ಅಧಿಕಾರಿಗಳ ತಾತ್ಸಾರದಿಂದ ರೈತರ ಆತ್ಮಹತ್ಯೆ

 ಸಚಿವ ಎಂ.ಸಿ.ಮನಗೂಳಿ ಹೇಳಿಕೆಗೆ ಬೇಸರ >>

ಬಳ್ಳಾರಿ/ಕೊಪ್ಪಳ: ಸಾಲಮನ್ನಾ ಘೋಷಿಸಿದರೂ ರೈತರ ಆತ್ಮಹತ್ಯೆ ನಿಲ್ಲುತ್ತಿಲ್ಲ. ಅಧಿಕಾರಿಗಳ ತಾತ್ಸಾರದಿಂದ ಇಂಥ ಘಟನೆಗಳು ನಡೆಯುತ್ತಿದೆ. ಇಂಥ ಸಮಯದಲ್ಲಿ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಉದಾಸೀನ ಮಾತನಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಕಣ್ಣಲ್ಲಿ ನೀರು ತರಿಸಿದೆ. ಜನತಾ ದರ್ಶನದಲ್ಲಿ ಎರಡು ಬಾರಿ ಆ ಕುಟುಂಬ ಮುಖ್ಯಮಂತ್ರಿಯನ್ನು ಭೇಟಿ ಮಾಡಿದೆ. ಸಿಎಂ ಸೂಚನೆ ನಡುವೆಯೂ ಅಧಿಕಾರಿಗಳ ನಿರ್ಲಕ್ಷೃದಿಂದ ಆತ್ಮಹತ್ಯೆ ನಡೆದಿದೆ. ಸಕಾಲಕ್ಕೆ ಅಧಿಕಾರಿಗಳು ವರದಿ ನೀಡಿದ್ದಲ್ಲಿ ಕೂಡಲೇ ಆತ್ಮಹತ್ಯೆ ತಡೆಯಬಹುದಾಗಿತ್ತು. ಈ ನಡುವೆ ತೋಟಗಾರಿಕೆ ಸಚಿವ ಮನಗೊಳಿ ಹೇಳಿಕೆ ಸರಿಯಲ್ಲ. ಈ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಕೂಡಲೇ ವಿವರಣೆ ನೀಡಬೇಕು ಎಂದು ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಧ್ಯಮಗಳಿಗೆ ಇರುವ ಜವಾಬ್ದಾರಿ ನಮಗಿಲ್ಲ : ರೈತರ ಆತ್ಮಹತ್ಯೆ ವಿಚಾರದಲ್ಲಿ ಮಾಧ್ಯಮಗಳಿಗೆ ಇರುವ ಜವಾಬ್ದಾರಿ ನಮಗಿಲ್ಲ (ರಾಜಕಾರಣಿಗಳು). ಅನ್ನದಾತರ ಆತ್ಮಹತ್ಯೆ ವಿಚಾರ ಸಂಬಂಧ ಸರ್ಕಾರ ತನ್ನ ವೈಯಕ್ತಿಕ ಕೆಲಸ ಬಿಟ್ಟು ರೈತರ ನೆರವಿಗೆ ಧಾವಿಸಬೇಕು. ಮಾಧ್ಯಮಗಳ ಕೆಲ ಸಲಹೆಗಳನ್ನು ರಾಜಕಾರಣಿಗಳು ಪಡೆಯಬೇಕು. ಪ್ರಸ್ತುತ ರಾಜ್ಯದ ಜನರಿಗೆ ಒಳಿತು ಮಾಡುವ ಪರಿಸ್ಥಿತಿಯಿಲ್ಲದಿರುವುದು ಬೇಸರದ ಸಂಗತಿ ಎಂದ ಬಸವರಾಜ ಹೊರಟ್ಟಿ, ನಾನು ರಾಜಕಾರಣದಿಂದ ದೂರ ಇದ್ದೇನೆ. ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದರು.

ಸಚಿವ ಸ್ಥಾನಕ್ಕೆ ಆಸೆ ಪಟ್ಟಿಲ್ಲ. ನನಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವೆ. ನಾನು ಮಂತ್ರಿಯಾಗಬೇಕೆಂದು ಜನರಿಗೆ ಆಸೆ ಇತ್ತು. ಆದರೆ ವಿಧಾನ ಪರಿಷತ್ ಸಭಾಪತಿಯಾಗಿದ್ದೇನೆ. ನಾನು ಅಲ್ಲಿಯೂ ಸಾಕಾಗಿದ್ದೇನೆ, ಇಲ್ಲಿಯೂ ಸಾಕಾಗಿದ್ದೇನೆ.
– ಬಸವರಾಜ ಹೊರಟ್ಟಿ ಸಭಾಪತಿ, ವಿಧಾನ ಪರಿಷತ್