ಅಡೆತಡೆ ಮೆಟ್ಟಿನಿಂತರೆ ಯಶಸ್ಸು ನಿಶ್ಚಿತ

ಶಿವಮೊಗ್ಗ: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಂದರ್ಭದಲ್ಲಿ ಆಂತರಿಕ ಮತ್ತು ಬಾಹ್ಯ ಅಡೆತಡೆಗಳಿಗೆ ಎದೆಗುಂದದೆ ಮುಂದುವರಿದಲ್ಲಿ ಯಶಸ್ಸು ಸಿಗಲಿದೆ ಎಂದು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಸಹಾಯಕ ಕಮೀಷನರ್ ದೇವರಾಜ್ ಅಭಿಪ್ರಾಯಪಟ್ಟರು.

ಕುವೆಂಪು ವಿವಿ ಎಸ್ಸಿ-ಎಸ್ಟಿ ಘಟಕ ಶನಿವಾರ ಏರ್ಪಡಿಸಿದ್ದ ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಪದವಿ ಅಥವಾ ಸ್ನಾತಕೋತ್ತರ ಪದವಿ ನಂತರ ಉದ್ಯೋಗದಲ್ಲಿ ತೊಡಗಿಕೊಳ್ಳದೆ ಪರೀಕ್ಷೆಗಳಿಗೆ ತಯಾರಾಗುವ ಅವಧಿಯಲ್ಲಿ ಕೆಲವೊಮ್ಮೆ ಜನರಿಂದ ಅವಮಾನ, ಮೂದಲಿಕೆ ಎದುರಾಗುವುದು ಸಹಜ. ಆದರೆ ಅದ್ಯಾವುದಕ್ಕೂ ಮನ್ನಣೆ ನೀಡದೆ ಗುರಿಯತ್ತ ಗಮನ ಕೇಂದ್ರೀಕರಿಸಬೇಕು ಎಂದರು.

ಐಎಎಸ್, ಕೆಎಎಸ್, ಪಿಡಿಒ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ವಿದ್ಯಾರ್ಥಿಗಳು ಇಂಟರ್​ನೆಟ್, ಸೋಶಿಯಲ್ ಮೀಡಿಯಾದಂತಹ ಆಕರ್ಷಣೆಗಳಿಂದ ದೂರವುಳಿದು ತಪಸ್ಸಿನಂತೆ ಓದಬೇಕೆಂದು ಸಲಹೆ ನೀಡಿದರು.

ವಿವಿ ಹಣಕಾಸು ಅಧಿಕಾರಿ ಪ್ರೊ. ಹಿರೇಮಣಿ ನಾಯ್್ಕ ಮಾತನಾಡಿ, ವಿವಿ ಎಸ್ಸಿ-ಎಸ್ಟಿ ಫಟಕಗಳ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಗೆ ತಯಾರಿಸುವ ನಿಟ್ಟಿನಲ್ಲಿ ಸರ್ಕಾರ ಎಸ್​ಸಿಪಿ ಮತ್ತು ಟಿಎಸ್​ಪಿ ಯೋಜನೆಯಡಿ ಆರ್ಥಿಕ ಸಹಾಯ ನೀಡಿದೆ. ಇಂತಹ ತರಬೇತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಎಸ್ಸಿ-ಎಸ್ಟಿ ಘಟಕದ ಸಂಚಾಲಕ ಡಾ. ಬಿ.ತಿಪ್ಪೇಸ್ವಾಮಿ, ಒಬಿಸಿ ಘಟಕದ ಸಂಚಾಲಕ ಡಾ. ವಿಜಯ್ಕುಮಾರ್, ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಕಾಂತರಾಜು, ಸೋಮಪ್ಪ ದುಂಡಿಗೇರಿ, ವಿಠಲ್ ಜೋಡಟ್ಟಿ, ನಾಗರಾಜು ಇದ್ದರು. ವಿವಿಧ ವಿಭಾಗಗಳ 200ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *