ಅಣತಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಚನ್ನರಾಯಪಟ್ಟಣ: ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ತಾಲೂಕಿನ ಬಾಗೂರು ಹೋಬಳಿ ಅಣತಿ ಗ್ರಾಮ ಪಂಚಾಯಿತಿಗೆ ಪ್ರಸ್ತುತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ.

5 ಕಂದಾಯ ಗ್ರಾಮ ಹಾಗೂ 2 ದಾಖಲೆ ಗ್ರಾಮಗಳನ್ನು ಹೊಂದಿರುವ ಗ್ರಾಮ ಪಂಚಾಯಿತಿ 2018-19ನೇ ಸಾಲಿನಲ್ಲಿ ಕೈಗೊಂಡ ಪ್ರಗತಿ ಕಾರ್ಯವನ್ನು ಆಧರಿಸಿ ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ವಳಗೇರಹಳ್ಳಿ, ಅಣತಿ, ಬೀಚಗೊಂಡನಹಳ್ಳಿ, ಹುಲ್ಲೇನಹಳ್ಳಿ, ಕೋಡಿಹಳ್ಳಿ, ಇನ್ನೂ ದಾಖಲೆ ಗ್ರಾಮಗಳಾದ ಉದ್ಲಾಪುರ ಹಾಗೂ ತಿಮ್ಲಾಪುರ ಸೇರಿ 7 ಹಳ್ಳಿಗಳನ್ನು ಒಳಗೊಂಡಿರುವ ಅಣತಿ ಗ್ರಾಮ ಪಂಚಾಯಿತಿ 14 ಸದಸ್ಯರ ಬಲ ಹೊಂದಿದೆ.

ಯೋಜನೆಗಳ ಸದ್ಬಳಕೆ
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 1.35 ಕೋಟಿ ರೂ. ಅನುದಾನದ ಜತೆಗೆ 14ನೇ ಹಣಕಾಸು ಹಾಗೂ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಎಲ್ಲ ಗ್ರಾಮಗಳಲ್ಲಿಯೂ ಕಾಂಕ್ರೀಟ್ ರಸ್ತೆ, ಚರಂಡಿ, ಹಳ್ಳ ಪ್ರದೇಶಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ, ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಜಮೀನು ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಶೇ.25 ರಷ್ಟು ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕಲ್ಯಾಣ ಕಾರ್ಯಕ್ರಮ, ಶೇ.50 ರಷ್ಟು ಅಂಗವಿಕಲರಿಗಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. 2018-19ನೇ ಸಾಲಿನಲ್ಲಿ ಶೇ.138 ರಷ್ಟು ಪ್ರಗತಿ ಕಂಡಿದೆ.

ಬಯಲು ಶೌಚಮುಕ್ತ ಗ್ರಾಪಂ: ಎಲ್ಲ ಗ್ರಾಮಗಳಲ್ಲಿಯೂ ಶೌಚಗೃಹಗಳನ್ನು ನಿರ್ಮಿಸುವ ಮೂಲಕ ಬಯಲು ಶೌಚಮುಕ್ತ ಗ್ರಾಮ ಪಂಚಾಯಿತಿ ಎನಿಸಿಕೊಂಡಿದೆ. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೀದಿ ದೀಪಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ.

ಅಭಿವೃದ್ಧಿಯಲ್ಲಿ ಮುಂಚೂಣಿ
ಮಹತ್ವದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಬಾಗೂರು, ಅಣತಿ, ಹಿರೀಸಾವೆ, ಬೆಕ್ಕ ಹಾಗೂ ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಗುರುತಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಸಿ.ಮಹೇಶ್ 5 ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದರು. ಅಂತಿಮವಾಗಿ ಎಲ್ಲ ಅಣತಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಗಿದೆ.

ಅ.2 ರಂದು ಪುರಸ್ಕಾರ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅ.2 ರಂದು ನಡೆಯಲಿರುವ ಗಾಂಧಿ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಜೆ.ಸತೀಶ್, ಗ್ರಾಪಂ ಅಧ್ಯಕ್ಷ ವಿ.ಎನ್.ಲೋಕೇಶ್ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ.

Leave a Reply

Your email address will not be published. Required fields are marked *