ಅತಿಸಾರ ಭೇದಿಯಿಂದ ಮಕ್ಕಳ ಜೀವಕ್ಕೆ ಕುತ್ತು

ಚನ್ನರಾಯಪಟ್ಟಣ: ಅತಿಸಾರ ಭೇದಿಯಿಂದ ದೇಶದಲ್ಲಿ ಪ್ರತಿವರ್ಷಕ್ಕೆ ಸುಮಾರು 78 ಸಾವಿರ ಮಕ್ಕಳು ಸಾವಿಗೀಡಾಗುತ್ತಿವೆ ಎಂದು ಆಲೂರು ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ರೋಟಾ ವೈರಸ್ (ಅತಿಸಾರ ಭೇದಿ) ಅರಿವು ಹಾಗೂ ಲಸಿಕೆ ನೀಡುವ ಕುರಿತು ತಾಲೂಕಿನ ಆರೋಗ್ಯ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ರೋಟಾ ವೈರಾಣುವಿನಿಂದ ಸೋಂಕು ವರ್ಷದಲ್ಲಿ ಯಾವಾಗ ಬೇಕಾದರೂ ಕಾಣಿಸಿಕೊಳ್ಳಲಿದ್ದು, ಚಳಿಗಾಲದಲ್ಲಿ ಮಾತ್ರ ಹೆಚ್ಚಾಗಿ ಹರಡುತ್ತದೆ. ಆರು ತಿಂಗಳ ಮಗುವಿನಲ್ಲಿ ತೀವ್ರವಾಗಿ ಕಾಡುವ ಮಹಾ ಮಾರಿಯಾಗಿದೆ, ಕಂಡ ತಕ್ಷಣ ಚಿಕಿತ್ಸೆ ನೀಡದಿದ್ದಲ್ಲಿ ಪ್ರಾಣಾಪಾಯ ತರುವ ಅಪಾಯಕಾರಿ ಸೋಂಕು ಎಂದರು.
ಭಾರತದಲ್ಲಿ ಭೇದಿಯಿಂದಾಗಿ ಆಸ್ಪತ್ರೆಯನ್ನು ಸೇರುವವರಲ್ಲಿ ಶೇ.40 ರಷ್ಟು ಮಕ್ಕಳು ರೋಟಾವೈರಸ್ ಸೋಂಕಿಗೆ ಗುರಿಯಾಗುತ್ತಿದ್ದು, 32.7 ಲಕ್ಷ ಮಕ್ಕಳು ಆಸ್ಪತ್ರೆಯ ಒಪಿಡಿಗೆ ಆಗಮಿಸುತ್ತಿದ್ದಾರೆ. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿಯೇ ಸೋಂಕು ಇರುವುದು ಕಂಡುಬರುತ್ತಿದೆ ಎಂದು ಮಾಹಿತಿ ನೀಡಿದರು.
ರೋಟಾ ವೈರಸ್‌ನಿಂದ ಬರುವ ಭೇದಿಗೆ ಯಾವುದೇ ನಿರ್ಧಿಷ್ಟ ಚಿಕಿತ್ಸೆ ಇಲ್ಲ, ಇತರ ಭೇದಿಗಳಂತೆ ಚಿಕಿತ್ಸೆ ನೀಡಬೇಕಿದ್ದು, ಸೋಂಕು ತಗಲಿರುವ ಮಗುವಿಗೆ ಒಆರ್‌ಎಸ್ ಹಾಗೂ 14 ದಿನಗಳ ಕಾಲ ಜಿಂಕ್ ಮಾತ್ರೆಗಳನ್ನು ಕೊಡಬೇಕು. ಸಿರಾಫ್ ಮಾದರಿಯಲ್ಲಿ 5 ಎಂಎಲ್ ಔಷಧವನ್ನು ಕುಡಿಸಬೇಕು. ತೀವ್ರ ಸ್ವರೂಪದಲ್ಲಿದ್ದರೆ ಅಂತಹ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಐವಿ ಫ್ಲೂಯಿಡ್ ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಲಸಿಕೆ ಕಾರ್ಯಕ್ರಮಕ್ಕೆ ಶೀಘ್ರ ಚಾಲನೆ:
ವೈರಸ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆಗೆ ಮುನ್ನೆಚ್ಚರಿಕೆಯಿಂದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಆಗಸ್ಟ್ ಮೂರನೇ ವಾರದಿಂದ ತಾಲೂಕಿನಾದ್ಯಂತ ಚಾಲನೆ ನೀಡಲಾಗುವುದು. ಪ್ರತಿ ಗುರುವಾರ ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಲಸಿಕೆ ಹಾಕಲಿದ್ದು, ಪ್ರತಿ ತಿಂಗಳ ಮೊದಲ ಮಂಗಳವಾರ ಉಪ ಕೇಂದ್ರಗಳಲ್ಲಿ ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗವುದು ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಮಾತನಾಡಿರು. ತರಬೇತಿಯಲ್ಲಿ 140 ಆರೋಗ್ಯ ಸಿಬ್ಬಂದಿ ಪಾಲ್ಗೊಂಡಿದ್ದರು, ಅರಸೀಕೆರೆ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ, ಚನ್ನರಾಯಪಟ್ಟಣ ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್‌ಕುಮಾರ್. ಡಾ.ಪ್ರವೀಣ್, ಡಾ.ಮಾನಸಾ, ತಾಲೂಕು ಕ್ಷೇತ್ರ ಆರೋಗ್ಯಾಧಿಕಾರಿ ಡಾ.ಅನಿತಾ ಇದ್ದರು.

31 ಸಿಆರ್‌ಪಿ 02:
ಚನ್ನರಾಯಪಟ್ಟಣ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ರೋಟಾ ವೈರಸ್(ಅತಿಸಾರ ಭೇದಿ) ಕುರಿತು ತಾಲೂಕಿನ ಆರೋಗ್ಯ ಸಿಬ್ಬಂದಿಗೆ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಆಲೂರು ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಮಾತನಾಡಿದರು.