ಅಧಿಕಾರಿಗಳೇ ಹಳ್ಳಿಗೆ ಹೋಗಿ

ಹುಬ್ಬಳ್ಳಿ: ಅಧಿಕಾರಿಗಳು ಕಚೇರಿಗಳಲ್ಲಿ ಕೂರದೇ ಹಳ್ಳಿಗಳತ್ತ ಪ್ರವಾಸ ಕೈಗೊಂಡು, ಬರಗಾಲ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಸೂಚನೆ ನೀಡಿದರು.

ನಗರದಲ್ಲಿ ಮಂಗಳವಾರ ಬರಗಾಲ ನಿರ್ವಹಣೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಪ್ರವಾಸ ಕೈಗೊಳ್ಳದೇ ಹೋದರೆ ಬರಗಾಲ ಪರಿಸ್ಥಿತಿ ಅರಿಯುವುದು ಕಷ್ಟಕರ. ಬರಗಾಲ ಕಾಮಗಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸ್ಥಗಿತಗೊಂಡಿರುವ ಎಲ್ಲ ಶುದ್ಧ ನೀರಿನ ಘಟಕಗಳನ್ನು ಮೂರು ದಿನಗಳಲ್ಲಿ ಪುನರಾರಂಭಿಸಿ. ಅಗತ್ಯ ಇರುವಲ್ಲಿ ಬೋರ್​ವೆಲ್ ಕೊರೆಯಿಸಿ ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಹೆಚ್ಚು ನೀರಿರುವ ಖಾಸಗಿ ಬೋರ್​ವೆಲ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು, ನೀರು ಖರೀದಿಸುವಂತೆ ಕಳೆದ 4 ತಿಂಗಳುಗಳ ಹಿಂದೆಯೇ ಸೂಚನೆ ನೀಡಿದ್ದರೂ ಇದುವರೆಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

4 ದಿನಗಳಲ್ಲಿ ಬೋರ್​ವೆಲ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು, ನೀರು ಖರೀದಿಸಬೇಕು. ಇದಕ್ಕೆ ಬೇಕಾದ ಹಣವನ್ನು ಸರ್ಕಾರದಿಂದ ನೀಡಲಾಗುವುದು ಎಂದು ತಿಳಿಸಿದರು.

ಅಗತ್ಯಬಿದ್ದರೆ ಹುಬ್ಬಳ್ಳಿ-ಧಾರವಾಡ ಸೇರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಪೂರೈಸುವ ನೀರಿನ ಟ್ಯಾಂಕರ್​ಗಳ ಸಂಖ್ಯೆ ಹೆಚ್ಚಿಸಿ. ಜನಪ್ರತಿನಿಧಿಗಳು ನೀಡಿರುವ ಬೇಡಿಕೆಯನ್ನಾಧರಿಸಿ ಅಗತ್ಯ ಇರುವಲ್ಲಿ ತಕ್ಷಣ ಬೋರ್​ವೆಲ್ ಕೊರೆಯಿಸಿ ಎಂದರು.

ಸಮರ್ಪಕ ನೀರು ಪೂರೈಕೆಗೆ ಎಷ್ಟೇ ಹಣ ಖರ್ಚಾದರೂ ಸರ್ಕಾರ ನೀಡಲು ಸಿದ್ಧವಿದೆ. ಹಣದ ಕೊರತೆ ಎಂಬ ನೆಪವೊಡ್ಡಿ ನೀರು ಪೂರೈಕೆ ಸೇರಿ ಇನ್ನಿತರ ಬರಗಾಲ ಕಾಮಗಾರಿ ನಿರ್ಲಕ್ಷಿಸುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಡಿ ಎಂದು ಸೂಚಿಸಿದರು.

ಮಳೆಗಾಲ ಪ್ರಾರಂಭಗೊಳ್ಳುವ ಮುಂಚೆಯೇ ನಾಲಾ ಸ್ವಚ್ಛಗೊಳಿಸಿ. ಧರೆಗುರುಳುವ ಸ್ಥಿತಿಯಲ್ಲಿರುವ ಮರಗಳ ಕೊಂಬೆಗಳನ್ನು ಕತ್ತರಿಸಿ. ರಸ್ತೆ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಪಾಲಿಕೆಯಲ್ಲಿದ್ದ 26 ಕೋಟಿ ರೂ. ಬಳಸಿಕೊಂಡು ಮಲಪ್ರಭಾ ಜಲಾಶಯದಿಂದ ಹೆಚ್ಚುವರಿ ನೀರೆತ್ತಲು ಸರ್ಕಾರ ಒಂದು ವರ್ಷದ ಹಿಂದೆಯೇ ಅನುಮತಿ ನೀಡಿದ್ದರೆ ಈ ಸಮಯಕ್ಕೆ ನೀರಿನ ಸಮಸ್ಯೆ ಇರುತ್ತಿರಲಿಲ್ಲ ಎಂದು ಹೇಳಿದರು.

ಸಂಸದ ಪ್ರಲ್ಹಾದ ಜೋಶಿ, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಶ್ರೀನಿವಾಸ ಮಾನೆ, ಬಸವರಾಜ ಹೊರಟ್ಟಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಮತ್ತಿತರರಿದ್ದರು.

ಅವಸರ ತೋರಿದ ದೇಶಪಾಂಡೆ: ಅವಸರದಲ್ಲಿದ್ದಂತೆ ಕಂಡುಬಂದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ, ಕೇವಲ 45 ನಿಮಿಷಗಳಲ್ಲಿ ಬರಗಾಲ ನಿರ್ವಹಣೆ ಪರಿಶೀಲನಾ ಸಭೆ ಮುಗಿಸಿದರು. ಅವಸರದಲ್ಲಿಯೇ ಅಧಿಕಾರಿಗಳಿಂದ ಮಾಹಿತಿ ಪಡೆದು, ಬರಗಾಲ ನಿರ್ವಹಣೆಗೆ ಸಂಬಂಧಿಸಿದ ಸೂಚನೆ ನೀಡಿದರು. ಸಭೆಯ ಮಧ್ಯೆ ಹಲವಾರು ಬಾರಿ ಕೈಗಡಿಯಾರ ನೋಡಿಕೊಳ್ಳುತ್ತಿದ್ದರು. ಸಭೆಯಲ್ಲಿದ್ದ ಶಾಸಕರು, ಸಂಸದರು ಪ್ರಶ್ನೆಗಳನ್ನು ಕೇಳಲು ಯತ್ನಿಸಿದರೂ, ಅವರ ಪ್ರಶ್ನೆಗಳನ್ನು ಮೊಟಕುಗೊಳಿಸುತ್ತಿದ್ದರು.

ಹುಬ್ಬಳ್ಳಿಗೆ 40 ಎಂಎಲ್​ಡಿ ನೀರು ಪೂರೈಸುತ್ತಿದ್ದ ನೀರಸಾಗರ ಜಲಾಶಯದ ಜಲಾನಯನ ಪ್ರದೇಶದಿಂದ ನೀರು ಹರಿಯುವುದು ಸ್ಥಗಿತಗೊಂಡಿದ್ದರಿಂದ ಜಲಮಂಡಳಿ ಅಧಿಕಾರಿಗಳೊಂದಿಗೆ ಇನ್ನಿತರ ಅಧಿಕಾರಿಗಳು ಜಲಾನಯನ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು. ಜಲಾನಯನ ಪ್ರದೇಶ ಅತಿಕ್ರಮಣಗೊಂಡಲ್ಲಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು. ಜಿಲ್ಲಾಧಿಕಾರಿಯವರೂ ಸ್ಥಳಕ್ಕೆ ಭೇಟಿ ನೀಡಬೇಕು.
ಆರ್.ವಿ. ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ

Leave a Reply

Your email address will not be published. Required fields are marked *