ಅತೃಪ್ತ ಪ್ರಾಣಿಗಳ ಸಂಚಾರ

ಕಾಡುವ ಶಾಸಕರಿಗೆ ಕಾಡುಪ್ರಾಣಿಗಳೇ ದಾರಿ ತೋರುತ್ತಿವೆಯಂತೆ. ಹಳಿಯಾಳದಲ್ಲಿ ಆನೆಯೊಂದು ಬೀದಿಬೀದಿಯಲ್ಲಿ ತಿರುಗುತ್ತಿತ್ತು. ಏಕೆಂದು ಕೇಳಿದರೆ, ‘ಈ ಬಿಳಿಯಾನೆಗಳಿಗೆ ಬುದ್ಧಿಯೇ ಇಲ್ಲ. ಎತ್ತುಗಳಲ್ಲಿ ಎರಡು ವಿಧ ಇದೆ. ಒಂದು ನಗರದ ಎತ್ತು. ಇನ್ನೊಂದು ಗಾಣದ ಎತ್ತು. ಗಾಣದ ಎತ್ತಿನ ಹಗ್ಗ ಬಿಚ್ಚಿ ಓಡಾಡಿಕೊಂಡು ಇರಲು ಬಿಟ್ಟರೂ ಅದೂ ದಿನವೂ ಸುತ್ತೀ ಸುತ್ತೀ ಅಭ್ಯಾಸವಾದ ಗಾಣದ ಸುತ್ತಲೇ ಸುತ್ತುತ್ತಿರುತ್ತದೆ. ಆದರೆ ನಗರದ ಎತ್ತು ಹಗ್ಗ ಬಿಚ್ಚಿದರೆ ಸಾಕೆಂದು ಕಾಯುತ್ತಿದ್ದು ಊರೆಲ್ಲ ಸುತ್ತಿಕೊಂಡು ಬರುತ್ತದೆ. ನಗರದ ಎತ್ತಿಗೆ ಇರುವ ಬುದ್ದಿ ರೆಸಾರ್ಟ್​ನಿಂದ ಹೊರಬಂದ ಶಾಸಕರಿಗಿಲ್ಲ. ಇನ್ನೂ ಕುಳಿತಲ್ಲೇ ಕುಳಿತಿರುವ ಈ ಬಿಳಿಯಾನೆಗಳಿಗೆ ‘ಹೊರಡಿರೈ, ನಿಮ್ಮಾಸೆಯವಕಾಶ, ನಿಮ್ಮ ಕಬಳಿಕೆ ಬುದ್ದಿಗನುಗುಣವಾದುದನ್ನು ನೀಡಲು ಕಮಲದ ದಂಟಿನವರು ಕರೆಯುತ್ತಿದ್ದಾರೆ’ ಎಂದು ಹೇಳಲು ನಾನೇ ಕಾಡಿನಿಂದ ಹೊರಬಂದೆ’ ಎಂದಿತಂತೆ. ಇತ್ತ ಹಾಸನದಲ್ಲಿ ಚಿರತೆಯೊಂದು ಮನೆಗೆ ನುಗ್ಗಿಬಂದು ಬೋನಿಗೆ ಸೇರಿತು. ‘ಏಕಯ್ಯ ಚಿರತಣ್ಣ?’ ಎಂದರೆ ‘ನಾನು ಅತೃಪ್ತ ಶಾಸಕರ ಪ್ರತಿರೂಪ. ಮನೆಗೆ ಹೋದುದು ವಿಧಾನಸೌಧಕ್ಕೆ ಹೋದುದುರ ಸಂಕೇತ. ಅಲ್ಲಿ ಜಾಗ ನೀಡದೆ ಬೋನಿನಲ್ಲಿ ಯಾಕಿರುವುದು ಪಕ್ಷ ನಿಷ್ಠೆ, ತ್ಯಾಗ ಮುಂತಾದ ಯೂಸ್​ಲೆಸ್ ಪದಗಳ ಬೋನು’ ಎಂದಿತಂತೆ. ಆನೆ, ಚಿರತೆಗಳೇ ಬರಲು ಕಾರಣವೇನು? ಎಂದರೆ ‘ಸ್ಟುಪಿಡ್ ಮಂಗಗಳು ಬಂಡಿಪುರದ ಮಂಗಗಳಂತೆ ಅವರಿವರು ಕೊಡುವ ಆಹಾರಕ್ಕೆ ಕೈಚಾಚಿ ನಿಂತಿವೆ. ಟೊಂಗೆಯಿಂದ ಟೊಂಗೆಗೆ ಹಾರಿ ನಿಮ್ಮ ಹಸಿವನ್ನು ಇಂಗಿಸಿಕೊಳ್ಳಿ, ಮನದಿಚ್ಛೆಯನ್ನು ಪೂರೈಸಿಕೊಳ್ಳಿ. ಇದೇ ಎಡೆಯೂರುವುದಕ್ಕೆ ಮಾರ್ಗ ಎಂದು ತಿಳಿಸಲು ಬಂದೆವು’ ಎಂದಿತಂತೆ. ಮೃಗೀಯರಿಗೆ ಮೃಗಸಂಧಾನ ಫಲ ನೀಡಿದರೂ ನೀಡಬಹುದೇನೋ!

ಲಾಸ್ಟ್​ಲೈನ್: 8ನೇ ಕ್ಲಾಸ್ ಓದಿದವರಿಗೆ ಉನ್ನತ ಶಿಕ್ಷಣ ಖಾತೆ ನೀಡಿದರೆ ಆ ಇಲಾಖೆಯನ್ನು ಉನ್ಮುಕ್ತ ಶಿಕ್ಷಣ ಇಲಾಖೆ ಎನ್ನುವುದೇ ಸೂಕ್ತವಾದೀತೇನೋ!

Leave a Reply

Your email address will not be published. Required fields are marked *