ಅಧಿಕಾರಕ್ಕಾಗಿ ಅಭಿವೃದ್ಧಿ ಕಡೆಗಣನೆ

ಕೆ.ಆರ್.ಪೇಟೆ: ಪಟ್ಟಣದ ಪುರಸಭೆಯಲ್ಲಿ 5 ವರ್ಷ ಅಭಿವೃದ್ಧಿಗಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ಹೋರಾಟ ನಡೆದು, 2 ವರ್ಷ ಅಧ್ಯಕ್ಷ ಹುದ್ದೆ ಅಧಿಕಾರಿಗಳ ಕೈ ಸೇರಿತ್ತು. ಪರಿಣಾಮ ಸಾರ್ವಜನಿಕರು ಕೆಲಸಕ್ಕಾಗಿ ಪರದಾಡಬೇಕಾಯಿತು. ಮೂಲಸೌಕರ್ಯಗಳಾದ ರಸ್ತೆ, ಒಳಚರಂಡಿ, ಕುಡಿಯುವ ನೀರಿನ ಸೌಲಭ್ಯಗಳು ಮರೀಚಿಕೆಯಾದವು.

ಹೌದು…40 ಸಾವಿರಕ್ಕೂ ಹೆಚ್ಚು ಮತದಾರರು ಇರುವ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, 13 ಕಾಂಗ್ರೆಸ್, 6 ಜೆಡಿಎಸ್, 5 ಬಿಜೆಪಿ ಸದಸ್ಯರಿದ್ದರು. ಸ್ಪಷ್ಟ ಬಹುಮತವಿದ್ದ ‘ಕೈ’ಗೆ ಅಧಿಕಾರ ಒಲಿದು ಮೊದಲ ಅವಧಿಯಲ್ಲಿ ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್‌ಖಾನ್ ಸಹೋದರ ಗೌಸ್‌ಖಾನ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರಿ ಪುತ್ರ ಚಕ್ರಪಾಣಿ ಮತ್ತು ಹೊಸಹೊಳಲು ಅಶೋಕ್ 30 ತಿಂಗಳ ಅಧಿಕಾರ ನಡೆಸಿದರು.

ಎರಡನೇ ಅವಧಿಗೂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಆಗ ರತ್ನಮ್ಮ ಎಂಬುವರು ಅಂದಿನ ಸಿಎಂ ಬಳಿಗೆ ತೆರಳಿ ಬಿಸಿಎಂ(ಎ)ಗೆ ಬದಲಿಸಿಕೊಂಡು ಬಂದಿದ್ದರು. ಇದನ್ನು ಪ್ರಶ್ನಿಸಿ ಅವರದೇ ಪಕ್ಷದ ಸದಸ್ಯ ಡಿ.ಪ್ರೇಮಕುಮಾರ್ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದರು. ಮತ್ತೆ ಇದನ್ನು ಪ್ರಶ್ನಿಸಿ ಜೆಡಿಎಸ್ ಸದಸ್ಯ ಬಸ್ ಸಂತೋಷ್ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದರು. ಪರಿಣಾಮ 2 ವರ್ಷ ಅಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು. 6 ತಿಂಗಳ ಹಿಂದೆ ಬಸ್ ಸಂತೋಷ್ ಪ್ರಕರಣ ವಾಪಸ್ ತೆಗೆದುಕೊಂಡಿದ್ದರಿಂದ ರತ್ನಮ್ಮ ಅಧ್ಯಕ್ಷರಾಗಿದ್ದರು.

5 ವರ್ಷದ ಬಹುತೇಕ ಸಮಯ ಸದಸ್ಯರನ್ನು ಕ್ಯಾರೆ ಎನ್ನದ ನೌಕರರು ಸಾರ್ವಜನಿಕರ ಕೆಲಸ ಮಾಡಿಕೊಡಲು ಅಲೆದಾಡಿಸಿದರು ಎಂಬ ಆಕ್ರೋಶ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ಉಪವಿಭಾಗಾಧಿಕಾರಿಗೆ ಅಧಿಕಾರ: ಅಧ್ಯಕ್ಷ ಸ್ಥಾನದ ಗೊಂದಲ ಕೋರ್ಟ್ ಮೆಟ್ಟಿಲೇರಿದ್ದರಿಂದ ಪಾಂಡವಪುರದ ಉಪವಿಭಾಗಾಧಿಕಾರಿ ಆಡಳಿತಾಧಿಕಾರಿ ಆಗಿದ್ದರು. ಆದರೆ ನಿಗದಿತ ಸಮಯಕ್ಕೆ ಸಭೆಗಳನ್ನು ಕರೆದು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ. ಇದು ಸದಸ್ಯರ ಆಕ್ರೋಶಕ್ಕೂ ಕಾರಣವಾಗಿ ಹಲವರು ಬಾರಿ ಪ್ರತಿಭಟನೆ ಮಾಡಿದ್ದರು. ಶಾಸಕ ನಾರಾಯಣಗೌಡ ಸಹ ಪುರಸಭೆ ಅಧಿಕಾರಿಗಳ ವಿರುದ್ಧ ಸದಾ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಕೆಲಸಗಳನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪಿಸುತ್ತಿದ್ದರು.

ರಾಜಕೀಯ ಪ್ರತಿಷ್ಠೆಗೆ ಅಧಿಕಾರಿಗಳ ಪರದಾಟ: ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದದ್ದು ಹಾಗೂ ಶಾಸಕರು ಜೆಡಿಎಸ್‌ನವರಾಗಿದ್ದು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಮುಖ್ಯಾಧಿಕಾರಿ ಯತೀಶ್ ಅವರನ್ನು ಇದೇ ಕಾರಣಕ್ಕೆ ಶಾಸಕರು ವರ್ಗಾವಣೆ ಮಾಡಿಸಿದರು. ಆಗ ಕೆ.ಬಿ.ಚಂದ್ರಶೇಖರ್ ಅಂದಿನ ಸಿಎಂ ಮೇಲೆ ಒತ್ತಡ ತಂದು ಮೂರ್ತಿ ಎಂಬುವರನ್ನು ನೇಮಕ ಮಾಡಿಸಿದರು.

ಪಟ್ಟಣದ ಕಾರ್ ಸ್ಟ್ಯಾಂಡಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಶಾಸಕರು ವಿರೋಧ ವ್ಯಕ್ತಪಡಿಸಿ, ಅಧಿಕಾರಿಗಳ ಬೆವರಿಳಿಸಿದ್ದರು. ಆದರೆ ಮಾಜಿ ಶಾಸಕ ಅದೇ ಜಾಗದಲ್ಲಿ ಕ್ಯಾಂಟೀನ್ ನಿರ್ಮಾಣ ಮಾಡಿಸಿದರು. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಶಾಸಕರು ಮುಖ್ಯಾಧಿಕಾರಿ ಮೂರ್ತಿ ಅವರನ್ನು ವರ್ಗಾವಣೆ ಮಾಡಿಸಿದಾಗ ಅದೇ ಕಚೇರಿಯಲ್ಲಿ ಮ್ಯಾನೇಜರ್ ಆಗಿದ್ದ ಸತೀಶ್ ಅವರನ್ನು ಮುಖ್ಯಾಧಿಕಾರಿಯಾಗಿ ಸರ್ಕಾರ ನೇಮಿಸಿತು. ಆದರೆ ಮೂರ್ತಿ ಅವರಿಗೆ ಸ್ಥಳ ತೋರದ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಿ ಮತ್ತೆ ಮುಖ್ಯಾಧಿಕಾರಿಯಾಗಿ ಬಂದು ಕೂತರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರ ವರ್ಗಾವಣೆಯಾಗಿದೆ. ಈಗ ಅಶೋಕ್ ಎಂಬುವರು ಪ್ರಭಾರ ಸಿಒ ಆಗಿದ್ದಾರೆ.

ಒಳ ಚರಂಡಿ ಅವ್ಯವಸ್ಥೆ: 5 ವರ್ಷಗಳ ಹಿಂದೆ ಆರಂಭವಾದ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ತ್ಯಾಜ್ಯ ನೀರಿನ ಶೇಖರಣೆ, ಸಂಸ್ಕರಣೆಗೆ ಉದ್ದೇಶಿಸಿದ ಜಾಗದ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿದೆ. ಆದರೆ ಸಾರ್ವಜನಿಕರು ಅನಧಿಕೃತವಾಗಿ ಒಳ ಚರಂಡಿಗೆ ಸಂಪರ್ಕ ಕಲ್ಪಿಸಿದ್ದಾರೆ.

ತ್ಯಾಜ್ಯ ನೀರು ಪೈಪ್‌ಲೈನ್ ತುಂಬಿ ಮ್ಯಾನ್‌ಹೋಲ್‌ಗಳಲ್ಲಿ ಪ್ರತಿದಿನ ಉಕ್ಕಿ ಹರಿಯುತ್ತಿದೆ. ಅದನ್ನು ದುರಸ್ತಿಗೊಳಿಸುವ ಕೆಲಸ ನಡೆಯುತ್ತಿಲ್ಲ. ಸದ್ಯ ಒಳಚರಂಡಿ ಕಾಮಗಾರಿ ಪುನರಾರಂಭವಾಗಿದ್ದು, ಆಮೆಗತಿಯಲ್ಲಿ ಸಾಗುತ್ತಿದೆ. ಪ್ರತಿಯೊಂದು ವಾರ್ಡ್‌ಗಳಲ್ಲಿಯೂ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಮನೆಗಳಲ್ಲಿನ ತ್ಯಾಜ್ಯವನ್ನು ಅಕ್ಕಪಕ್ಕದಲ್ಲಿರುವ ಖಾಲಿ ನಿವೇಶನಗಳಲ್ಲಿ ಹಾಕುತ್ತಿರುವುದರಿಂದ ಹಲವು ವಾರ್ಡ್‌ಗಳು ಗಬ್ಬೆದ್ದು ನಾರುತ್ತಿವೆ.

Leave a Reply

Your email address will not be published. Required fields are marked *