ಅಣ್ಣಿಗೇರಿ ಪುರಸಭೆಯಲ್ಲಿ ಮೀ ಟೂ

ಧಾರವಾಡ:  ಅಣ್ಣಿಗೇರಿ ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅಧಿಕಾರಿ ಹಾಗೂ ಗುತ್ತಿಗೆದಾರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪ್ರಕರಣ ಈಗ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಂತಕ್ಕೆ ಬಂದಿದೆ.

ಆರೋಪಿತ ಅಧಿಕಾರಿಯ ಅಮಾನತಿಗೆ ಆಗ್ರಹಿಸಿ ನೊಂದ ಮಹಿಳೆ, ಸಾಮಾಜಿಕ ಕಾರ್ಯಕರ್ತ ರಾ.ದೇ. ಕಾರಭಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು. 2016- 17ರಲ್ಲಿ ಅಣ್ಣಿಗೇರಿ ಪುರಸಭೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ ಮಹಿಳೆಯನ್ನು ಕಂದಾಯ ಶಾಖೆಗೆ ವರ್ಗಾಯಿಸಲಾಗಿತ್ತು. ಅಲ್ಲಿನ ಕಂದಾಯ ನಿರೀಕ್ಷಕ ವಿ.ಎಸ್. ಬಣಗಾರ ಮೈ- ಕೈ ಮುಟ್ಟುವ ಮೂಲಕ ಕಿರುಕುಳ ನೀಡಿದ್ದರು. ಸಮಾಧಾನ ಮಾಡುವ ನೆಪದಲ್ಲಿ ಗುತ್ತಿಗೆದಾರ ಮುತ್ತು ಸೂಡಿ ಎಂಬಾತನೂ ಅದೇ ರೀತಿ ವರ್ತಿಸಿದ್ದ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯ ಮೊರೆ ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳದೆ, ಅಧಿಕಾರಿಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದರು. ಬಳಿಕ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹನುಮಂತ ಪವಾರ, ಕಸ್ತೂರೆವ್ವ ವೈಕುಂಠ, ರೇಣುಕಾ ಬ್ಯಾಡನ್ನವರ, ಮಹಾದೇವಿ ಹಡಪದ, ದೀಪಾ ವಿನಾಯಕ ಕೋಟಿನ್, ಇತರರು ಪಾಲ್ಗೊಂಡಿದ್ದರು.