ಅವರ ಮೇಲಿದೆ. 2018 ಅ.12 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಡೆದ ಸುದೀರ್ಘ ಚರ್ಚೆಯಲ್ಲಿ ಸದಸ್ಯರಾದ ರವೀಂದ್ರ ಲೋಣಿ, ಮೈನುದ್ದೀನ ಬೀಳಗಿ ಪ್ರಬಲ ಆರೋಪ ಮಾಡಿದ್ದರು. ಅದರನ್ವಯ ಪ್ರಕರಣದ ತನಿಖೆಯನ್ನು ಎಸಿಬಿಗೆ ವಹಿಸುವಂತೆ ಉಪಮಹಾಪೌರ ಗೋಪಾಲ ಘಟಕಾಂಬಳೆ ಸರ್ವಾನುಮತದಿಂದ ಠರಾವು ಪಾಸ್ ಮಾಡಿದ್ದರು. ಜತೆಗೆ ಲೇಖಾಧೀಕ್ಷಕ ವಿ.ಎಸ್. ಪುಟ್ಟಿ ಸಹ ಸರ್ಕಾರಿ ಪ್ರೌಢಶಾಲೆಗೆ ಅಂಟಿಕೊಂಡ ಮಳಿಗೆಗಳ ನಿರ್ಮಾಣ ಸಲುವಾಗಿ 90 ಠೇವಣಿದಾರರಿಂದ 2 ಲಕ್ಷ ರೂ.ಗಳಂತೆ ಹಣ ಪಡೆದು ಸಾಮಾನ್ಯ ನಿಧಿಗೆ ವರ್ಗಾಯಿಸಿ ಸದಸ್ಯರ ವಿರೋಧದ ನಡುವೆಯೂ ಗುತ್ತಿಗೆದಾರರಿಗೆ ಪಾವತಿಸಿದ್ದರು. ಅವರ ಮೇಲೂ ಎಸಿಬಿ ತನಿಖೆ ನಡೆಸುವಂತೆ ಸದಸ್ಯ ಪರಶುರಾಮ ರಜಪೂತ ಒತ್ತಾಯಿಸಿದ ಹಿನ್ನೆಲೆ ಎರಡೂ ಪ್ರಕರಣವನ್ನು ಒಟ್ಟಿಗೆ ಎಸಿಬಿ ತನಿಖೆಗೆ ನೀಡಲು ಪತ್ರ ಬರೆಯಲಾಗಿದೆ.

ಅಧಿಕಾರಿ ಮೇಲಿರುವ ಆಪಾದನೆಗಳು

ಸಭೆ ಅನುಮತಿ ಇಲ್ಲದೆ ಬಬಲೇಶ್ವರ ನಾಕಾದಿಂದ ಬಸ್ ನಿಲ್ದಾಣದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ನೀಡಿದ್ದು, ಸದರಿ ರಸ್ತೆಗೆ ಹೊಂದಿದ್ದ ಹಳೇ ವಿದ್ಯುತ್ ಕಂಬಗಳನ್ನು ತೆಗೆದು ಅವುಗಳಿಗೆ ಬಣ್ಣ ಹಚ್ಚಿ ಕೆಎಚ್‌ಬಿ ಕಾಲನಿಯಲ್ಲಿ ಅಳವಡಿಸಿ ಕಳಪೆ ಬಲ್ಬ್ ಗಳನ್ನು ಜೋಡಣೆ ಮಾಡಲಾಗಿದೆ. ಬಬಲೇಶ್ವರ ನಾಕಾದಿಂದ ವಿಶ್ವೇಶ್ವರಯ್ಯ ವೃತ್ತದವರೆಗಿನ ರಸ್ತೆ ಮತ್ತು ಗೋಳಗುಮ್ಮಟ ರಸ್ತೆ ಕಾಮಗಾರಿ ನಿರ್ವಹಣೆಯಲ್ಲಿ ಅವ್ಯವಹಾರ ಹಾಗೂ 2017-18ನೇ ಸಾಲಿನ ಸಾಮಾನ್ಯ ನಿಧಿಯಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಕೈಗೊಂಡ ಕಾಮಗಾರಿ ಕಳಪೆ ಆರೋಪ. ಕಾಮಗಾರಿಗಳ ಗುಣಮಟ್ಟ ಪರಿಶೀಲಿಸದೆ ಪಾಲಿಕೆಯ ವಿವಿಧ ಶಿಲ್ಕುಗಳನ್ನು ಸಾಮಾನ್ಯ ನಿಧಿಗೆ ವರ್ಗಾಯಿಸಿ ಗುತ್ತಿಗೆದಾರರಿಗೆ ಬಿಲ್ ಪಾವತಿಸಿರುವುದು. ಗುತ್ತಿಗೆದಾರರ ಅನುಕೂಲಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು, ಮಹಾಪೌರರ ಆದೇಶ ಉಲ್ಲಂಘನೆ ಮಾಡಿ ಪಾಲಿಕೆ ಹಣ ದುರ್ಬಳಕೆ ಮಾಡಿಕೊಂಡಿದ್ದು ಸೇರಿ ಹಲವು ಗುರುತರ ಆರೋಪಗಳನ್ನು ಅಧಿಕಾರಿ ಶ್ರೀಹರ್ಷಾ ಎದುರಿಸುತ್ತಿದ್ದಾರೆ.

ಠರಾವು ಆಧರಿಸಿ ಈಗಾಗಲೇ ಎಸಿಬಿ ತನಿಖೆ ಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಡಾವಳಿ ಪ್ರತಿ ಸಹ ಕಳುಹಿಸಿಕೊಡಲಾಗಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಆ ಬಗ್ಗೆ ವಿವರಣೆ ನೀಡಬೇಕು ನಿಜ. ಆದರೆ, ತನಿಖೆಗೆ ಶಿಫಾರಸು ಮಾಡುವ ಅಧಿಕಾರ ತಮಗಿಲ್ಲ. ಅದೇನಿದ್ದರೂ ಮೇಲಧಿಕಾರಿಗಳೇ ಕ್ರಮ ಕೈಗೊಳ್ಳಬೇಕು.
– ಡಾ.ಔದ್ರಾಮ್ ಪಾಲಿಕೆ ಆಯುಕ್ತ ವಿಜೆಪಿ ಪಾಲಿಕೆ