ಅತಿಕ್ರಮಣ ತೆರವು ಹೇಗೆ?

|ಸುಶೀಲಾ ಚಿಂತಾಮಣಿ

ನಮ್ಮ ತಾತನಿಗೆ ಮೂರು ಮಕ್ಕಳು. ಅವರು 1990ರಲ್ಲಿ ತೀರಿಕೊಂಡಿದ್ದಾರೆ. ನಂತರ 2002ರಲ್ಲಿ ನಮ್ಮ ತಂದೆ ಮತ್ತು ಚಿಕ್ಕಪ್ಪಂದಿರು ಆಸ್ತಿ ವಿಭಾಗ ಮಾಡಿಕೊಂಡಿದ್ದಾರೆ. ಇದಕ್ಕೆ ನನ್ನ ಒಪ್ಪಿಗೆ ಸಹಿ ಪಡೆದಿದ್ದಾರೆ. ನಮ್ಮ ತಂದೆಗೆ ನಾವು ಇಬ್ಬರು ಮಕ್ಕಳು. ನಮ್ಮ ತಂದೆ ಮತ್ತು ಚಿಕ್ಕಪ್ಪಂದಿರು ಬೇರೆ ಆಗುವ ಮುಂಚೆ ನನಗೆ ಒಂದು ಎಕರೆ ಜಮೀನನ್ನು ಕೊಟ್ಟು ನನ್ನನ್ನು ಅವಿಭಕ್ತ ಕುಟುಂಬದಿಂದ ಬೇರೆ ಮಾಡಲಾಯಿತು. ನಾನು ಸರ್ಕಾರಿ ಕೆಲಸದಲ್ಲಿ ಇದ್ದ ಕಾರಣ, ಕುಟುಂಬದ ಆದಾಯ ಕಡಿಮೆ ತೋರಿಸಿ ನನ್ನ ಅಣ್ಣನಿಗೆ ಸರ್ಕಾರಿ ನೌಕರಿ ಕೊಡಿಸಲು ಈ ರೀತಿ ಮಾಡಿದರು. ಒಟ್ಟು ಕುಟುಂಬದ ಆಸ್ತಿಯ ಆದಾಯ ಮತ್ತು ನನಗೆ ಕೊಟ್ಟ ಒಂದು ಎಕರೆ ಆಸ್ತಿಯ ಆದಾಯ ಎರಡನ್ನೂ ನನ್ನ ತಂದೆಯೇ ತೆಗೆದುಕೊಂಡಿದ್ದಾರೆ. ಈಗ ನನ್ನ ಪ್ರಶ್ನೆ ಏನೆಂದರೆ, ನನ್ನ ತಂದೆ ತಾಯಿಯ ಮರಣದ ನಂತರ ಉಳಿದ ಆಸ್ತಿ ನನ್ನ ಅಣ್ಣನಿಗೇ ಸೇರುತ್ತದೆಯೇ? ಆಸ್ತಿಯಲ್ಲಿ ಭಾಗ ಪಡೆಯಲು ನಾನು ಏನು ಮಾಡಬಹುದು?

| ಧೀರಜ್, ಮಂಗಳೂರು

ನಿಮ್ಮ ಪತ್ರದಲ್ಲಿಯ ಮಾಹಿತಿ ಸಂಪೂರ್ಣವಾಗಿಲ್ಲ. ನೀವು ಹಕ್ಕು ಬಿಡುಗಡೆ ಮಾಡಿರುವುದು ರಿಜಿಸ್ಟರ್ ಆಗಿದ್ದರೆ ನೀವು ಯೋಚಿಸಬೇಕು. ಹಕ್ಕು ಬಿಡುಗಡೆ ಪತ್ರ ರಿಜಿಸ್ಟರ್ ಆಗಿಲ್ಲದಿದ್ದರೆ ನಿಮಗೆ ಆಸ್ತಿಯಲ್ಲಿ ನಿಮ್ಮ ಅಣ್ಣನಿಗೆ ಇರುವ ಎಲ್ಲ ಹಕ್ಕೂ, ನಿಮಗೂ ಇರುತ್ತದೆ. ನಿಮಗೆ ಕೊಟ್ಟಿದೆ ಎಂದು ಹೇಳಲಾದ ಒಂದು ಎಕರೆಯನ್ನೂ ಒಟ್ಟು ಕುಟುಂಬದ ಆಸ್ತಿ ಎಂದೇ ಪರಿಗಣಿಸಿ ಅದರಲ್ಲೂ ಇಬ್ಬರಿಗೂ ವಿಭಾಗ ಆಗುತ್ತದೆ. ಒಂದು ವೇಳೆ ಹಕ್ಕು ಬಿಡುಗಡೆ ರಿಜಿಸ್ಟರ್ ಆಗಿದ್ದರೆ, ಆಗ ನಿಮ್ಮ ತಂದೆಯ ಮರಣಾನಂತರ ನಿಮ್ಮ ತಾಯಿಗೆ ಹೋದ ಭಾಗದಲ್ಲಿ ನಿಮಗೆ ಮತ್ತು ನಿಮ್ಮ ಅಣ್ಣನಿಗೆ ಅರ್ಧ ಭಾಗ ಇರುತ್ತದೆ. ನಿಮ್ಮ ತಾಯಿ ಯಾವಾಗ ತೀರಿಕೊಂಡರು ಎನ್ನುವ ಬಗ್ಗೆ ನೀವು ಮಾಹಿತಿ ಕೊಟ್ಟಿಲ್ಲ. ನೀವು ಕೂಡಲೇ ವಕೀಲರನ್ನು ದಾಖಲೆಗಳೊಂದಿಗೆ ಸಂರ್ಪಸಿ ವಿಭಾಗದ ದಾವೆ ಹಾಕಿ.

ನಾನು ಸರ್ಕಾರಿ ನೌಕರಿಯಲ್ಲಿ ಇದ್ದೇನೆ. ನಾನು ದಲಿತ ವರ್ಗದವಳು. ನಮ್ಮ ಪಿತ್ರಾರ್ಜಿತ ಆಸ್ತಿ ವೀಲುನಾಮೆಯ ಪ್ರಕಾರ ನನಗೆ ಬಂದಿದೆ. ಸದರಿ ಜಾಗ 1952ರಲ್ಲಿ ಡಿ.ಸಿ ಮನ್ನಾ ಜಾಗ ಆಗಿರುತ್ತದೆ. ಕಳೆದ ಆರು ವರ್ಷಗಳಿಂದ ಎಲ್ಲ ದಾಖಲೆ ನನ್ನ ಹೆಸರಿನಲ್ಲಿ ಇದೆ. ಈ ಜಾಗದಲ್ಲಿ ಕಳೆದ 25 ವರ್ಷಗಳಿಂದ ನಮ್ಮ ಜಾತಿ ಬಾಂಧವರು ಅತಿಕ್ರಮ ಪ್ರವೇಶ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಅವರೇ ತೆರಿಗೆ ಕಟ್ಟುತ್ತಿದ್ದಾರೆ. ಓಟರ್ ಐ.ಡಿ ಮತ್ತು ರೇಷನ್ ಕಾರ್ಡ್ ಈ ವಿಳಾಸಕ್ಕೇ ಇದೆ. ಆದರೆ ಅವರಿಗೆ ಆಸ್ತಿಯ ದಾಖಲೆ ಇಲ್ಲ. ಈಗ ಅವರನ್ನು ನಾನು ಹೇಗೆ ಹೊರದೂಡಿಸುವುದು? ಈ ಆಸ್ತಿಯಲ್ಲಿ ನಮ್ಮ ಕುಟುಂಬದವರ ಒಪ್ಪಿಗೆ ಇಲ್ಲದೆ 10 ವರ್ಷಗಳ ಹಿಂದೆ 220 ಕೆ.ವಿ ಹೆಚ್.ಟಿ ತಂತಿ ಹಾಕಿದ್ದಾರೆ. ಇದರಿಂದ ನಮ್ಮ ಜಾಗದಲ್ಲಿ ಕೃಷಿ ಮಾಡಲು ವಾಸ ಮಾಡಲು ಕಷ್ಟವಾಗಿದೆ. ಕೆಪಿಟಿಸಿಎಲ್ ಎಂಡಿ ಅವರಿಗೆ ಮನವಿ ಕೊಟ್ಟರೆ ತಂತಿ ಮತ್ತು ಕಂಬವನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಈಗ ನಾನು ಏನು ಮಾಡಬಹುದು ಎಂದು ಸಲಹೆ ಕೊಡಿ.

-ರಂಜಿನಿ, ಮಂಗಳೂರು

ನಿಮ್ಮ ಜಾಗದಲ್ಲಿ ಮತ್ತೊಬ್ಬರು ಅತಿಕ್ರಮ ಪ್ರವೇಶ ಮಾಡಿ ಕಟ್ಟಡ ಕಟ್ಟಿದ್ದರೆ ನೀವು ಎರಡು ವರ್ಷಗಳ ಒಳಗೆ ಕಟ್ಟಡ ಒಡೆಸಲು ದಾವೆ ಹಾಕಬೇಕಿತ್ತು. ಅಥವಾ ಸ್ವತ್ತು ನಿಮ್ಮದು ಎನ್ನುವ ಹಕ್ಕು ಘೊಷಣೆಗಾಗಿ ಮತ್ತು ಸ್ವತ್ತಿನ ಸ್ವಾಧೀನ ಕೊಡಬೇಕೆಂದು ದಾವೆ ಹಾಕಬೇಕಿತ್ತು. ಈಗ ಲಿಮಿಟೇಷನ್ ಕಾಯ್ದೆಯ ಪರಿಣಾಮದಿಂದ ನಿಮ್ಮ ಪರಿಸ್ಥಿತಿ ತುಂಬ ಕ್ಲಿಷ್ಟವಾಗಿದೆ. ಈಗ ನಿಮಗೆ ಒಂದು ದಾರಿ ಇದೆ. ಅತಿಕ್ರಮಣ ಮಾಡಿರುವವರು ನಿಮ್ಮ ಸಂಬಂಧಿಕರೇ ಆಗಿರುವುದರಿಂದ, ನೀವು ಅವರಿಗೆ ಆ ಜಾಗದಲ್ಲಿ ಇರಲು ಈವರೆಗೂ ಅವಕಾಶ ಕೊಟ್ಟಿದ್ದು ಈಗ ಅವರು ಖಾಲಿ ಮಾಡಬೇಕೆಂದು ನಿಮ್ಮ ವಕೀಲರ ಮೂಲಕ ನೋಟಿಸ್ ಕೊಡಿಸಿ. ಅವರ ಸ್ವಾಧೀನ ನಿಮ್ಮ ಒಪ್ಪಿಗೆಯ ಸ್ವಾಧೀನ ಮಾತ್ರ (ಪರ್ವಿುಸಿವ್ ಪೊಸೆಷನ್) ಎಂದು ದಾವೆಯಲ್ಲಿ ತಿಳಿಸಿ. ಅವರು ಸ್ವಾಧೀನ ಬಿಡಲು ಒಪ್ಪದಿದ್ದರೆ ಆನಂತರ ಅವರ ವಿರುದ್ಧ ಹಕ್ಕು ಘೊಷಣೆ ಮತ್ತು ಸ್ವಾಧೀನ ಪಡೆಯಲು ದಾವೆ ಹಾಕಿ ಪ್ರಯತ್ನ ಮಾಡಿ ನೋಡಿ. ವಕೀಲರನ್ನು ದಾಖಲೆಗಳೊಂದಿಗೆ ಭೇಟಿ ಮಾಡಿ ವೈಯಕ್ತಿಕ ಸಲಹೆ ಪಡೆದು ಕಾನೂನು ಕ್ರಮ ಮುಂದುವರಿಸಿ. ವಿದ್ಯುತ್ ತಂತಿ ಮತ್ತು ಕಂಬ ಬದಲಾಯಿಸುವ ಬಗ್ಗೆ: ನೀವು ಇಲಾಖೆಗೆ ಕೊಟ್ಟ ಅರ್ಜಿಗಳು, ಇಲಾಖೆ ನಿಮಗೆ ಕೊಟ್ಟಿರುವ ದಾಖಲೆಯನ್ನು ವಕೀಲರಿಗೆ ತೋರಿಸಿ. ಒಂದು ನೋಟಿಸನ್ನು ವಕೀಲರ ಮೂಲಕ ಕೊಡಿಸಿ ನೋಡಿ. ತಂತಿ ಮತ್ತು ಕಂಬವನ್ನು ಸ್ಥಳಾಂತರಿಸಬೇಕು ಅಥವಾ ನಿಮಗೆ ಪರಿಹಾರ ಧನ ಕೊಡಬೇಕೆಂದು ನೋಟಿಸಿನ ಮೂಲಕ ಕೇಳಿಕೊಳ್ಳಿ. ಇಲಾಖೆಯವರಿಂದ ಸಕಾರಾತ್ಮಕ ಉತ್ತರ ಬರದಿದ್ದರೆ ಉಚ್ಚ ನ್ಯಾಯಾಲಯದಲ್ಲಿ ರಿಟ್ ಹಾಕುವ ಬಗ್ಗೆ ಯೋಚಿಸಿ ನೋಡಿ. ನೀವು ಇನ್ನೂ ಸಮಯ ವ್ಯರ್ಥ ಮಾಡದೆ ಕೂಡಲೇ ಎರಡೂ ವಿಷಯಗಳ ಬಗ್ಗೆ ಕಾನೂನು ಕ್ರಮ ಜರುಗಿಸುವುದು ಒಳ್ಳೆಯದು.

(ಲೇಖಕರು ಹೈಕೋರ್ಟ್ ವಕೀಲರು, ಹಿರಿಯ ಮಧ್ಯಸ್ಥಿಕೆಗಾರರು) (ಸೂಚನೆ: ದಯವಿಟ್ಟು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕಳಿಸಬೇಡಿ.)

ಪ್ರತಿ ಮಂಗಳವಾರ ಪ್ರಕಟವಾಗುವ ಈ ಅಂಕಣದಲ್ಲಿ, ಮಹಿಳೆಯರು ಕುಟುಂಬ, ದಾಂಪತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಕಾನೂನಾತ್ಮಕ ವಿಷಯಗಳ ಕುರಿತಾದ ಪ್ರಶ್ನೆಗಳನ್ನು ಕೇಳಬಹುದು.

ನಮ್ಮ ವಿಳಾಸ: ಸಂಪಾದಕರು, ವಿಜಯವಾಣಿ, ನ್ಯಾಯದೇವತೆ ವಿಭಾಗ,

ನಂ. 24, ಸಾಯಿರಾಂ ಟವರ್ಸ್, ಮೊದಲನೇ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು – 560 018.

Leave a Reply

Your email address will not be published. Required fields are marked *