ಅಣ್ಣಾವ್ರ ನಂತರ ಫಾಲ್ಕೆ ಪ್ರಶಸ್ತಿ ಪಡೆದ ಮೂರ್ತಿ

| ಗಣೇಶ್ ಕಾಸರಗೋಡು

ಅಚಾನಕ್ ಆಗಿ ನಡೆಯುವ ಒಂದು ಘಟನೆ ವ್ಯಕ್ತಿಯೊಬ್ಬನ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ನಮ್ಮ ಮುಂದಿದೆ ಹಿರಿಯ ಛಾಯಾಗ್ರಾಹಕ ವಿ.ಕೆ. ಮೂರ್ತಿ ಅವರ ವೃತ್ತಿಬದುಕು! ಅದು ನಡೆದದ್ದು ಹೀಗೆ; ಅವರು ಉದ್ಯೋಗ ಅರಸಿ ಮುಂಬೈಗೆ ಹೋದ ಮೇಲೆ ಖ್ಯಾತ ನಿರ್ವಪಕರೂ ಆಗಿದ್ದ ನಿರ್ದೇಶಕ, ನಟ ಗುರುದತ್ ಅವರ ಸಿನಿಮಾಗಳಿಗೆ ಸಹಾಯಕ ಕ್ಯಾಮರಾಮನ್ ಆಗಿ ಕೆಲಸ ಮಾಡುತ್ತಿದ್ದರು. ಚಿತ್ರದ ಹೆಸರು; ‘ಬಾಜಿ’. ಇದು ಗುರುದತ್ ನಿರ್ದೇಶನದ ಪ್ರಥಮ ಚಿತ್ರ. ಈ ಚಿತ್ರದ ಹಾಡೊಂದರ ಚಿತ್ರೀಕರಣಕ್ಕಾಗಿ ಲಾಂಗ್ ಶಾಟ್​ನಲ್ಲಿ ಚಲಿಸುವ ನಾಯಕನ ಕನ್ನಡಿಯ ಪ್ರತಿಬಿಂಬ ಬೇಕು ಅಂದರು ಗುರುದತ್. ಮುಖ್ಯ ಛಾಯಾಗ್ರಾಹಕರು ಗುರುದತ್ ಅವರ ಈ ವಿನಂತಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿಬಿಟ್ಟರು! ನಿರ್ದೇಶಕರಿಗೆ ಅವಮಾನವಾಗುವ ಈ ಸನ್ನಿವೇಶದಲ್ಲಿ ತಕ್ಷಣವೇ ಮುಂದೆ ಬಂದವರು ಅಲ್ಲೇ ಜತೆಗಿದ್ದ ಚೂಟಿ ಮೂರ್ತಿ. ‘ಸರ್, ನಾನು ಮಾಡ್ತೀನಿ, ಒಂದು ಅವಕಾಶ ಕೊಟ್ಟು ನೋಡಿ ಪ್ಲೀಸ್…’ ಅಂತಂದುಬಿಟ್ಟರು! ಅಷ್ಟೇ, ಆ ಸನ್ನಿವೇಶದ ಚಿತ್ರೀಕರಣ ಮಾಡಲು ಗುರುದತ್ ಅನುಮತಿ ನೀಡಿದರು. ಯಾವ ಅಂಜಿಕೆಯೂ ಇಲ್ಲದೆ ಮೂರ್ತಿ ಅತ್ಯಂತ ಸಲೀಸಾಗಿ ಒಂದೇ ಟೇಕ್​ನಲ್ಲಿ ಚಿತ್ರೀಕರಿಸಿದರು. ಸೆಟ್​ನಲ್ಲಿದ್ದ ಅಷ್ಟೂ ಮಂದಿ ಚಪ್ಪಾಳೆ ತಟ್ಟಿ ಮೂರ್ತಿ ಅವರನ್ನು ಅಭಿನಂದಿಸಿದರು! ಗುರುದತ್ ಫುಲ್ ಖುಷ್. ‘ನನ್ನ ಮುಂದಿನ ಚಿತ್ರಕ್ಕೆ ನೀನೇ ಪ್ರಧಾನ ಛಾಯಾಗ್ರಾಹಕ…’ ಎಂದು ಆ ಕ್ಷಣದಲ್ಲೇ ಅನೌನ್ಸ್ ಮಾಡಿಬಿಟ್ಟರು ಗುರುದತ್! ವಿ.ಕೆ. ಮೂರ್ತಿ ಎಂಬ ಹೆಸರಿನ ಈ ವ್ಯಕ್ತಿ ಮುಂದೆ ಭಾರತೀಯ ಚಿತ್ರರಂಗದ ಮಹಾನ್ ಛಾಯಾಗ್ರಾಹಕರಾಗಿ ಬೆಳೆಯಲು ಸಾಧ್ಯವಾದ ಅಪರೂಪದ ಘಟನೆಯಿದು. ಛಾಯಾಗ್ರಹಣದ ಪ್ರಾಯೋಗಿಕ ತರಬೇತಿಗಾಗಿ ಮುಂಬೈ ಸೇರಿಕೊಂಡ ಅವರು, ಮುಂದೆ ತಮ್ಮ ಬದುಕನ್ನೇ ಪ್ರಯೋಗಕ್ಕೊಡ್ಡಿ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಪಡೆದು ಇತಿಹಾಸ ಸೃಷ್ಟಿಸಿದ್ದು ಹೀಗೆ!

ವಿ.ಕೆ. ಮೂರ್ತಿ ಜನಿಸಿದ್ದು 1922ರ ನ.26ರಂದು ಮೈಸೂರಿನಲ್ಲಿ. ಅವರ ಪೂರ್ತಿ ಹೆಸರು ವೆಂಕಟರಾಮ ಪಂಡಿತ್ ಕೃಷ್ಣಮೂರ್ತಿ. ತಂದೆ ವೆಂಕಟರಾಮ ಪಂಡಿತ್ ಸರ್ಕಾರಿ ಆಸ್ಪತ್ರೆಯ ಆಯುರ್ವೆದ ವೈದ್ಯರು. ತಾಯಿ ನಾಗಮ್ಮ ಹೌಸ್ ವೈಫ್. ಈ ದಂಪತಿಗಳ ಐದು ಮಂದಿ ಮಕ್ಕಳಲ್ಲಿ ಮೂರ್ತಿ ಅವರಿಗೆ ಎಲ್ಲರಿಂದಲೂ ಗುರುತಿಸಿಕೊಳ್ಳಬೇಕೆಂಬ ಬಯಕೆ. ಹೀಗಾಗಿ ಚಿತ್ರನಟರಾಗುವ ಹಂಬಲ! ಆದರೆ ಒಮ್ಮೆ ಕನ್ನಡಿ ನೋಡಿಕೊಂಡ ಮೂರ್ತಿ ‘ಇದು ಅಸಾಧ್ಯ’ ಎಂಬ ತೀರ್ವನಕ್ಕೆ ಬಂದರು. ನಂತರ ಪಿಟೀಲು ಕಲಿಯಲು ಹೊರಟರು. ಆದರೆ, ತಾಳ್ಮೆಯಿರಲಿಲ್ಲ. ಕೊನೆಗೆ ಕ್ಯಾಮರಾ ಕೆಲಸ ಕಲಿಯಲೆಂದು ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಸೇರಿಕೊಂಡರು. ಇಲ್ಲಿನ ಪ್ರಾಯೋಗಿಕ ಅಭ್ಯಾಸಕ್ಕಾಗಿ ಮುಂಬೈಗೆ ಹೋದ ಮೂರ್ತಿ ಅಲ್ಲಿ ಗುರುದತ್ ಜತೆ ಸೇರಿಕೊಂಡರು. ಅದೊಂದು ಅವರ ಪಾಲಿನ ಭದ್ರ ಬೆಸುಗೆಯಾಯಿತು. ಮುಂದೆ ಗುರುದತ್ ಅವರ ಎಲ್ಲ ಚಿತ್ರಗಳಿಗೆ ಮುಖ್ಯ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು ಮತ್ತು ಇದಕ್ಕಾಗಿಯೇ ಫಾಲ್ಕೆ ಪ್ರಶಸ್ತಿ ಪಡೆದದ್ದು ಈಗ ಇತಿಹಾಸ. ಕನ್ನಡಕ್ಕೆ ಎರಡು ಫಾಲ್ಕೆ ಪ್ರಶಸ್ತಿ ಬಂದವು. ಮೊದಲ ಫಾಲ್ಕೆ ಬಂದದ್ದು 1995ರಲ್ಲಿ ಡಾ.

ರಾಜ್​ಕುಮಾರ್ ಅವರಿಗೆ ಬಂದಿತ್ತು. ಮತ್ತೊಂದು ಫಾಲ್ಕೆ ಬಂದದ್ದು 2010ರಲ್ಲಿ ವಿ.ಕೆ. ಮೂರ್ತಿ ಅವರಿಗೆ. ಆದರೆ, ಇದು 2008ರ ಸಾಲಿನ ಫಾಲ್ಕೆ ಪ್ರಶಸ್ತಿ!

ನಿಮಗೆ ಗೊತ್ತೇ? ಅವರ ವೃತ್ತಿಯ ಗುರು ಗುರುದತ್ ಅವರಿಗೆ ಆತ್ಮಹತ್ಯೆ ಫೋಬಿಯಾ ಇತ್ತಂತೆ! ಈ ಹಿಂದೆ ನಾಲ್ಕಾರು ಸಲ ಆತ್ಮಹತ್ಯೆಯ ಪ್ರಯತ್ನ ಪಟ್ಟಿದ್ದೂ ಉಂಟಂತೆ. ಆಗೆಲ್ಲ ಗುರುದತ್ ಅವರನ್ನು ಬದುಕಿಸಿದ್ದು ಇದೇ ಮೂರ್ತಿಗಳು! ಅವರನ್ನು ಬದುಕಿಸಿದಂತೆಯೇ ಅವರ ಸಿನಿಮಾವನ್ನೂ ಬದುಕಿಸಿದ್ದು ಮತ್ತದೇ, ಮೂರ್ತಿಗಳು ಎನ್ನುವುದಕ್ಕೆ ಸಾಕ್ಷಿ ಇದೆ. 1960ರಲ್ಲಿ ತೆರೆಕಂಡ ‘ಕಾಗಜ್ ಕೆ ಫೂಲ್’ ಉದ್ಯಮದ ದೃಷ್ಟಿಯಲ್ಲಿ ದೊಡ್ಡ ಫ್ಲಾಪ್ ಸಿನಿಮಾ. ಈ ಸೋಲಿನಿಂದ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕಂಗಾಲಾದ ಗುರುದತ್ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ! ಆಗ ಇದನ್ನು ತಪ್ಪಿಸಿದ್ದು ಮೂರ್ತಿಗಳು. ನಂತರದ ದಿನಗಳಲ್ಲಿ ಇದೇ ಸಿನಿಮಾ ಮರು ಬಿಡುಗಡೆಯಾದಾಗ ಹೊಸ ಪೀಳಿಗೆಯ ಪ್ರೇಕ್ಷಕರು ಈ ಚಿತ್ರಕ್ಕೆ ‘ಕ್ಲಾಸಿಕ್ ಸಿನಿಮಾ’ ಎಂಬ ಲೇಬಲ್ ನೀಡಿ ಗೌರವಿಸಿದರು! ಆಗ ತಮ್ಮನ್ನು ಬದುಕಿಸಿದ್ದಕ್ಕೆ ಗುರುದತ್ ಅವರು ಮೂರ್ತಿಗೆ ಥ್ಯಾಂಕ್ಸ್ ಹೇಳಿದ ಕಥೆಯನ್ನು ಸ್ವತಃ ಮೂರ್ತಿ ಅವರ ಮಾತಲ್ಲೇ ನೀವು ಕೇಳಬೇಕು. ಈಗ ಈ ಚಿತ್ರವನ್ನು ಸಾರ್ವಕಾಲಿಕ ಶ್ರೇಷ್ಠ ಚಿತ್ರವೆಂದು ಇಡೀ ಜಗತ್ತೇ ಗುರುತಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಮೂರ್ತಿಯವರ ಕ್ಯಾಮರಾ ಕುಸುರಿ ಕೆಲಸ ಎನ್ನುವುದು ಸರ್ವವೇದ್ಯ. ಅಂದಹಾಗೆ, ಹಲವು ಪ್ರಥಮಗಳ ಸಾಹಸಿ ಈ ವಿ.ಕೆ. ಮೂರ್ತಿ. ಅವರು ಕ್ಯಾಮರಾ ಕೆಲಸ ಮಾಡಿದ ‘ಕಾಗಜ್ ಕೆ ಫೂಲ್’ ಚಿತ್ರ ದೇಶದ ಪ್ರಥಮ ಸಿನಿಮಾಸ್ಕೋಪ್ ಚಿತ್ರ! ಹೆಲಿಕಾಪ್ಟರ್​ನಲ್ಲಿ ಕುಳಿತು ಚಿತ್ರೀಕರಿಸಿದ ಭಾರತದ ಪ್ರಥಮ ಸಾಹಸಿ ಅವರೇ. ಮೈಸೂರಿನ ಬೃಂದಾವನದಲ್ಲಿ ಚಿತ್ರೀಕರಿಸಿದ ಪ್ರಥಮ ಛಾಯಾಗ್ರಾಹಕರು ಅವರೇ. ‘ಗನ್ಸ್ ಆಫ್ ನವರೋನ್’ ಚಿತ್ರಕ್ಕಾಗಿ ಹಾಲಿವುಡ್ ಪ್ರವೇಶ ಪಡೆದ ಪ್ರಥಮ ಕ್ಯಾಮರಾಮನ್ ಅವರೇ. ಅಂದಹಾಗೆ, 1969ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ಥಾಪನೆಯಾದ ನಂತರ ಛಾಯಾಗ್ರಾಹಕರೊಬ್ಬರು ಈ ಗೌರವಕ್ಕೆ ಪಾತ್ರರಾಗಿರುವುದು ಅದೇ ಪ್ರಥಮ!

ಈಗಿನವರಂತೆ ವೃತ್ತಿ ಬದುಕಿನಲ್ಲಿ ಅವರು ಲಕ್ಷ ಲಕ್ಷ ರೂಪಾಯಿಗಳನ್ನು ನೋಡೇ ಇಲ್ಲ. ಪ್ರಥಮ ಬಾರಿಗೆ ನೋಡಿದ್ದು ಫಾಲ್ಕೆ ಪ್ರಶಸ್ತಿಯ 10 ಲಕ್ಷ ರೂಪಾಯಿಗಳನ್ನು! ಈ ಬಗ್ಗೆ ಮೂರ್ತಿಯವರು ಪತ್ರಕರ್ತರೊಬ್ಬರ ಬಳಿ ಹೇಳಿಕೊಂಡದ್ದು ಹೀಗೆ; ‘ನಾನು ಲಕ್ಷ ರೂಪಾಯಿಗಳನ್ನು ನೋಡಿದ್ದು ಪ್ರಶಸ್ತಿ ಬಂದ ಮೇಲೆಯೇ. ಆದರೆ ಖರ್ಚು ಮಾಡಬೇಕಾದ ಸಂದರ್ಭದಲ್ಲಿ ಸಿಗದ ಈ ಮೊತ್ತ ಈಗ ಸಿಕ್ಕಿದೆ. ಈ ವಯಸ್ಸಲ್ಲಿ ನಾನು ಇದನ್ನು ಹೇಗೆ ಖರ್ಚು ಮಾಡಲಿ ಹೇಳಿ?’ ಎಂದು ಪ್ರಶ್ನಿಸಿದ್ದರು ಅಂದು!

ಹತ್ತನೇ ಕ್ಲಾಸಿನಲ್ಲಿರುವಾಗ ಶಾಲೆಗೆ ಚಕ್ಕರ್ ಹೊಡೆದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಸೇರಿದ್ದರಿಂದಾಗಿಯೇ ಈಗ ತಮಗೆ ಮಾಸಿಕ ಮೂರು ಸಾವಿರ ರೂಪಾಯಿಗಳ ಪಿಂಚಣಿ ಬರುತ್ತಿದೆ, ಇದುವೇ ನನ್ನ ಈಗಿನ ಸಂಪಾದನೆ’ ಎಂದು ತಮಾಷೆಯಾಗಿ ಹೇಳುತ್ತಿದ್ದರು ಮೂರ್ತಿ ಸಾಹೇಬರು! ಫಾಲ್ಕೆ ಪ್ರಶಸ್ತಿ ಘೊಷಣೆಯಾದಾಗ ಮೂರ್ತಿ ಅವರು ಮುಂಬೈ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದರು. ಶಂಕರಮಠದಲ್ಲೊಂದು ಸ್ವಂತ ಬಂಗಲೆಯಿತ್ತು. ಸಂಜೆ ಹೊತ್ತು ಆ ಬಂಗಲೆಯ ಮುಂದಿನ ಗೇಟಿನ ಬಳಿ ನಿಂತುಕೊಳ್ಳುತ್ತಿದ್ದರು. ಈಗ ಆ ಬಂಗಲೆ ಇಲ್ಲ. ಗೇಟೂ ಇಲ್ಲ. ಎಲ್ಲ ನೆಲಸಮ. ಮೂರ್ತಿ ಅವರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಆದರೆ ಅವರು ಸೃಷ್ಟಿಸಿದ ಮಾಯಾಲೋಕದ ದೃಶ್ಯಾವಳಿಗಳು ಎಂದೆಂದೂ ಜೀವಂತ. ಅಮರ…