ಅತ್ಯಾಚಾರಿ ಸದ್ದಾಂಹುಸೇನ್ ಬಂಧನ

ಅಕ್ಕಿಆಲೂರ: ಅತಿಥಿ ಉಪನ್ಯಾಸಕಿ ಮೇಲೆ ಕಾಮುಕನೊಬ್ಬ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಐವರ ಮೇಲೆ ಆಡೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಮುಖ ಆರೋಪಿ ಹುಬ್ಬಳ್ಳಿ ತಾಜ ನಗರದ ನಿವಾಸಿ ಸದ್ದಾಂಹುಸೇನ್​ನನ್ನು ಪೊಲೀಸರು ಮಾ. 26ರಂದು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಹಕರಿಸಿದ ಆರೋಪದ ಮೇಲೆ ಆತನ ಸ್ನೇಹಿತರಾದ ಕಾರ್ತಿಕ, ಶಿವ, ಅಕ್ಷಯ ಹಾಗೂ ಪ್ರಭು ಎಂಬುವರ ಮೇಲೆಯೂ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಯುವತಿ ಹಾನಗಲ್ ತಾಲೂಕಿನವಳಾಗಿದ್ದು, ವಿಜಯಪುರದ ಕಾಲೇಜ್​ಒಂದರಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಇದಕ್ಕೂ ಮೊದಲು ಹುಬ್ಬಳ್ಳಿಯ ವಿದ್ಯಾನಗರದ ಐಐಎಂಎಸ್ ಕಂಪ್ಯೂಟರ್ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಕೇಂದ್ರಕ್ಕೆ ಬರುತ್ತಿದ್ದ ಸದ್ದಾಂಹುಸೇನ್ ಎಂಬಾತನು ಈ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು, ಪ್ರೀತಿಸುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಆದರೆ, ಯುವತಿ ಒಪ್ಪದಿದ್ದಾಗ ಕೈಗೆ ಚಾಕುವಿನಿಂದ ಗಾಯ ಮಾಡಿಕೊಂಡು ಕರುಣೆ ಬರುವಂತೆ ವರ್ತಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
2018ರ ಫೆಬ್ರವರಿ 14ರಂದು ಸದ್ದಾಂಹುಸೇನ, ಹುಬ್ಬಳ್ಳಿಯ ನವೀನ ಲಾಡ್ಜ್​ಗೆ ಕರೆದೊಯ್ದು ಅನುಚಿತವಾಗಿ ವರ್ತಿಸಿ, ಮೊಬೈಲ್​ನಲ್ಲಿ ಅಶ್ಲೀಲ ಫೋಟೋ ತೆಗೆದಿದ್ದಾನೆ. ನಂತರ ಫೋಟೋ ತೋರಿಸಿ ‘ಇನ್ನು ಮುಂದೆ ನಾನು ಎಲ್ಲಿ ಕರೆದರೂ ಬರಬೇಕು, ಇಲ್ಲವಾದರೆ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇನೆ’ ಎಂದು ಬೆದರಿಕೆ ಹಾಕಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ. ಅಲ್ಲದೆ, 2019 ಮಾ. 30ರಂದು ಸದ್ದಾಂಹುಸೇನ್ ತನ್ನ ಸ್ನೇಹಿತರೊಂದಿಗೆ ಯುವತಿಯ ಮನೆಗೆ ಆಗಮಿಸಿ, ಮತ್ತೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ಹೋಟೆಲ್​ಒಂದರಲ್ಲಿ ಬಲಾತ್ಕಾರ ಎಸೆಗಿದ್ದಾನೆ ಎನ್ನಲಾಗಿದೆ.
ಮತಾಂತರಕ್ಕೆ ಬಲವಂತ: 2019 ಏಪ್ರಿಲ್ 7ರಂದು ಸದ್ದಾಂಹುಸೇನ್ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಯುವತಿಯನ್ನು ಹುಬ್ಬಳ್ಳಿಯ ತಾಜ್ ನಗರದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ ಎನ್ನಲಾಗಿದ್ದು, ಈ ವೇಳೆ ಆತನ ತಾಯಿ ಮಮ್ತಾಜ್, ನನ್ನ ಮಗನನ್ನು ಮದುವೆಯಾಗು, ನಮ್ಮ ಧರ್ಮಕ್ಕೆ ಮತಾಂತರವಾಗು, ಕುರಾನ್ ಓದು ಎಂದು ಬಲವಂತ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಈ ಎಲ್ಲ ಘಟನೆಯಿಂದ ಭಯಭೀತಳಾದ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ. ಇದರಿಂದ ಬೆದರಿದ ಸದ್ದಾಂಹುಸೇನ್ ಹಾಗೂ ಆತನ ಸ್ನೇಹಿತರು ಹಾನಗಲ್ಲ ತಾಲೂಕಿನಲ್ಲಿರುವ ಯುವತಿಯ ದೊಡಪ್ಪ ಗಣೇಶ ಅವರ ಮನೆಗೆ ಯುವತಿಯನ್ನು ಬಿಟ್ಟು ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ನಂತರ ಮತ್ತೆ ಏ. 24ರಂದು ಮನೆಗೆ ಬಂದ ಸದ್ದಾಂ ಹುಸೇನ್, ಕುಟುಂಬಸ್ಥರಿಗೆ ಯುವತಿಯ ಅಶ್ಲೀಲ ವಿಡಿಯೋ ತೋರಿಸಿ ಗಲಾಟೆ ಮಾಡಿದ್ದಾನೆ ಎಂದು ಯುವತಿ ಮತ್ತು ಅವರ ಕುಟುಂಬಸ್ಥರು ಏ. 26ರಂದು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ಸದ್ದಾಂಹುಸೇನ ಎಂಬ ಯುವಕ, ಯುವತಿಯೊಬ್ಬಳ ಜೊತೆ ಹುಬ್ಬಳ್ಳಿಯ ಐಶಾರಾಮಿ ಹೋಟೆಲ್​ಗೆ ಕರೆದುಕೊಂಡು ಹೋಗಿ, ಅನುಚಿತವಾಗಿ ವರ್ತಿಸಿದ್ದಾನೆ. ಮೊಬೈಲ್​ನಲ್ಲಿ ಅಶ್ಲೀಲ ಪೋಟೋ ವಿಡಿಯೋ ಮಾಡಿ, ಬೆದರಿಸಿ ಅತ್ಯಾಚಾರ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸದ್ದಾಂಹುಸೇನನನ್ನು ವೈದ್ಯಕೀಯ ತಪಾಸಣೆ ನಡೆಸಿ, ಬಂಧಿಸಲಾಗಿದೆ. ಇತರ ನಾಲ್ವರು ಅನುಚಿತವಾಗಿ ವರ್ತಿಸಿಲ್ಲ ಎಂದು ಯುವತಿಯೇ ಹೇಳಿದ್ದಾಳೆ.”
| ನಂಜಪ್ಪ, ಸಿಪಿಐ ಆಡೂರ

Leave a Reply

Your email address will not be published. Required fields are marked *