ಅಧಿಕಾರಿಗಳ ವಿರುದ್ಧ ಅಸಮಾಧಾನ

ಚಿಂತಾಮಣಿ: ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಚೇರಿಗಳಲ್ಲಿ ಬಹುತೇಕ ಅಧಿಕಾರಿಗಳು ಲಂಚಕ್ಕಾಗಿ ಪೀಡಿಸುತ್ತಾರೆ. ವ್ಯವಸ್ಥೆ ಸರಿಪಡಿಸಬೇಕಾದ ಶಾಸಕ, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಅಧಿಕಾರಿಗಳು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸುತ್ತಿಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಸಂಘದ ತಾಲೂಕು ಅಧ್ಯಕ್ಷ ರಮಣಾರೆಡ್ಡಿ ಆರೋಪಿಸಿದರು.

ತಾಲೂಕು ಆಡಳಿತದ ವೈಫಲ್ಯ ವಿರೋಧಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಕಚೇರಿ ಮುಂಭಾಗ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ರೈತ ಮುಖಂಡರಾದ ರಾಮಕೃಷ್ಣಪ್ಪ, ರಾಮಸ್ವಾಮಿ, ರೆಡ್ಡಪ್ಪ, ಲಕ್ಷ್ಮೀನಾರಾಯಣರೆಡ್ಡಿ, ಶ್ರೀನಿವಾಸರೆಡ್ಡಿ, ಕಾಗಿತಿ ವೆಂಕಟಾಚಲಪತಿ, ನರೇಶ್, ಜಯರಾಮರೆಡ್ಡಿ, ಗೋವಿಂದರೆಡ್ಡಿ, ಚೌಡಪ್ಪ, ಅನಕಲ್ ಶಿವಾನಂದ ಮತ್ತಿತರರಿದ್ದರು.