ಅತಿಥಿ-ಆತಿಥ್ಯ ಹೇಗಿರಬೇಕು?

ಕೆಲವು ಅತಿಥಿಗಳು ನಮ್ಮ ಮನೆಗೆ ಒಂದೇ ಸಲ ಬಂದು ಹೋದರೂ, ಮತ್ತೆ ಮತ್ತೆ ಅವರ ಬರುವಿಕೆಯನ್ನೇ ಕಾಯುತ್ತಿರುತ್ತೇವೆ. ಹೀಗಾಗಲು ಕಾರಣ, ನಮ್ಮ ಮನಸ್ಸನ್ನು ಗೆದ್ದ, ನಮ್ಮ ಪ್ರೀತಿಯನ್ನು ಸಂಪಾದಿಸಿದ ಆ ಅತಿಥಿಯ ವರ್ತನೆಗಳು, ನಡೆ, ನುಡಿಗಳು ಹಾಗೂ ಗುಣ ಸ್ವಭಾವಗಳು, ಆದರೆ, ಕೆಲವು ಅತಿಥಿಗಳು ಒಮ್ಮೆ ಬಂದು ಹೋದರೆ ಸಾಕು; ಮತ್ತೆ ಬರುವುದೇ ಬೇಡವೆಂದು ಅನಿಸುತ್ತದೆ. ಈ ಹಿನ್ನೆಲೆಯಲ್ಲಿ ಒಳ್ಳೆಯ ಅತಿಥಿ ಆತಿಥ್ಯದ ಬಗ್ಗೆ ತಿಳಿಯೋಣ.

ಅತಿಥಿಯಾಗಿ ಹೋಗುವ ಮುನ್ನ ಅಲ್ಲಿಗೆ ಹೋಗುವ ದಿನ, ವೇಳೆ ಹಾಗೂ ಅಲ್ಲಿ ಉಳಿದುಕೊಳ್ಳಲಿರುವ ಅವಧಿ ಬಹಳ ಮುಖ್ಯ. ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿದ್ದಲ್ಲಿ, ಗಂಡ ಹೆಂಡತಿ ಇಬ್ಬರೂ ದುಡಿಯುವವರಾಗಿದ್ದಲ್ಲಿ ಇಲ್ಲವೇ, ಆ ಮನೆಯಲ್ಲಿ ಕಡು ಬಡತನವಿದ್ದಲ್ಲಿ, ಸಾವು ನೋವು ಸಂಭವಿಸಿದ್ದಲ್ಲಿ, ಅತಿಥಿಯಾಗಿ ಹೋಗುವ ಮುನ್ನ ಯೋಚಿಸಬೇಕು.

 • ಅಂತೆಯೇ ಅಕಾಲದಲ್ಲಿ ಇಲ್ಲವೇ ಅತಿ ಸಂಖ್ಯೆಯಲ್ಲಿ ಹೋಗೋದು ಕೂಡ ನಾಗರಿಕತೆ ಎನಿಸಲಾರದು. ಹೋಗಲಿರುವವರ ಸಂಖ್ಯೆ, ಮನೆ ಸೇರಲಿರುವ ಅಂದಾಜು ವೇಳೆ ಹಾಗೂ ಉಳಿದುಕೊಳ್ಳುವ ದಿನಗಳನ್ನು ಮುಂಚಿತವಾಗಿ ತಿಳಿಸೋದು- ಅತಿಥಿ- ಆತಿಥೇಯರಿಬ್ಬರಿಗೂ ಕ್ಷೇಮ.
 • ಆಪ್ತರ ಇಲ್ಲವೇ ಹತ್ತಿರದ ಬಂಧುಗಳ ಹೊರತಾಗಿ, ಇಲ್ಲವೇ ಅನಿವಾರ್ಯ ಸಂದರ್ಭಗಳ ಹೊರತಾಗಿ, ಆತಿಥಿಗಳು ನಮ್ಮನ್ನು ಪಿಕಪ್ ಇಲ್ಲವೇ ಡ್ರಾಪ್ ಮಾಡಿ ಎಂಬ ಬೇಡಿಕೆಯನ್ನು ಆತಿಥೇಯರ ಮುಂದಿಡುವುದು ಕೂಡ ಸಭ್ಯತೆಯಲ್ಲ. ಆದಷ್ಟೂ ಮಟ್ಟಿಗೆ, ನಮ್ಮ ನಮ್ಮ ವಾಹನದ ವ್ಯವಸ್ಥೆಯನ್ನು ನಾವೇ ಮಾಡಿಕೊಂಡರೆ, ಒಳ್ಳೆಯದು, ಈ ವಿಚಾರದಲ್ಲಿ ಅವರಾಗಿಯೇ ಮುಂದೆ ಬಂದರೆ ಅಭ್ಯಂತರವಿಲ್ಲ. ಆದರೆ, ಯಾವುದೇ ರೀತಿಯ ಒತ್ತಡ ಹೇರದೆ, ಆತಿಥೇಯರಿಗೆ ಕನಿಷ್ಠ ಪ್ರಮಾಣದ ತೊಂದರೆಯನ್ನು ನೀಡೋದು ಶಿಷ್ಟಾಚಾರವೆನಿಸೀತು.
 • ಆತಿಥಿಗಳಾಗಿ ಹೋಗುವವರು, ಬರೀ ಕೈಯಲ್ಲಿ ಹೋಗದೆ, ಏನಾದರೂ ಚಿಕ್ಕ ಪುಟ್ಟ ಉಡುಗೊರೆಯನ್ನೋ, ಹಣ್ಣು ಹಂಪಲುಗಳನ್ನೋ, ತಿಂಡಿ ತಿನಿಸುಗಳನ್ನೋ, ಒಯ್ಯುವುದು ಒಂದು ಸತ್ ಸಂಪ್ರದಾಯ. ಮಕ್ಕಳಿದ್ದ ಮನೆಗಂತೂ ಬರೀ ಕೈಯಲ್ಲಿ ಹೋಗಲೇಬಾರದು.
 • ಆತಿಥೇಯರ ಮನೆ ಸೇರಿದ ಬಳಿಕ, ಅಲ್ಲಿರುವ ಸೌಕರ್ಯ ಸೌಲಭ್ಯಗಳಿಗನುಗುಣವಾಗಿ, ಇದ್ದುದರಲ್ಲಿ ಹೊಂದಿಕೊಂಡು ಹೋಗಬೇಕಾದುದು ಒಳ್ಳೆಯ ಆತಿಥಿಗಳ ಗುಣಲಕ್ಷಣ. ಪೂರೈಸಲು ಸಾಧ್ಯವಾಗದಂತಹ ಬೇಡಿಕೆಗಳನ್ನು ಮುಂದಿಟ್ಟು ಆತಿಥೇಯರಿಗೆ ಮುಜುಗರವನ್ನುಂಟು ಮಾಡಬಾರದು. ಆತಿಥೇಯರು ರಜ ಹಾಕಿ ತಮ್ಮೊಡನಿರಬೇಕೆಂದು ಬಯಸೋದು ಇಲ್ಲವೇ ಅನುಮತಿ ಇಲ್ಲವೇ ಅವರ ದೂರವಾಣಿಗಳನ್ನು ಅತಿಯಾಗಿ ಬಳಸೋದು ಸಭ್ಯತೆಯಲ್ಲ.
 • ಅತಿಥಿಗಳಾದವರು ತಮ್ಮ ತಮ್ಮ ಟೂತ್​ಬ್ರಷ್, ಬಾಚಣಿಗೆ, ಬಾತ್ ಟವಲ್, ಸಾಮಾನುಗಳನ್ನು ತಮ್ಮೊಂದಿಗೆ ಒಯ್ದರೆ ಆತಿಥೇಯರಿಗೂ ಅನುಕೂಲ. ನಮಗೂ ಆರೋಗ್ಯಕರ. ಅಂತೆಯೇ ರೂಮಿನಿಂದ ಹೊರಬರುವಾಗ, ಲೈಟ್, ಫ್ಯಾನ್​ಗಳನ್ನು ಆಫ್ ಮಾಡುವ ಕ್ರಮ, ಕುಡಿದ ಲೋಟಗಳನ್ನು, ತಿಂದ ತಟ್ಟೆಗಳನ್ನು ತೊಳೆಯುವ ಸ್ಥಳದಲ್ಲೇ ಇಡುವ ಪದ್ಧತಿ, ಅಡಿಗೆಯಲ್ಲೂ ಸಹಕರಿಸುವ ಪದ್ಧತಿ ಸ್ವಾಗತಾರ್ಹ.
 • ನನಗೆ ಇದು ಆಗೋದಿಲ್ಲ, ಅದು ಆಗೋದಿಲ್ಲವೆಂದು ಹೇಳುತ್ತಾ ಆತಿಥೇಯರನ್ನು ಮುಜುಗರಕ್ಕೆ ಒಳಪಡಿಸಬಾರದು. ಕೊಟ್ಟಿದ್ದನ್ನು ಸಂತೋಷವಾಗಿ ಸ್ವೀಕರಿಸಿ, ಇದ್ದುದ್ದರಲ್ಲಿ ಸಂತೋಷಪಟ್ಟುಕೊಳ್ಳೋದೇ ಒಳ್ಳೆಯ ಅತಿಥಿಯ ಗುಣ.
 • ಇನ್ನು ಊಟ ಮಾಡುವಾಗ, ನಿಶ್ಶಬ್ದವಾಗಿ ಊಟ ಮಾಡಬೇಕು. ದ್ರವ ಪದಾರ್ಥಗಳಾಗಿದ್ದಲ್ಲಿ ‘ಸೊರ್ ಸೊರ್’ ಎಂಬ ಶಬ್ದವನ್ನು ಮಾಡೋದು, ಗಬಗಬನೆ ತಿನ್ನೋದು, ಕೈತುಂಬಾ ಕಲಸಿಕೊಂಡು, ನೆಕ್ಕಿಕೊಂಡು ತಿನ್ನೋದು, ತಿನ್ನುತ್ತಾ ದೊಡ್ಡ ತೇಗು ಬಿಡೋದು, ‘ಟೇಬಲ್ ಮ್ಯಾನರ್ಸ್’ ಎನಿಸದು.
 • ಅಂತೆಯೇ ಆತಿಥೇಯರ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಕೂಡ ತರವಲ್ಲ.
 • ಹೊರಡುವ ಮುನ್ನ ಒಂದಿಷ್ಟು ಮೆಚ್ಚುಗೆಯ ಮಾತುಗಳನ್ನಾಡಬೇಕು. ಮಾತ್ರವೇ ಅಲ್ಲ, ಮನೆಗೆ ಹಿಂದಿರುಗಿದ ಮೇಲೆ, ಒಂದು ಕೃತಜ್ಞತೆಯನ್ನು ಸೂಚಿಸೋದು ಒಂದು ಸದ್ಗುಣ ಹಾಗೂ ಸತ್ ಸಂಪ್ರದಾಯ.

ನಮ್ಮ ಆತಿಥ್ಯ ಹೇಗಿರಬೇಕು?: ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮನೆಗೆ ಬಂದ ಅತಿಥಿ ದೇವರಿಗೆ ಸಮಾನವೆನ್ನಲಾಗಿದೆ (ಅತಿಥಿ ದೇವೋ ಭವ) ಆದರೆ, ಹಿಂದಿನ ಕಾಲದಲ್ಲಿ ಬನ್ನಿ ನಮ್ಮ ಮನೆಯಲ್ಲಿ ಒಂದೆರಡು ವಾರ ಇದ್ದು ಹೋಗಿ ಎನ್ನುತ್ತಿದ್ದರೂ ಈಗ ಯಾರಾದರೂ ಬಂದು ಹೊತ್ತಿಗೆ ಊಟಕ್ಕೆ ಬರುತ್ತಾರೆ ಎಂದರೇನೇ ಮನೆಯವರಿಗೆಲ್ಲರಿಗೂ ಟೆನ್ಷನ್ ಕೆಲವರಂತೂ ಅವರ ಮನೆಗೆ ಹೋದ ಕೂಡಲೇ ನಿಮ್ಮದು ಕಾಫಿ ಆಗಿರಬೇಕಲ್ಲ ಎಂದು ಕೊಳ್ಳುತ್ತಾ ಒಂದು ಲೋಟ ಕಾಫಿ ಕೊಡೋದನ್ನು ತಪ್ಪಿಸಿ ಬಿಡುತ್ತಾರೆ. ಇನ್ನು ಕೆಲವರು ನಿಮಗೆ ಒಂದು ಅರ್ಧ ಲೋಟ ಕಾಫಿ ತರ್ಲಾ ಅಂತ ಕೇಳುತ್ತಾರೆ. ಅರ್ಧ ಲೋಟ ಯಾಕೆ? ಫುಲ್ ಲೋಟ ಕೊಡಬಹುದಲ್ಲ! ಇನ್ನು ಕೆಲವರು ಕಾಟಾಚಾರಕ್ಕೆ ತಮ್ಮ ಮನೆಗೆ ಕರೆಯುತ್ತಾರೆ. ಅವರ ಮನೆಗೆ ಹೋದ ಕೂಡಲೇ ಗೇಟನ್ನು ತೆರೆಯುತ್ತಾ, ‘ಬನ್ನಿ ಬನ್ನಿ ಎಂದು ಹೇಳುವ ಬದಲು ಹೋ ಬಂದೇ ಬಿಟ್ರಾ? ಅನ್ನುತ್ತಾರೆ. ಇದೆಂತಹ ಅತಿಥಿ ಸತ್ಕಾರ!

ಅದೇನೇ ಇರಲಿ ಮನೆಗೆ ಬಂದ ಅತಿಥಿಗಳನ್ನು ಅವರು ಶ್ರೀಮಂತರಿರಲಿ, ಬಡವರಿರಲಿ, ನಗುನಗುತ್ತಾ ಸ್ವಾಗತಿಸಬೇಕಾದುದು ಆತಿಥೇಯರ ಮೊದಲ ಧರ್ಮ. ಬಂದ ಅತಿಥಿಗಳಿಗೆ ಮನೆಯಾಕೆ ಮಾವಿನ ರಸವನ್ನು ಕೊಟ್ಟರೆ ಅದು ಮ್ಯಾಂಗೋ ಜ್ಯೂಸ್, ಕಿತ್ತಳೆ ಹಣ್ಣಿನ ರಸವನ್ನು ಕೊಟ್ಟರೆ ಅದು ಆರೆಂಜ್ ಜ್ಯೂಸ್, ಏನನ್ನೂ ಕೊಡದಿದ್ದರೆ, ಆಕೆ ಭಾರೀ ಕಂಜ್ಯೂಸ್ ಅಂತಾರೆ ಅತಿಥಿಗಳು. ಮತ್ತೆ ಅವರನ್ನು ಕುಳಿತುಕೊಳ್ಳುವಂತೆ ಹೇಳಿ, ಮನೆಯೊಳಗೆ ಲಭ್ಯವಿರುವ ತಿಂಡಿ ತಿನಿಸುಗಳನ್ನು ನೀಡಬೇಕು. ಈ ಪ್ರಕ್ರಿಯೆಯಲ್ಲಿ ಮಕ್ಕಳೇ ಮೊದಲಾಗಿ, ಮನೆಯವರೆಲ್ಲರೂ ಭಾಗಿಗಳಾಗಬೇಕು. ಅತಿಥಿಗಳು ಬಂದಾಗ ಕುಳಿತಲ್ಲಿಂದ ಏಳದಿರೋದು, ಇಲ್ಲವೇ ಟಿವಿಯನ್ನೇ ನೋಡುತ್ತಿರೋದು, ಏನೂ ಮಾತನಾಡದಿರೋದು, ಅತಿಥಿಗಳನ್ನು ನಿರ್ಲಕ್ಷಿಸೋದು ಸಭ್ಯತೆಯಲ್ಲ.

 • ಬಂದ ಅತಿಥಿಗಳು ಒಂದೆರಡು ದಿನ ಉಳಿಯುವವರಾದರೆ, ಅವಶ್ಯಕ ಸೌಕರ್ಯಗಳನ್ನು ಮುಖ್ಯವಾಗಿ ಸ್ವಚ್ಛವಾದ ಮಲಗುವ ಕೋಣೆ, ಶೌಚಾಲಯ, ಬಟ್ಟೆಬರೆಗಳನ್ನು ಒದಗಿಸಬೇಕು.
 • ಅವರ ಊಟೋಪಚಾರದ ವಿಷಯದಲ್ಲಿ ಅವರ ಬೇಕು ಬೇಡಗಳನ್ನು ಕೇಳಿಕೊಂಡು ಉಪಚರಿಸೋದು ಶ್ರೇಷ್ಠ. ತಮಗೆ ಸ್ವಲ್ಪ ಕಷ್ಟವಾದರೂ ಸರಿ, ವಿಶೇಷವಾದ ಖಾದ್ಯಗಳನ್ನು ತಯಾರಿಸಿ, ಸತ್ಕರಿಸಿದರೆ, ಬಂದ ಅತಿಥಿಗಳು ಸಂತೃಪ್ತರಾಗೋದರಲ್ಲಿ ಸಂಶಯವಿಲ್ಲ. ಹಸಿದ ಅತಿಥಿಗಳನ್ನು ಕಾಯಿಸೋದು, ನಿರ್ಲಕ್ಷಿಸೋದು, ಪಂಕ್ತಿಭೇದ ಮಾಡೋದು, ಸಂಭಾವಿತ ಆತಿಥೇಯರ ಲಕ್ಷಣವಲ್ಲ. ಮನೆಯವರು ಮಾತ್ರ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ, ಬಂದ ಅತಿಥಿಗಳಿಗೆ ಮಾತ್ರ ಸ್ಟೀಲ್ ತಟ್ಟೆಯಲ್ಲಿ ಉಣಬಡಿಸೋದು ಕೂಡ ಸಂಸ್ಕೃತಿಯಲ್ಲ. ಅನುಕೂಲವಿದ್ದರೆ ಎಲ್ಲರಿಗೂ ಬೆಳ್ಳಿತಟ್ಟೆ; ಇಲ್ಲವಾದರೆ ಎಲ್ಲರಿಗೂ ಸ್ಟೀಲ್ ತಟ್ಟೆ ಇದು ಸಭ್ಯತೆ.
 • ಬಂದ ಅತಿಥಿಗಳು ತೀರಾ ಆಪ್ತರಲ್ಲದಿದ್ದಲ್ಲಿ ಅವರ ಮೇಲೆ ಯಾವುದೇ ಕೆಲಸದ ಹೊರೆಯನ್ನು ಹೊರಿಸೋದು ಕೂಡ ಸಭ್ಯತೆಯಲ್ಲ! ಅಂತೆಯೇ ಬಂದ ಅತಿಥಿಗಳ ಎದುರು ತಮ್ಮ ಶ್ರೀಮಂತಿಕೆಯ ಪ್ರದರ್ಶನ, ತಮ್ಮದೇ ಕುರಿತಾದ ಸಾಧನೆಯ ಮಾತುಗಳು, ಹೆಗ್ಗಳಿಕೆ-ತರವಲ್ಲ; ಮಾತ್ರವೇ ಅಲ್ಲ ಅತಿಥಿಗಳ ವೈಯಕ್ತಿಕ ವಿಚಾರಗಳನ್ನು ಪ್ರಶ್ನಿಸೋದು, ಅವರನ್ನು ಅನಾವಶ್ಯಕ ಚರ್ಚೆಗೆ ಎಳೆತರೋದು; ಅವರ ಮನ ನೋಯುವಂತೆ ಮಾತನಾಡೋದು ಕೂಡ ಒಳ್ಳೆಯ ಪರಿಪಾಠವಲ್ಲ!
 • ಅಂತೆಯೇ ಬಂದ ಅತಿಥಿಗಳ ಎದುರು, ಮಡದಿ ಮಕ್ಕಳನ್ನು ಬೈಯೋದು, ಹೀಯಾಳಿಸೋದು, ಅವರನ್ನು ತಮಾಷೆ ಮಾಡೋದು ಇಲ್ಲವೇ ಅವರ ಬಗ್ಗೆ ಲಘುವಾಗಿ ಮಾತನಾಡೋದು, ಜಗಳ ಕಾಯೋದು, ಎಲ್ಲವೂ ಅತಿಥಿಗಳಿಗೆ ಅಹಿತಕರ ಸನ್ನಿವೇಶವನ್ನು ತಂದೊಡ್ಡುತ್ತವೆ.
 • ಅತಿಥಿಯ ಮಗುವಿನಿಂದಾಗಿ ಮನೆಯ ವಸ್ತುವೇನಾದರೂ ಹಾಳಾದರೆ, ಪರವಾಗಿಲ್ಲ ಬಿಡಿ, ಮಕ್ಕಳಲ್ಲವೇ ಎಂದು ಹೇಳುತ್ತಾ ಅವರ ಮುಜುಗರವನ್ನು ತಪ್ಪಿಸೋದು ಒಂದು ಸಭ್ಯತೆ.
 • ತಿಥಿಗಳು ಏನಾದರೂ ಕಾರ್ಯ ನಿಮಿತ್ತ ಬಂದವರಾದಲ್ಲಿ, ಅವರಿಗೆ ಸಾಧ್ಯವಾದ ಸಹಕಾರಗಳನ್ನು ನೀಡೋದು ಒಳ್ಳೆಯ ಆತಿಥೇಯರ ಗುಣ.

ಒಟ್ಟಿನಲ್ಲಿ ಅತಿಥಿ ಸತ್ಕಾರವೆಂಬುದು, ಮನೆಯವರೆಲ್ಲರಿಗೂ ಖುಷಿ ಕೊಡುವ ವಿಚಾರವಾಗಬೇಕು. ಮಕ್ಕಳಿಗಂತೂ ಅತಿಥಿ ಸತ್ಕಾರದ ರೀತಿನೀತಿಗಳನ್ನು ಬಾಲ್ಯದಿಂದಲೇ ತಿಳಿಸಿಕೊಡಬೇಕಾದುದು ಪ್ರತಿಯೊಬ್ಬ ಹೆತ್ತವರ ಹೊಣೆಗಾರಿಕೆ. ಒಟ್ಟಿನಲ್ಲಿ ಒಳ್ಳೆಯ ಅತಿಥಿ ಹಾಗೂ ಆತಿಥೇಯರಾಗೋದು ಒಂದು ಕಲೆ. ಈ ಕಲೆ ನಮ್ಮದಾಗಲಿ!

Leave a Reply

Your email address will not be published. Required fields are marked *