ಅದೃಷ್ಟವಿದ್ದಿದ್ದರೆ ಅವರು ಕನ್ನಡದ ಬಾಲಚಂದರ್ ಆಗಬೇಕಾಗಿತ್ತು!

| ಗಣೇಶ್ ಕಾಸರಗೋಡು

‘ಗೌರಿ’ ಚಿತ್ರದ ‘ಇವಳು ಯಾರು ಬಲ್ಲೆಯೇನು..’, ‘ಮಾವನ ಮಗಳು’ ಚಿತ್ರದ ‘ನಾನೇ ವೀಣೆ ನೀನೇ ತಂತಿ..’, ‘ಸೋತು ಗೆದ್ದವಳು’ ಚಿತ್ರದ ‘ಕೆಂಪು ಗುಲಾಬಿಯ ಚೆಂದುಟಿ ಚೆಲುವೆ..’ ಎಂದೆಲ್ಲ ಹಾಡುಗಳನ್ನು ಕೇಳಿದಾಗ ಗಾಯಕ ಪಿ.ಬಿ. ಶ್ರೀನಿವಾಸ್ ನೆನಪಾಗುವುದು ಸಹಜ. ಆದರೆ ನೆನಪಾಗಲೇ ಬೇಕಾದ ನಿರ್ದೇಶಕರ ಹೆಸರು ನೆನಪಿನಿಂದ ಮರೆಯಾಗಿ ಬಿಡುತ್ತದೆ! ಎಂಥ ದುರಂತ ನೋಡಿ? ಅವರ ಹೆಸರು ಎಸ್.ಕೆ.ಎ. ಚಾರಿ. ಪೂರ್ತಿ ಹೆಸರು; ಸರಗೂರು ಕೆ.ಅನಂತಾಚಾರಿ! ಕರ್ನಾಟಕದ ಸರಗೂರಿನವರಾದ ಅವರು ಯೋಗ್ಯತೆಗೆ ತಕ್ಕ ಖ್ಯಾತಿ ಪಡೆದಿದ್ದರೆ ತಮಿಳಿನ ಕೆ. ಬಾಲಚಂದರ್ ಲೆವೆಲ್​ನಲ್ಲಿ ಮಿಂಚಬೇಕಾಗಿತ್ತು! ಆದರೆ, ಮಹಾ ದುರದೃಷ್ಟವಂತ. ದಿವಂಗತ ಜಯಲಲಿತಾ ನಟಿಸಿದ ‘ಮಹಡಿ ಮನೆ’ ಮತ್ತು ‘ಮನೆ ಅಳಿಯ’ ಚಿತ್ರಗಳನ್ನು ನಿರ್ದೇಶಿಸಿದವರು ಅವರೇ. ಅಷ್ಟೇ ಯಾಕೆ, ‘ಮಹಡಿ ಮನೆ’ ಚಿತ್ರವನ್ನು ತಮಿಳಿಗೆ ‘ಮಾಡಿವೀಟ್ಟು ಮಾಪಿಳ್ಳೆ ೖ’ ಹೆಸರಿನಲ್ಲಿ ರಿಮೇಕ್ ಮಾಡಿ ಎಂ.ಜಿ. ರಾಮಚಂದ್ರನ್ ಮತ್ತು ಜಯಲಲಿತಾ ಅವರಿಗೆ ಅವಕಾಶ ಮಾಡಿಕೊಟ್ಟ ಪ್ರಚಂಡ ನಿರ್ದೇಶಕ ಇದೇ ಎಸ್.ಕೆ.ಎ. ಚಾರಿ!

ಮೇಲಿನ ಎಲ್ಲ ಹಾಡುಗಳನ್ನು ಕೇಳಿದಾಗ ಪಿ.ಬಿ. ಶ್ರೀನಿವಾಸ್ ಜತೆ ನಮ್ಮ ರಾಷ್ಟ್ರಕವಿ ಕುವೆಂಪು ಕೂಡ ನೆನಪಾಗಬಹುದು. ಏಕೆಂದರೆ ಈ ಹಾಡುಗಳನ್ನು ಸಮರ್ಥವಾಗಿ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ತಮ್ಮ ಚಿತ್ರಗಳಿಗೆ ಅಳವಡಿಸಿಕೊಂಡವರು ಇದೇ ಎಸ್.ಕೆ.ಎ. ಚಾರಿ! ಅವರು ಈಗಿಲ್ಲದಿರಬಹುದು. ಆದರೆ ಅವರು ಬಿಟ್ಟು ಹೋದ ಗೀತೆಗಳ ಮಾಧುರ್ಯ ಚಿರನೂತನ. ಇಂಥ ಒಬ್ಬ ಸಹೃದಯೀ ನಿರ್ದೇಶಕನ ಬಗ್ಗೆ ಹೆಚ್ಚಿನ ವಿವರ ತಿಳಿಯುವ ಆಸಕ್ತಿಯಿಂದ ಅವರ ಬಾಳಸಂಗಾತಿ ರತ್ನಾಚಾರಿಯವರನ್ನು ಸಂರ್ಪಸಿದಾಗ ಕೆಲವೊಂದು ಅಚ್ಚರಿಯ, ಕುತೂಹಲಭರಿತ ವಿವರಗಳು ಸಿಕ್ಕವು. ಇದನ್ನು ರತ್ನಾಚಾರಿಯವರ ಮಾತಿನಲ್ಲೇ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ;

‘ರಜನಿಕಾಂತ್ ಅವರನ್ನು ಮೊಟ್ಟಮೊದಲು ನಾಯಕನನ್ನಾಗಿ ಪರಿಚಯಿಸಿದ ‘ಕುಂಕುಮ ರಕ್ಷೆ’ ಚಿತ್ರವನ್ನು ನಿರ್ದೇಶಿಸಿದವರು ನಮ್ಮವರೇ. ‘ಮಧುರ ಮಿಲನ’ ಚಿತ್ರದ ಮೂಲಕ ಶ್ರೀನಾಥ್​ಗೆ

ಹೀರೋ ಪಟ್ಟ ನೀಡಿದವರೂ ನಮ್ಮವರೇ. ಆವರೆಗೆ ನಾರಾಯಣಸ್ವಾಮಿ ಆಗಿದ್ದವನಿಗೆ ಶ್ರೀನಾಥ್ ಹೆಸರು ನೀಡಿ ಆಶೀರ್ವದಿಸಿದವರೂ ನಮ್ಮವರೇ. ‘ಗೌರಿ’ ಚಿತ್ರದಲ್ಲಿ ರಾಜಕುಮಾರ್ – ‘ಸಾಹುಕಾರ್’ ಜಾನಕಿ ಜೋಡಿಯನ್ನು ಪರಿಚಯಿಸಿದವರೂ ನಮ್ಮವರೇ. ಹಾಗೆಯೇ, ‘ಮಧು ಮಾಲತಿ’ ಚಿತ್ರದಲ್ಲಿ ರಾಜಕುಮಾರ್- ಉದಯಕುಮಾರ್-ಕಲ್ಯಾಣಕುಮಾರ್ ಅವರನ್ನು ಜತೆ ಸೇರಿಸಿದ್ದೂ ನಮ್ಮವರೇ. ‘ಸೋತು ಗೆದ್ದವಳು’ ಚಿತ್ರದಲ್ಲಿ ಗಂಗಾಧರ್-ಕಲ್ಪನಾ ಜೋಡಿಯನ್ನು ಪರಿಚಯಿಸಿದವರೂ ನಮ್ಮವರೇ.. ಇಂಥ ನನ್ನ ಯಜಮಾನರು 2003ನೇ ಇಸವಿಯ ಏಪ್ರಿಲ್ 7ರಂದು ತೀರಿಕೊಂಡರು. ಬದುಕಿದ್ದಾಗ ಇಂದ್ರ-ಚಂದ್ರ ಎಂದು ಹೊಗಳುತ್ತಿದ್ದವರೆಲ್ಲ ತೀರಿಕೊಂಡ ಮೇಲೆ ಎಲ್ಲಿ ಮಾಯವಾದರೋ ಗೊತ್ತಿಲ್ಲ?

ದುರದೃಷ್ಟದ ವಿಚಾರವೆಂದರೆ ಅವರ ಬದುಕಿನ ಎರಡು ಮಹತ್ವಾಕಾಂಕ್ಷೆಗಳು ಈಡೇರದೆ ಹೋದವು. ಒಂದು, ಉಷಾಕಿರಣ್ ಮೂವೀಸ್ ರಾಮೋಜಿರಾವ್ ಅವರಿಗಾಗಿ ನಮ್ಮ ಯಜಮಾನರು ಪುರಂದರದಾಸರ ಬದುಕಿನ ಬಗ್ಗೆ ಧಾರಾವಾಹಿಯೊಂದನ್ನು ನಿರ್ದೇಶಿಸಿ ಕೊಡಬೇಕಾಗಿತ್ತು. ಇದಕ್ಕಾಗಿ ನಮ್ಮವರನ್ನು ರಾಮೋಜಿರಾಯರು ಹೈದರಾ ಬಾದ್​ಗೆ ಕರೆಸಿಕೊಂಡಿದ್ದರು. ಸ್ಕ್ರಿಪ್ಟ್ ಕೆಲಸ, ಪಾತ್ರಧಾರಿಗಳ ಸಂದರ್ಶನದ ಕೆಲಸ ಎಲ್ಲವೂ ಮುಗಿದಿತ್ತು. ಆದರೆ ದುರದೃಷ್ಟವಶಾತ್ ಅವರಿಗೆ ಕಾಲು ನೋವು ಬಂದು ಬಿಟ್ಟಿತು. ನಿಲ್ಲಲು, ಕೂರಲೂ ಆಗದಷ್ಟು ನೋವು. ಬೇರೆ ದಾರಿಯಿಲ್ಲದೆ ಹೈದರಾಬಾದ್​ನಿಂದ ಚೆನ್ನೈಗೆ ಬಂದುಬಿಟ್ಟರು. ಕೆಲಸ ಅರ್ಧದಲ್ಲೇ ನಿಂತುಹೋಯಿತು. ಇನ್ನೊಂದು, ನಮ್ಮವರ ಮತ್ತೊಂದು ಆಸೆಯೆಂದರೆ ಅಂಬರೀಷ್ ನಾಯಕತ್ವದ ಚಿತ್ರವೊಂದನ್ನು ನಿರ್ದೇಶಿಸುವುದು. ಈ ಚಿತ್ರಕ್ಕೆ ‘ನಾನ್ಯಾರೋ ನೀನ್ಯಾರೋ’ ಎಂಬ ಹೆಸರನ್ನಿಟ್ಟಿದ್ದರು. ಅರ್ಧ ಕೆಲಸ ಮುಗಿದಿತ್ತು. ದುರದೃಷ್ಟವಶಾತ್ ಎಡವಿ ಬಿದ್ದು ಅಂಬರೀಷ್ ಕಾಲು ಫ್ರಾಕ್ಚರ್ ಆಯಿತು. ಉಳಿದರ್ಧ ಕೆಲಸ ನಿಂತುಹೋಯಿತು. ಇವೆರಡು ಆಸೆಗಳು ಈಡೇರಿರುತ್ತಿದ್ದರೆ ನಮ್ಮವರು ಸಂತೃಪ್ತರಾಗಿಯೇ ಹೊರಟು ಹೋಗುತ್ತಿದ್ದರೇನೋ…?’

-ಒಂದು ಕ್ಷಣ ಮಾತು ನಿಲ್ಲಿಸಿದ ರತ್ನಾಚಾರಿ ಏನೋ ನೆನಪಾದವರಂತೆ ಮುಂದುವರಿಸಿದರು. ‘ಉಳಿದಂತೆ ನನಗೆ ಊಟಕ್ಕೆ ತೊಂದರೆಯಿಲ್ಲ. ನನ್ನದು ಹೇಗೋ ನಡೆದು ಹೋಗುತ್ತದೆ. ಮಗನ ಮನೆಯಲ್ಲಿದ್ದೇನೆ. ಆದರೆ, ಕನ್ನಡ ಚಿತ್ರರಂಗಕ್ಕಾಗಿ ಅಷ್ಟೊಂದು ಕೆಲಸ ಮಾಡಿದ ನಮ್ಮವರು ಹೀಗೆ ಅನಾಮಿಕರಾಗಿ ಸಾಯಬಾರದಿತ್ತು. ಸಾಯುವ ಕಾಲಕ್ಕೆ ಅವರು ಅಂತಮುಖಿಯಾಗಿದ್ದರು! ಪ್ರಾಯಶಃ ವೃತ್ತಿ ಬದುಕಿನಲ್ಲಿ ಕಂಡ ಕಷ್ಟ ನಷ್ಟಗಳು ಅವರನ್ನು ಹಾಗೆ ಮಾಡಿತೋ ಏನೋ? ನಮ್ಮ ಯಜಮಾನರು ಹಣ ಕೂಡಿಡಲಿಲ್ಲ. ಅಂದಿನದ್ದು ಅಂದಿಗೇ ಎನ್ನುವಂಥ ಬದುಕು! ಮಹಾ ಸ್ವಾಭಿಮಾನಿ. ಇತರರ ಮುಂದೆ ಕೈಯೊಡ್ಡಿದವರಲ್ಲ. ತಾವಾಯಿತು ತಮ್ಮ ಕೆಲಸವಾಯಿತೆಂದೇ ಬದುಕಿದವರು. ಯಾರನ್ನೂ ಯಾವುದಕ್ಕೂ ಕೇರ್ ಮಾಡಿದವರಲ್ಲ. ಆದರೆ, ಅವರಿಂದ ಉಪಕೃತರಾದವರೆಲ್ಲ ಕೃತಘ್ನರಾದರು. ಬದುಕಲು ದಾರಿ ತೋರಿಸಿದವರೆಲ್ಲ ಅವರ ಬದುಕಿನ ದಾರಿಯನ್ನು ಮುಚ್ಚಿಸಿಬಿಟ್ಟರು. ಚೆನ್ನೈನಲ್ಲೊಂದು ಸ್ವಂತ ಮನೆಯಿತ್ತು. ಕಾಯಿಲೆ ಕಸಾಲೆ ಅಂತ ಮನೆ ಮಾರಿಕೊಂಡರು. ಮನೆ ಮಾರಿಕೊಂಡದ್ದಕ್ಕೆ ಅವರಿಗೆ ಕಿಂಚಿತ್ತೂ ದುಃಖವಿರಲಿಲ್ಲ. ಆದರೆ, ಈಡೇರದ ಆಸೆಗಳಿಗಾಗಿ ಅವರಿಗೆ ದುಃಖವಿತ್ತು. ವಿಶೇಷವೆಂದರೆ, ನನಗೊಂದು ನೆಮ್ಮದಿಯ ಬದುಕು ನೀಡಿ ಅವರು ಹೊರಟು ಹೋದರು. ಉದ್ಯಮದಿಂದ ನಾನು ಏನನ್ನೂ ಬಯಸಿದವಳಲ್ಲ. ಸರ್ಕಾರದ ಮುಂದೆಯೂ ನನ್ನ ಬೇಡಿಕೆಯೇನಿಲ್ಲ. ನಮ್ಮ ಬದುಕು ನಮಗೆ ಅಷ್ಟೇ…’- ಎಂದು ಹೇಳುತ್ತ ಮತ್ತೆ ಮಾತು ಮುಂದುವರಿಸಲು ಯೋಚಿಸಿದರಾ? ಗೊತ್ತಿಲ್ಲ. ಉಗುಳು ನುಂಗಿಕೊಂಡ ರತ್ನಾಚಾರಿ ‘ನಾನೇ ವೀಣೆ ನೀನೇ ತಂತಿ…’ ಎಂದು ಹಾಡುತ್ತ ಮೌನವಾದರು!

(ಲೇಖಕರು ಹಿರಿಯ ಸಿನಿಮಾ ಪತ್ರಕರ್ತರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *