ಅಧಿಕಾರಿಗಳ ಮೇಲೆ ಅನುಮಾನ

ಕಾರವಾರ: ನೋಂದಣಿ ಕಾರ್ಡ್ ಮಾಡಿಸಿಕೊಡುವುದಾಗಿ ಕೆಲ ಸಂಘಟನೆಗಳಿಂದ ಕಾರ್ವಿುಕರ ಸುಲಿಗೆ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ. ತಾಪಂ, ಜಿಪಂ ಅಧ್ಯಕ್ಷರ ಸೂಚನೆಗೂ ಬೆಲೆ ಕೊಡದೇ ವಸೂಲಿ ಮುಂದುವರಿದಿರುವುದು ಅಧಿಕಾರಿಗಳ ಮೇಲೆ ಅನುಮಾನ ಮೂಡಲು ಕಾರಣವಾಗಿದೆ.

ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ಹೊಂದಿದವರಿಗೆ ಕಾರ್ವಿುಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸುವುದಾಗಿ ಹೇಳಿಕೊಂಡ ಸಂಘಟನೆಯೊಂದರ ಸದಸ್ಯರು ತಾಲೂಕಿನೆಲ್ಲೆಡೆ ಓಡಾಡುತ್ತಿದ್ದಾರೆ. ಹೊಸದಾಗಿ ನೋಂದಣಿ ಮಾಡಿಸಲು ಸರ್ಕಾರದಿಂದ ಪ್ರತಿ ಸದಸ್ಯರಿಗೆ 75 ರೂ. ಶುಲ್ಕ ನಿಗದಿ ಮಾಡಲಾಗಿದೆ. ಆದರೆ, ಕಾರ್ವಿುಕ ಸಂಘಟನೆ ಸದಸ್ಯರು 100 ರಿಂದ 500 ರೂ.ವರೆಗೆ ಪ್ರತಿ ಕಾರ್ವಿುಕನಿಂದ ವಸೂಲಿ ಮಾಡುತ್ತಿರುವ ಆರೋಪವಿದೆ.

ಮೂರನೇ ವ್ಯಕ್ತಿ: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ಹೊಂದಿರುವ ಸದಸ್ಯರನ್ನು ಕಾರ್ವಿುಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸುವ ಜವಾಬ್ದಾರಿಯನ್ನು ಜಯಂತ ನಾಯ್ಕ ಎನ್ನುವವರಿಗೆ ಕಾರ್ವಿುಕ ಕಲ್ಯಾಣ ಇಲಾಖೆ ವಹಿಸಿದೆ. ಆದರೆ, ಅವರು ಮೂರನೇ ವ್ಯಕ್ತಿಗೆ ಈ ಕಾರ್ಯದ ಜವಾಬ್ದಾರಿ ವಹಿಸಿದ್ದಾರೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರ ಫೆಡರೇಷನ್ ಈ ಕಾರ್ಯವನ್ನು ತಾಲೂಕಿನೆಲ್ಲೆಡೆ ಮಾಡುತ್ತಿದೆ. ಈ ಸಂಬಂಧ ಬ್ರೋಷರ್ ಪ್ರಕಟಿಸಿದೆ.

ಸಭೆಯಲ್ಲಿ ಪ್ರತಿಧ್ವನಿ: ಕಾರವಾರ ತಾಲೂಕು ಪಂಚಾಯಿತಿ ಹಾಗೂ ಜಿಪಂ ಸಭೆಗಳಲ್ಲಿ ಈ ವಿಷಯ ಕಳೆದ ಫೆಬ್ರವರಿ ತಿಂಗಳಲ್ಲಿ ಚರ್ಚೆಯಾಗಿತ್ತು. ತಾಪಂ ಸಭೆಯಲ್ಲಿ ಕಾರ್ವಿುಕ ಅಧಿಕಾರಿಯನ್ನು ಕರೆಸಿ ಈ ಕುರಿತು ಕ್ರಮ ವಹಿಸುವಂತೆ ಸೂಚನೆ ನೀಡಲಾಗಿತ್ತು. ಆದರೂ ಹೆಚ್ಚಿನ ಹಣ ವಸೂಲಾತಿ ಮುಂದುವರಿದಿದೆ ಎಂಬುದು ಜನಪ್ರತಿನಿಧಿಗಳ ಆರೋಪ.

ಹಿಂದೆ ತಾಲೂಕು ಪಂಚಾಯಿತಿ ಕೆಡಿಪಿ ಸಭೆಗೆ ಕಾರ್ವಿುಕ ಅಧಿಕಾರಿಗಳನ್ನು ಕರೆಸಿ ಈ ಕುರಿತು ಕ್ರಮಕ್ಕೆ ಸೂಚನೆ ನೀಡಿದ್ದೆ. ಆದರೆ, ಸೋಮವಾರ ಮತ್ತೆ ಕೆರವಡಿಯಿಂದ ಕರೆ ಬಂದಿದ್ದು, ಒಂದು ಕಾರ್ಡ್​ಗೆ 250 ರೂ. ಪಡೆದಿರುವುದಾಗಿ ತಿಳಿಸಿದ್ದಾರೆ. ಘಾಡಸಾಯಿಯಲ್ಲಿ 100 ರಿಂದ 500 ರೂ.ವರೆಗೂ ಪಡೆಯಲಾಗಿದೆ ಎಂಬ ಆರೋಪವಿದೆ. ಗೋಟೆಗಾಳಿಯಲ್ಲಿ ತಲಾ 200 ರೂ. ಪಡೆಯಲಾಗಿದೆ. ಸೂಚನೆ ನೀಡಿದರೂ ಕ್ರಮ ವಹಿಸಿದ್ದನ್ನು ಕಂಡರೆ ಅಧಿಕಾರಿಗಳೂ ಶಾಮೀಲಿದ್ದಾರೆಯೇ ಎಂಬ ಅನುಮಾನ ಹುಟ್ಟುತ್ತಿದೆ.

| ಪ್ರಮಿಳಾ ನಾಯ್ಕ ತಾಪಂ ಅಧ್ಯಕ್ಷೆ