ಅದ್ದೂರಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ

ತುಮಕೂರು: ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು. ಹನುಮ ಜಯಂತಿ ಪ್ರಯುಕ್ತ ನಡೆದ ರಥೋತ್ಸವದಲ್ಲಿ ದೇವರ ಮೆರವಣಿಗೆ ನಡೆಯಿತು. ಅಲಂಕರಿಸಿದ ರಥದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದ ಬಳಿಕ ಬ್ರಹ್ಮರಥೋತ್ಸವ ಆರಂಭಗೊಂಡಿತು.

ಮಧ್ಯಾಹ್ನ ಸರ್ಕಾರದ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಅಭಿಷೇಕ, ಯಾತ್ರಾದಾನ, ಮಂಟಪಪಡಿ ಮತ್ತಿತರ ಪೂಜಾ ಕೈಂಕರ್ಯ ನಡೆದವು.

ಸಾವಿರಾರು ಭಕ್ತರು ರಥ ಎಳೆದು ಧನ್ಯಾತಾಭಾವ ಮೆರೆದರು. ಬಾಳೆಹಣ್ಣು, ಧವನ ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವಕ್ಕೆ ನಾಡಿನೆಲ್ಲೆಡೆಯಿಂದ ಸಾವಿರಾರು ಜನರು ಆಗಮಿಸಿದ್ದರು. ಹೊರಗಿನಿಂದ ಬರುವವರಿಗೆ ಅನನುಕೂಲವಾಗದಂತೆ ಜಿಲ್ಲಾಡಳಿತ, ದೇವಾಲಯ ವ್ಯವಸ್ಥಾಪನಾ ಸಮಿತಿ ಎಲ್ಲ ರೀತಿಯ ವ್ಯವಸ್ಥೆ ಮಾಡಿತ್ತು.

ಪಾನಕ, ಕೋಸಂಬರಿ ವಿತರಣೆ: ಜಾತ್ರೆ ವಿಶೇಷವಾಗಿ ಶೆಟ್ಟಿಹಳ್ಳಿ ಗ್ರಾಮ ಹಾಗೂ ಹೊರವರ್ತಲ ರಸ್ತೆಯಲ್ಲಿ ಅಂಜನೇಯಸ್ವಾಮಿ ಭಕ್ತರು ಶಾಮಿಯಾನ ಹಾಕಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು. ಉರಿ ಬಿಸಿಲು ಲೆಕ್ಕಿಸದೆ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರು ಪಾನಕ ಕುಡಿದು ದಣಿವಾರಿಸಿಕೊಂಡರು.

Leave a Reply

Your email address will not be published. Required fields are marked *