ಚಿತ್ರದುರ್ಗ: ಸಿವಿಲ್ ವ್ಯಾಜ್ಯಗಳ ಜೊತೆಗೆ ವೈವಾಹಿಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿ, ಪತಿ-ಪತ್ನಿಯರನ್ನು ಒಗ್ಗೂಡಿಸಲು ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರೋಣ ವಾಸುದೇವ ಹೇಳಿದರು.
ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮಾತನಾಡಿದರು.
ಯಾವುದೋ ಒಂದು ಮನಸ್ತಾಪದಿಂದಾಗಿ ಸತಿ-ಪತಿಗಳಲ್ಲಿ ಯಾರಾದರೊಬ್ಬರು ಕೋರ್ಟ್ ಮೊರೆ ಹೋಗುತ್ತಾರೆ. ಇದರಿಂದ ವೈವಾಹಿಕ ಜೀವನದಲ್ಲಿ ಇನ್ನಷ್ಟು ಬಿರುಕು ಬೀಳಲಿದ್ದು, ಪರಸ್ಪರ ವಿರೋಧಿಸಿ ಹಲವು ಪ್ರಕರಣ ದಾಖಲಾಗುತ್ತವೆ. ಹೀಗಾಗಿ ಸೂಕ್ತ ತಿಳಿವಳಿಕೆ ನೀಡಿ ಒಂದಾಗಿಸುವ ಕಾರ್ಯಕ್ಕೆ ಮಹತ್ವ ನೀಡುತ್ತಿದ್ದೇವೆ ಎಂದು ತಿಳಿಸಿದರು.
ವಿಶ್ವ ಮಹಿಳಾ ದಿನದಂದು ವೈವಾಹಿಕ ಪ್ರಕರಣಗಳ ಸಂಬಂಧ ಜಿಲ್ಲಾ ನ್ಯಾಯಾಲಯದಲ್ಲಿ 3, ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 5 ಸೇರಿ ಒಟ್ಟು 8 ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಇದರಲ್ಲಿ ಕಕ್ಷಿದಾರರ ಪರ ವಕೀಲರ ಪಾತ್ರವೂ ದೊಡ್ಡದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಯಾಧೀಶರಾದ ಎಂ.ವಿಜಯ್, ಡಿ.ಮಮತಾ, ಎಲ್.ಎಂ.ಚೈತ್ರಾ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್ ಇತರರಿದ್ದರು.