ಅದ್ದೂರಿ ಸಕಲೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಸಕಲೇಶಪುರ: ಪುಷ್ಪಾಲಂಕೃತ ಸಕಲೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಅದ್ದೂರಿಯಾಗಿ ನೆರವೇರಿತು.

ಮಧ್ಯಾಹ್ನ 12 ಗಂಟೆಗೆ ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವ ಮಾರ್ಗದುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿ ಹಣ್ಣು-ಧವನ ಎಸೆದು ಭಕ್ತಿ ಸಮರ್ಪಿಸಿದರು.

ಚಿಕ್ಕಮಗಳೂರಿನ ವೀರಗಾಸೆ, ಸಾಲಿಗ್ರಾಮದ ಡ್ರಮ್, ನಂದಿಧ್ವಜ ಸೇರಿದಂತೆ ಜಾನಪದ ಕಲಾತಂಡಗಳು ನೆರೆಸಿದ್ದವರ ಗಮನ ಸೆಳೆಯಿತು. ವಾದ್ಯಗೋಷ್ಠಿಗೆ ಯುವಕರಾದಿಯಾಗಿ ಎಲ್ಲರು ಕುಣಿದು ಕುಪ್ಪಳಿಸಿದರು.

ಗುತ್ತಿಗೆದಾರರ ಸಂಘ, ಮಹರ್ಷಿ ವಾಲ್ಮೀಕಿ ಸಂಘ, ಜೈಭುವನೇಶ್ವರಿ ಸಂಘ, ಮಲೆನಾಡು ವೀರಶೈವ ಸಂಘ ಸೇರಿದಂತೆ ಹತ್ತಾರು ಸಂಘಗಳು ಐಸ್‌ಕ್ರೀಂ, ಕಲ್ಲಂಗಡಿ ಹಣ್ಣಿನ ಜ್ಯೂಸ್, ಕೆಸರಿಬಾತ್, ಮೊಸರನ್ನ, ಪುಳಿಯೊಗರೆ ಸೇರಿದಂತೆ ಹತ್ತಾರು ಬಗೆಯ ಪ್ರಸಾದ ವಿತರಿಸಿದರು.

ಮುಖ್ಯ ರಸ್ತೆಯಲ್ಲಿ ರಥೋತ್ಸವ ಹಮ್ಮಿಕೊಂಡಿದ್ದರಿಂದ ಬೆಂಗಳೂರು-ಮಂಗಳೂರು ರಸ್ತೆ ಸಂಚಾರದ ಮಾರ್ಗವನ್ನು ಬದಲಿಸಲಾಗಿತ್ತು. ಜಾತ್ರಾ ಸಮಿತಿ ಅಧ್ಯಕ್ಷ ಬ್ಯಾಕರವಳ್ಳಿ ಜಯಣ್ಣ,ನಂದಿಕೃಪರಾಜು, ಟಿಂಬರ್ ಸುರೇಶ್, ಸುರೇಶ್ ಆಳ್ವ, ಅವಿನಾಶ್ ಸೇರಿದಂತೆ ಇತರ ಮುಖಂಡರು ಭಾಗವಹಿಸಿದ್ದರು.