ಅತಿಯಾಸೆ ಗತಿಗೇಡು

ಒಂದು ಊರಿನಲ್ಲಿ ಒಬ್ಬ ಮೀನುಗಾರನಿದ್ದ. ನದಿಯಲ್ಲಿ ಮೀನು ಹಿಡಿದು ಮಾರಿ ಜೀವನ ಸಾಗಿಸುತ್ತಿದ್ದ. ಸಾಕಷ್ಟು ಹಣ ಅವನಲ್ಲಿತ್ತು. ಆದರೆ ಅವನು ಬಹಳ ಜಿಪುಣನಾಗಿದ್ದ. ಒಂದು ದಿನ ಮೀನುಗಾರನ ಬಲೆಯಲ್ಲಿ ದೊಡ್ಡದೊಂದು ಮೀನು ಸಿಕ್ಕಿಬಿದ್ದಿತು. ಮೀನುಗಾರನಿಗೆ ತುಂಬ ಖುಷಿಯಾಯಿತು. ಅವನು ಬಲೆಯಿಂದ ಬಿಡಿಸಿ ಮೀನನ್ನು ಎತ್ತಿಕೊಂಡ. ಮೀನು ಮಾತನಾಡತೊಡಗಿತು, ‘ಅಯ್ಯಾ…! ನನ್ನನ್ನು ದಯಮಾಡಿ ಬಿಟ್ಟುಬಿಡು ನಿನ್ನ ಉಪಕಾರ ನಾನೆಂದೂ ಮರೆಯಲಾರೆನು’ ಎಂದಿತು. ಮೀನು ಮಾತನಾಡುವುದನ್ನು ಕೇಳಿ ಮೀನುಗಾರನಿಗೆ ಆಶ್ಚರ್ಯವಾಯಿತು. ಅವನು ಅದನ್ನು ನೋಡುತ್ತ ‘ನಾನು ನಿನ್ನನ್ನು ಬಿಟ್ಟುಬಿಡುತ್ತೇನೆ, ಆದರೆ ನನಗೇನು ಕೊಡುವೆ..?’ ಎಂದು ಕೇಳಿದನು. ಅದಕ್ಕೆ ಮೀನು ‘ನಾನು ಮೂರು ವರವನ್ನು ಕೊಡುತ್ತೇನೆ, ಅದನ್ನು ನೀನು ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು’ ಎಂದಿತು. ಅದಕ್ಕೆ ಮೀನುಗಾರ ಒಪ್ಪಿ ಮೀನನ್ನು ಅಲ್ಲಿಯೇ ಬಿಟ್ಟು ಬಹಳ ವಿಚಾರ ಮಾಡತೊಡಗಿದ. ಯಾವ ವರ ಕೇಳಬೇಕೆಂದು ಅವನಿಗೆ ಹೊಳೆಯಲಿಲ್ಲ. ಬೇಗ ಮನೆಗೆ ಹೋಗಿ ಹೆಂಡತಿಯ ಸಲಹೆ ಕೇಳಿದರಾಯಿತು ಎಂದು ತನ್ನ ಬಲೆ, ಮೀನಿನ ಬುಟ್ಟಿಯನ್ನು ಕತ್ತೆಯ ಮೇಲೆ ಹೊರಿಸಿ ಮನೆಯ ಕಡೆಗೆ ಹೊರಟ.

ಬೇಗ ಮನೆ ಸೇರುವ ತವಕ ಮೀನುಗಾರನಿಗೆ. ಆದರೆ ಅವನ ಕತ್ತೆ ಎರಡೆರಡು ಹೆಜ್ಜೆ ನಡೆಯುತ್ತಿತ್ತು. ಅವನಿಗೆ ಸಿಟ್ಟು ಬಂದು ಅದಕ್ಕೆ ಚೆನ್ನಾಗಿ ಹೊಡೆದ. ಅದು ನಾಲ್ಕು ಹೆಜ್ಜೆ ವೇಗವಾಗಿ ನಡೆದು ಮತ್ತೆ ನಿಧಾನವಾಗಿ ಚಲಿಸತೊಡಗಿತು. ಮೀನುಗಾರನಿಗೆ ಸಿಟ್ಟು ನೆತ್ತಿಗೇರಿತು. ಅವನ ನಾಲಿಗೆ ಮೇಲೆ ಹಿಡಿತವಿಲ್ಲದೆ, ‘ಏ ಕತ್ತೆ ನೀನು ಸತ್ತು ಹೋಗಬಾರದೇ?’ ಎಂದ. ಅದು ತಕ್ಷಣ ಸತ್ತು ಬಿದ್ದಿತು. ಕತ್ತೆ ಬದುಕಿ ಬರಲಿ ಎಂದರೆ ಇನ್ನೊಂದು ವರ ವ್ಯರ್ಥವಾಗುತ್ತದೆ ಎಂದು ಮೀನುಗಾರ ಅಲ್ಲಿಯೇ ಹೊರಟಿದ್ದ ಎತ್ತಿನ ಬಂಡಿಯ ಮೇಲೆ ಸಾಮಾನುಗಳನ್ನು ಹೇರಿ ಮನೆಗೆ ಬಂದು ಇಳಿಸುವಷ್ಟರಲ್ಲಿ ಅವನ ಹೆಂಡತಿ ‘ನಮ್ಮ ಕತ್ತೆ ಎಲ್ಲೋಯ್ತು?’ ಎಂದು ಕೇಳಿದಳು. ಗಂಡ ಉತ್ತರ ಕೊಡಲಿಲ್ಲ. ಮತ್ತೆ ಅದೇ ಪ್ರಶ್ನೆ ಕೇಳಿದರೂ ಉತ್ತರ ಸಿಗಲಿಲ್ಲ. ಆಕೆಗೂ ಸಿಟ್ಟು ಬಂದು ‘ನೀವು ನನ್ನೊಡನೆ ಏಕೆ ಮಾತನಾಡುತ್ತಿಲ್ಲ?’ಎಂದು ಏರುಧ್ವನಿಯಲ್ಲಿ ಕೇಳಿದಳು. ಗಂಡನಿಗೆ ತಾಳ್ಮೆತಪ್ಪಿ, ‘ಏ ಹುಚ್ಚಿ… ನೀನೇಕೆ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುತ್ತಿ? ನಿನ್ನ ಬಾಯಿ ಮುಚ್ಚಿಹೋಗಬಾರದೇ?’ ಎಂದು ಅಬ್ಬರಿಸಿದ. ಮರುಕ್ಷಣದಲ್ಲೇ ಹೆಂಡತಿಯ ಬಾಯಿ ಮುಚ್ಚಿಹೋಗಿ ಹೊಲಿಗೆ ಹಾಕಿದಂತೆ ತುಟಿಗಳು ಹೆಣೆದುಕೊಂಡವು. ಮೀನುಗಾರನ ಎರಡನೇ ವರ ಹೀಗೆ ಫಲಿಸಿತು. ಈ ಹಿಂದೆ ನಡೆದ ಸಂಗತಿ ಯಾವುದೂ ಹೆಂಡತಿಗೆ ತಿಳಿದಿರಲಿಲ್ಲ. ಕ್ಷಣಕಾಲ ಸಿಡಿಲು ಬಡಿದವಳಂತೆ ಕೂತಿದ್ದಳು. ಒಂದೇ ಸಮನೆ ಕಣ್ಣೀರು ಸುರಿಸುತ್ತ ಬಿಕ್ಕಳಿಸತೊಡಗಿದಳು. ಮೀನುಗಾರನ ಬಳಿ ಇನ್ನೊಂದೇ ವರ ಉಳಿದಿತ್ತು. ದೊಡ್ಡ ವರ ಪಡೆಯುವ ಬಯಕೆ ಅವನಿಗಿತ್ತು. ಆದರೆ, ಪತ್ನಿಯ ಈ ಸ್ಥಿತಿ ನೋಡಲು ಅವನಿಂದಾಗಲಿಲ್ಲ. ಅವನು ‘ಹೆಂಡತಿಗೆ ಬಾಯಿ ಬರಲಿ’ ಎಂದು ಕೇಳಿಕೊಂಡ. ಮರುಕ್ಷಣದಲ್ಲೇ ಅವಳು ಮಾತನಾಡತೊಡಗಿದಳು.

ಮೀನುಗಾರ ತನಗಿದ್ದ ಮೂರು ವರಗಳನ್ನು ಬಳಸಿದ್ದ. ಹೀಗಾಗಿ ಅವುಗಳಿಂದ ಯಾವುದೇ ಪ್ರಯೋಜನ ಪಡೆಯುವುದು ಸಾಧ್ಯ ವಾಗಲಿಲ್ಲ. ಮನುಷ್ಯನಿಗೆ ಸಿಟ್ಟು, ಅತಿಯಾಸೆ ಒಳಿತನ್ನು ಮಾಡುವುದಿಲ್ಲ. ಅದಕ್ಕೇ, ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು, ಅತಿಯಾಸೆ ಗತಿಗೇಡು ಎಂದು ಹಿರಿಯರು ಹೇಳಿದ್ದು.

ಸಂಗ್ರಹ: ಸಹನಾ ಹೆಗ್ಗಳಗಿ, ರಬಕವಿ-ಬನಹಟ್ಟಿ