ಅಧಿಕಾರಿಗಳಿಗೆ ಬರದ ದಿಗ್ದರ್ಶನ

ಗಜೇಂದ್ರಗಡ: ಲದ್ದಿ ಹುಳು ಬಾಧೆಗೆ ತುತ್ತಾದ ಮೆಕ್ಕೆಜೋಳ, ಚೋಟುದ್ದ ಬೆಳೆದ ಸೂರ್ಯಕಾಂತಿ, ಇದ್ದು ಇಲ್ಲದಂತಾದ ಉಳ್ಳಾಗಡ್ಡಿ, ಮೆಣಸಿನಕಾಯಿ, ಗಾಳಿಗೆ ಉದುರಿದ ಹತ್ತಿ ಹೂ, ಕೈಗೆಟುಕದ ತೊಗರಿ, ಒಣಗಿದ ಕೆರೆ, ಕೃಷಿಹೊಂಡ ಹಾಗೂ ಬೆಳೆ ವಿಮೆ ಕುರಿತು ರೈತರಿಗೆ ಮಾಹಿತಿಯನ್ನೇ ನೀಡದ ಅಧಿಕಾರಿಗಳು…

ಇದು ತಾಲೂಕಿನ ಸೂಡಿ, ಇಟಗಿ ಗ್ರಾಮಗಳಿಗೆ ಭಾನುವಾರ ಸಂಜೆ ಬರ ಅಧ್ಯಯನಕ್ಕೆ ಆಗಮಿಸಿದ್ದ ಕೇಂದ್ರ ತಂಡದ ಅಧಿಕಾರಿಗಳಿಗೆ ಬಿಸಿಲಿಗೆ ಕಾದ ಭೂಮಿ, ಒಣಗಿದ ಬೆಳೆ ಸಹಿತ ಬರದ ದಿಗ್ದರ್ಶನವಾಯಿತು. ಅಧಿಕಾರಿಗಳು ಹೋದಲ್ಲೆಲ್ಲ ರೈತರು ಒಣಗಿದ ಬೆಳೆ ತೋರಿಸಿ ಕಣ್ಣೀರಿಟ್ಟರು. ದಶಕದಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ, ಬೆಳೆ ನಾಶವಾಗಿದ್ದು, ಜಾನುವಾರು ಸಾಕುವುದು ಕಷ್ಟವಾಗಿದೆ. ಪರಿಸಿತ್ಥಿ ಹೀಗೆ ಮುಂದುವರಿದರೆ ನಾವು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

ಕೇಂದ್ರ ಕೋಳಿ ಸಾಕಾಣಿಕೆ ಅಭಿವೃದ್ಧಿ ಹಾಗೂ ತರಬೇತಿ ಸಂಸ್ಥೆ ನಿರ್ದೇಶಕ ಡಾ. ಮಹೇಶ ನೇತೃತ್ವದ ತಂಡದ ಸದಸ್ಯರು ನಿಗದಿಪಡಿಸಿದಂತೆ ಬೇವಿನಕಟ್ಟಿ ಕ್ರಾಸ್ ಬಳಿ ಸೂರ್ಯಕಾಂತಿ ಬೆಳೆ ಪರಿಶೀಲಿಸಬೇಕಿತ್ತು. ಸಮಯದ ಕೊರತೆ ನೀಡಿ ಸೂಡಿ ಗ್ರಾಮದ ರೈತ ಸುಶೀಲಮ್ಮ ಬಸಪ್ಪ ಹಾದಿಮನಿ ಅವರ 3 ಎಕರೆ ಹೊಲದಲ್ಲಿನ ಉಳ್ಳಾಗಡ್ಡಿ, ಮೆಣಸಿನಕಾಯಿ ಪರಿಶೀಲಿಸಿ ರೈತರೊಂದಿಗೆ ರ್ಚಚಿಸಿದರು. ಮಳೆಯಿಲ್ಲದೆ, ಉಳ್ಳಾಗಡ್ಡಿ ಚಿಕ್ಕದಿದೆ. ಬೆಳೆಗೆ ಮಾಡಿದ ಖರ್ಚು ಬಾರದಂತಾಗಿ ಸಾಲದಲ್ಲಿ ಸಿಲುಕಿದ್ದೇವೆ ಎಂದು ರೈತ ಮಂಜುನಾಥ ಅಲವತ್ತುಕೊಂಡರು.

ಇಟಗಿ ಗ್ರಾಮದ ರೈತ ಶರಣಪ್ಪ ಮೇಟಿ, ವಿಕ್ರಮ ರಾಜ್ ದೇಸಾಯಿ ಅವರ ಹೊಲದಲ್ಲಿನ ಸೂರ್ಯಕಾಂತಿ ಬೆಳೆ ಪರಿಶೀಲಿಸಿದರು. ರೈತ ಸಂಗನಗೌಡ ಮಾಲಿಪಾಟೀಲ ಮಾತನಾಡಿ, 2016ರಿಂದ ಇಟಗಿಗೆ ಬೆಳೆ ಹಾನಿ ಪರಿಹಾರ ಬಂದಿಲ್ಲ. ಕಾಲುವೆ ನಿರ್ವಿುಸಿ 8 ವರ್ಷವಾದರೂ ನೀರು ಬಂದಿಲ್ಲ. ನೀವು ಬಂದಿರೋದು ಮುಂಗಾರು ಬೆಳೆ ಹಾನಿ ಸಮೀಕ್ಷೆಗೆ, ಆ ಪೈರು ಜೂನ್​ದಿಂದ ಆಗಸ್ಟ್​ವರೆಗೆ ಇರುತ್ತದೆ. ನೀವು ಈಗ ಬಂದಿದ್ದೀರಿ. ಇದು ಹಿಂಗಾರು ಬೆಳೆ. ಈ ಭಾಗದಲ್ಲಿ ಮುಂಗಾರು, ಹಿಂಗಾರು ಕೈಕೊಟ್ಟಿರುವ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿ. ಇಲ್ಲಿನ ಬ್ಯಾಂಕ್ ಅಧಿಕಾರಿಗಳು ಬೆಳೆ ವಿಮೆ ಕಂತು ತುಂಬಿಸಿಕೊಳ್ಳಲು ಸತಾಯಿಸುತ್ತಾರೆ ಎಂದರು.

ಸಂಸದ ಶಿವಕುಮಾರ ಉದಾಸಿ ಪ್ರತಿಕ್ರಿಯಿಸಿ, ಬೆಳೆ ಹಾನಿ ಪರಿಹಾರ ಬಾರದಿರುವ ಕುರಿತು ಅಧಿಕಾರಿಗಳಿಗೆ ಅಂಕಿ-ಅಂಶಗಳ ಸಹಿತ ಮಾಹಿತಿ ಕಳಿಸಿದ್ದೇನೆ. ಶೀಘ್ರದಲ್ಲೇ ಪರಿಹಾರವಾಗಲಿದೆ. ಈ ಸಮಸ್ಯೆಗಳು ಬರ ಅಧ್ಯಯನ ತಂಡದ ವ್ಯಾಪ್ತಿಗೆ ಬರುವುದಿಲ್ಲ. ನಾನು ಪರಿಹರಿಸುತ್ತೇನೆ ಎಂದರು.

ನಂತರ ಅಧಿಕಾರಿಗಳುರೋಣ ತಾಲೂಕಿನ ಹೊಸಳ್ಳಿ ಗ್ರಾಮದ ಶೇಖರಪ್ಪ ಬಸಪ್ಪ ಅಬ್ಬಿಗೇರಿ ಅವರ ಹೊಲದಲ್ಲಿನ ಉಳ್ಳಾಗಡ್ಡಿ ಬೆಳೆ ಸಮೀಕ್ಷೆ ನಡೆಸಿದರು.

ಸಮೀಕ್ಷೆಯಲ್ಲಿ ಸಿಡಬ್ಲುಸಿ ನಿರ್ದೇಶಕ ಡಾ. ಓ.ಆರ್. ರೆಡ್ಡಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ನೀತಾ ತೆಹಲ್ಲ್ಯಾ, ಶಾಸಕ ಕಳಕಪ್ಪ ಬಂಡಿ, ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಕೃಷಿ ಜಂಟಿ ನಿರ್ದೇಶಕ ಬಾಲರೆಡ್ಡಿ, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ, ಅಂಕಿ ಸಂಖ್ಯಾಧಿಕಾರಿ ಕಂಬಾಳಿಮಠ, ರೋಣ ತಹಸೀಲ್ದಾರ್ ಶಕುಂತಲಾ ಚೌಗಲೆ, ಕಂದಾಯ ನಿರೀಕ್ಷಕ ವೀರಣ್ಣ ಅಡಗಿತ್ತಿ , ಇತರರಿದ್ದರು.

ರೈತರಿಗಿಲ್ಲ ಅನುಕೂಲ

ಪ್ರತಿ ವರ್ಷ ಬರಗಾಲದಿಂದ ರೈತರು ಮೇವು, ನೀರಿಗಾಗಿ ಪರದಾಡುವುದು ಹೊಸದಲ್ಲ. 7 ವರ್ಷದಿಂದ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಅಧ್ಯಯನ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಈ ತಂಡಕ್ಕೆ ಜಿಲ್ಲಾಡಳಿತ ಸಾರ್ವಜನಿಕರ ಹಣ ಪೋಲಾಗಿಸುತ್ತದೆ ಹೊರತು ರೈತರಿಗೆ ಅನುಕೂಲವಾಗಿಲ್ಲ. ಭರವಸೆ ಈಡೇರಿಸಲು ಬರ ಅಧ್ಯಯನ ತಂಡ ಮುಂದಾಗಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡುಬಂತು.

ರಾಜ್ಯದ 100 ತಾಲೂಕು ಬರಪೀಡಿತ ಎಂದು ಘೊಷಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಅಕೊ್ಟೕಬರ್​ನಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಿ ಎನ್​ಡಿಆರ್​ಎಫ್ ನಿಧಿಯಿಂದ 2,434 ಕೋಟಿ ರೂ. ಪರಿಹಾರ ಒದಗಿಸಲು ಕೋರಿತ್ತು. ಈ ಹಿನ್ನೆಲೆಯಲ್ಲಿ ಬರ ಅಧ್ಯಯನ ತಂಡ ಕ್ಷೇತ್ರ ಭೇಟಿ, ಜಿಲ್ಲಾಡಳಿತದಿಂದ ಮಾಹಿತಿ ಸಂಗ್ರಹಿಸಿದೆ. ನ. 19ರವರೆಗೆ ಬರಪೀಡಿತ ಜಿಲ್ಲೆಗಳ ಬೆಳೆ ಪರಿಶೀಲಿಸಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ.

ಡಾ. ಮಹೇಶ, ಕೇಂದ್ರ ಕೋಳಿ ಸಾಕಾಣಿಕೆ ಅಭಿವೃದ್ಧಿ ಹಾಗೂ ತರಬೇತಿ ಸಂಸ್ಥೆ ನಿರ್ದೇಶಕ

ಬರ ಅಧ್ಯಯನ ತಂಡ ಬಂದು ಜನರಲ್ಲಿ ನಿರೀಕ್ಷೆ ಮೂಡಿಸುತ್ತದೆ. ಭರವಸೆ ಈಡೇರಿಸುವುದಿಲ್ಲ. ಇದರಿಂದ ಜನರ ಹಣ ಖರ್ಚಾಗುತ್ತದೆ. ಈ ಪರಿಸ್ಥಿತಿ ಮುಂದುವರಿದರೆ ತಂಡದ ಘನತೆಗೆ ಧಕ್ಕೆಯಾಗಲಿದೆ. ಬರ ಅಧ್ಯಯನ ಕಣ್ಣೊರೆಸುವ ತಂತ್ರ.

ಮಂಜುಳಾ ರೇವಡಿ, ಸಮಾಜ ಸೇವಕಿ

ಇಟಗಿ ಗ್ರಾಮದ ಕೆರೆಗೆ ನೀರು ತುಂಬಿಸುವ ಕಾಲುವೆಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ 113 ಕಾರ್ವಿುಕರಿಂದ ಹೂಳೆತ್ತುವುದನ್ನು ಪರಿಶೀಲಿಸಲು ಬರ ಅಧ್ಯಯನ ತಂಡ ಬರುತ್ತದೆ. ಅಲ್ಲೇ ಅಹವಾಲು ಸ್ವೀಕರಿಸುತ್ತಾರೆಂದು ಗ್ರಾಮಸ್ಥರಿಗೆ ಸದಸ್ಯ ಉಮೇಶ ಮಲ್ಲಾಪೂರ ಹೇಳಿದ್ದರಿಂದ ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಕಾಯುತ್ತಿದ್ದರು. ಆದರೆ, ಅಧಿಕಾರಿಗಳು ಅಲ್ಲಿಗೆ ಬಾರದೆ ಹೊಸಳ್ಳಿಗೆ ತೆರಳಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ವಾರದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಕೆ

ರೋಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆಗಳು ಹಾನಿಯಾಗಿದ್ದನ್ನು ಪರಿಶೀಲಿಸಲಾಗಿದೆ. ಶೇ. 50ಕ್ಕಿಂತ ಹೆಚ್ಚು ಹಾನಿಯಾಗಿದೆ ಎಂದು ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ, ಕೇಂದ್ರ ಕುಕ್ಕುಟ ಅಭಿವೃದ್ಧಿ ಹಾಗೂ ತರಬೇತಿ ಸಂಸ್ಥೆ ನಿರ್ದೇಶಕ ಡಾ. ಮಹೇಶ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಾಗದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರು ಮಳೆಯಾಧಾರಿತ ಬೆಳೆ ಬೆಳೆಯುವುದನ್ನು ಕಡಿಮೆ ಮಾಡಬೇಕಿದೆ. ಹೊಸ ತಂತ್ರಜ್ಞಾನ ಬಳಸಿ ಕಡಿಮೆ ನೀರು ಉಪಯೋಗಿಸಿ ಹೆಚ್ಚಿನ ಬೆಳೆ ಬೆಳೆಯಲು ರೈತರು ತಯಾರಿ ಮಾಡಿಕೊಳ್ಳಬೇಕು. ಕೆಲವೆಡೆ ಬೃಹತ್ ಕೃಷಿಹೊಂಡ ಹೊಂದಿದ ರೈತರು ವರ್ಷದಲ್ಲಿ ಎರಡ್ಮೂರು ಬೆಳೆಗಳನ್ನು ತೆಗೆದಿದ್ದಾರೆ. ಇಂತಹ ಕೆಲಸಕ್ಕೆ ರೈತರು ಮುಂದಾಗಬೇಕಿದೆ ಎಂದರು.

10 ಜನರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡವು 4 ತಂಡಗಳಾಗಿ ವಿವಿಧ ಜಿಲ್ಲೆಗಳಲ್ಲಿ ( ಕೃಷಿ, ತೊಟಗಾರಿಕೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ, ಜನ-ಜಾನುವಾರು ಕುಡಿಯುವ ನೀರು) ಬರ ಅಧ್ಯಯನ ಕಾರ್ಯ ಪೂರ್ಣಗೊಳಿಸಲಾಗಿದೆ. ನಾಲ್ಕು ತಂಡಗಳು ನ. 19ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ನಡೆಸಿ ರ್ಚಚಿಸಿ ಒಂದು ವಾರದಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದರು