ಅಣೆಕಟ್ಟೆಯ ಮೇಲಿಂದ ವಾಹನ ಸಂಚಾರ ಬಂದ್

ಕಾರವಾರ: ಭದ್ರತೆಯ ದೃಷ್ಟಿಯಿಂದ ಕದ್ರಾ ಅಣೆಕಟ್ಟೆಯ ಮೇಲೆ ವಾಹನ ಸಂಚಾರ ಇನ್ನೊಂದೇ ದಿನದಲ್ಲಿ ಬಂದಾಗಲಿದೆ.

ಅಣೆಕಟ್ಟೆಯ ಎದುರು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ ಕದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಿದಾಗ ಎದುರಿನ ಸೇತುವೆ ಮುಳುಗಡೆಯಾಗುವುದರಿಂದ ಅಣೆಕಟ್ಟೆಯ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಆದರೆ, ಗೇಟ್​ಗಳನ್ನು ಬಂದ್ ಮಾಡಿದ ಒಂದೇ ದಿನದಲ್ಲಿ ಅಣೆಕಟ್ಟೆಯ ಮೇಲೆ ವಾಹನ ಸಂಚಾರ ನಿಷೇಧಿಸಲಾಗುತ್ತಿತ್ತು. ಆದರೆ, ಈ ಬಾರಿ ನೀರು ಬಂದ್ ಮಾಡಿ 10 ದಿನ ಕಳೆದ ನಂತರವೂ ಅಣೆಕಟ್ಟೆಯ ಮೇಲೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಅಣೆಕಟ್ಟೆಯ ಮೇಲಿನ ಸ್ಥಳ ಸುತ್ತಲಿನ ಪಿಕ್​ನಿಕ್ ಸ್ಪಾಟ್​ನಂತಾಗಿತ್ತು. ಫೋಟೊಶೂಟ್, ಸೆಲ್ಪೀಗಳಲ್ಲಿ ಹಲವರು ನಿರತರಾಗಿರುತ್ತಿದ್ದರು.

ರಸ್ತೆ ರಿಪೇರಿ: ಐದು ದಿನಗಳವರೆಗೆ ಕದ್ರಾ ಅಣೆಕಟ್ಟೆಯ 10 ಗೇಟ್​ಗಳನ್ನು ತೆಗೆದು ನಿರಂತರವಾಗಿ 1 ಲಕ್ಷ ಕ್ಯೂಸೆಕ್​ಗೂ ಅಧಿಕ ನೀರು ಬಿಡುಗಡೆ ಮಾಡಲಾಗಿತ್ತು. ಇದರಿಂದ ಅಣೆಕಟ್ಟೆಯ ಎದುರು ರಸ್ತೆ ಕೊಚ್ಚಿಕೊಂಡು ಹೋಗಿತ್ತು. ಸುಮಾರು 5 ಮೀಟರ್ ಸುತ್ತಳತೆ ಪ್ರದೇಶದಲ್ಲಿ ದೊಡ್ಡ ಹೊಂಡ ಬಿದ್ದಿತ್ತು. ಸೇತುವೆಯ ರೇಲಿಂಗ್​ಗಳು ಕಿತ್ತುಕೊಂಡು ಹೋಗಿದ್ದವು. ಅಣೆಕಟ್ಟೆಯಿಂದ ನೀರು ಬಂದ್ ಮಾಡಿದ ಬಳಿಕವೂ ಇಲ್ಲಿ ವಾಹನಗಳ ಸಂಚಾರ ಪ್ರಾರಂಭ ಮಾಡಲು ಸಾಧ್ಯವಾಗಿರಲಿಲ್ಲ. ಕೆಪಿಸಿ ತಾತ್ಕಾಲಿಕ ಕಾಮಗಾರಿ ನಡೆಸಿ ಹೊಂಡ ತುಂಬಿದ್ದು, ಸೇತುವೆ ಮೇಲಿಂದ ವಾಹನ ಸಂಚಾರಕ್ಕೆ ರಸ್ತೆಯನ್ನು ತೆರೆಯಲು ಸಿದ್ಧತೆ ನಡೆಸಿದೆ.

ನಿರಂತರವಾಗಿ ಕದ್ರಾ ಅಣೆಕಟ್ಟೆಯ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಭದ್ರತೆಯ ದೃಷ್ಟಿಯಿಂದ ಸಾಧ್ಯವಿಲ್ಲ. ಎದುರಿನ ಸೇತುವೆ ಘಟ್ಟಿಯಾಗಿದೆ. ಹಾಳಾಗಿದ್ದ ರಸ್ತೆಯನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ನಂತರ ಸೇತುವೆ ರೇಲಿಂಗ್ ರಿಪೇರಿ, ಬೇಸಿಗೆಯ ನಂತರ ಕಾಯಂ ಕಾಮಗಾರಿ ಕೈಗೊಳ್ಳಲಾಗುವುದು. —- ಶಿವಪ್ರಸಾದ್ ಕೆಪಿಸಿ ಕದ್ರಾ ಸಿವಿಲ್ ವಿಭಾಗದ ಇಂಜಿನಿಯರ್

Leave a Reply

Your email address will not be published. Required fields are marked *