ಅಡುಗೆ ವ್ಯವಸ್ಥೆ ಮೇಲ್ವಿಚಾರಣೆಗೆ ಹೈ ಅಲರ್ಟ್!

ಇಮಾಮಹುಸೇನ್ ಗೂಡುನವರ ಧಾರವಾಡ

ಪ್ರತಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಕೆಲ ಶುಚಿತ್ವ ಕ್ರಮಗಳನ್ನು ಅನುಸರಿಸಿ ಅಡುಗೆ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಈ ಬಾರಿ ಧಾರವಾಡದಲ್ಲಿ ನಡೆದ ಅಕ್ಷರ ಜಾತ್ರೆಯಲ್ಲಿ ಶುಚಿತ್ವದ ಕ್ರಮಗಳ ಅನುಸರಣೆ ಜತೆಗೆ, ಸುರಕ್ಷತೆಗೂ ವಿಶೇಷ ಒತ್ತು ನೀಡಲಾಗಿದೆ. ಅದರಲ್ಲೂ 25 ಸಿಸಿ ಕ್ಯಾಮರಾಗಳ ಕಣ್ಗಾವಲು ಹಾಗೂ ಭಾರೀ ಭದ್ರತೆಯಲ್ಲಿಬಗೆಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ.

ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ವಿಷಪ್ರಾಷನ ಪ್ರಕರಣ ರಾಜ್ಯಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಪರಿಣಾಮ ಎಚ್ಚೆತ್ತಿರುವ ಆಹಾರ ನಿರ್ವಹಣಾ ಸಮಿತಿಯ ಅಧಿಕಾರಿಗಳು, ಅಡುಗೆ ಕೋಣೆಗೆ ಭಾರಿ ಭದ್ರತೆ ಒದಗಿಸಿದ್ದಾರೆ. ಕೃಷಿ ವಿವಿ ಆವರಣದಲ್ಲೇ ಮೂರು ಪ್ರತ್ಯೇಕ ಕಡೆಗಳಲ್ಲಿ ಅಡುಗೆ ತಯಾರಾಗುತ್ತಿದೆ. ಅಡುಗೆ ಮನೆಯ ಪೂರ್ಣ ಚಟುವಟಿಕೆ ಸೆರೆ ಹಿಡಿಯಲು 25ಕ್ಕಿಂತ ಅಧಿಕ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಸಾಹಿತ್ಯ ಸಮ್ಮೇಳನದಲ್ಲಿ ಇಂಥದೊಂದು ಕಣ್ಗಾವಲು ಇದೇ ಪ್ರಥಮ ಬಾರಿ ನಡೆದಿದೆ.

ಸಮ್ಮೇಳನಕ್ಕೆ ಬರುವವರಿಗೆ ಬಗೆಬಗೆಯ ಊಟದ ವ್ಯವಸ್ಥೆ ಮಾಡಲಾಗಿದೆ. 2000ಕ್ಕಿಂತ ಅಧಿಕ ಬಾಣಸಿಗರು ಅಡುಗೆ ತಯಾರಿಯಲ್ಲಿ ತೊಡಗಿದ್ದಾರೆ. ಆಹಾರ ನಿರ್ವಹಣಾ ಸಮಿತಿಯ ಅಧಿಕಾರಿಗಳು ನಿರಂತರವಾಗಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಅಡುಗೆ ವ್ಯವಸ್ಥೆಯಲ್ಲಿ ಲೋಪವಾಗದಂತೆ ಎಚ್ಚರ ವಹಿಸಿದ್ದಾರೆ.

ಉ.ಕ. ಸ್ಪೆಷಲ್

ಸಮ್ಮೇಳನದಲ್ಲಿ ಉತ್ತರ ಕರ್ನಾಟಕದ ಸ್ಪೆಷಲ್ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಮ್ಮೇಳನದ ಆರಂಭದ ದಿನವಾದ ಶುಕ್ರವಾರ ಬೆಳಗ್ಗೆ ಶಿರಾ, ಉಪ್ಪಿಟು, ಚಹಾ ನೀಡಲಾಯಿತು. ಮಧ್ಯಾಹ್ನ ಗೋಧಿಹುಗ್ಗಿ, ಚಪಾತಿ, ಖಡಕ್ ರೊಟ್ಟಿ, ಬದನೆಕಾಯಿ ಪಲ್ಯ, ಮಡಿಕೆ ಕಾಳಿನ ಪಲ್ಯ, ಅನ್ನ-ಸಾರು, ಉಪ್ಪಿನಕಾಯಿ, ಮಜ್ಜಿಗೆ/ಮೊಸರು ಉಣಬಡಿಸಲಾಯಿತು. ರಾತ್ರಿ ಶಾವಿಗೆ ಪಾಯಸ, ವೆಜ್ ದಮ್ ಬಿರಿಯಾನಿ, ಬಿಳಿ ಅನ್ನ, ರಸಂ, ಚಟ್ನಿ ಹಾಗೂ ಉಪ್ಪಿನಕಾಯಿ ವ್ಯವಸ್ಥೆ ಮಾಡಲಾಗಿದೆ.

ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಸಾಹಿತ್ಯಾಸಕ್ತರು ಉತ್ತರ ಕರ್ನಾಟಕದ ಸ್ಪೆಷಲ್ ಊಟ ಸವಿದು ಹಸಿವು ನೀಗಿಸಿಕೊಂಡರು. ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಜನ ಸೇರಿದ ಕಾರಣ ಊಟ ಮಾಡಲು ಸರದಿ ಸಾಲಲ್ಲಿ ನಿಂತ ಪರಿಣಾಮ ಒಂದಿಷ್ಟು ನೂಕುನುಗ್ಗಲು ಉಂಟಾಯಿತು. ಬೇಗ ಊಟ ಉಣಬಡಿಸುವಂತೆ ಕೆಲವರು ಸಣ್ಣಪುಟ್ಟ ಗಲಾಟೆ, ವಾಗ್ವಾದವನ್ನೂ ನಡೆಸಿದರು. ಊಟೋಪಹಾರ ಸಮಿತಿಯವರು ಹೆಚ್ಚಿನ ಜನರನ್ನು ಕೌಂಟರ್​ಗಳಲ್ಲಿ ನೇಮಿಸಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು. ಸ್ವಲ್ಪ ತಡವಾಗಿ ಬಂದ ಕೆಲವರು ಊಟ ಸಿಗದೇ ಬೇಸರದಿಂದ ಹೊರನಡೆದರು.

ನೀಗದ ಬಾಯಾರಿಕೆ!

ಕೃಷಿ ವಿವಿ ಆವರಣದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಊಟ ಮಾಡಿ ಬಂದವರಿಗೆ ಹಾಗೂ ಬಿಸಿಲಲ್ಲಿ ತಿರುಗಾಡಿ ಬಂದವರಿಗೆ ಸಮರ್ಪಕ ಕುಡಿವ ನೀರು ಸಿಗಲಿಲ್ಲ. ಸಮ್ಮೇಳನದ ಮುಖ್ಯವೇದಿಕೆ ಎದುರು ನಲ್ಲಿಗಳನ್ನು ಅಳವಡಿಸಿದ್ದರೂ ಅವುಗಳಿಂದ ಬೊಗಸೆ ನೀರು ಸಹ ಸಿಗಲಿಲ್ಲ. ಜನ ಬಾಯಾರಿಕೆ ನೀಗಿಸಿಕೊಳ್ಳಲು ಪ್ರಯಾಸಪಟ್ಟರು. ಅಗತ್ಯಕ್ಕೆ ತಕ್ಕಷ್ಟು ಶೌಚಗೃಹಗಳು ಇಲ್ಲದ್ದರಿಂದ ಕೆಲವರು ಬಯಲಿನ ಹಾದಿಯನ್ನೂ ಹಿಡಿದರು.

ಈ ಬಾರಿ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. 2 ಸಾವಿರ ಸಿಬ್ಬಂದಿ ಅಡುಗೆ ತಯಾರಿಯಲ್ಲಿ ತೊಡಗಿದ್ದಾರೆ. 25ಕ್ಕಿಂತ ಅಧಿಕ ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದ್ದು, ಅಡುಗೆ ತಯಾರಿಯ ಪ್ರತಿ ಚಟುವಟಿಕೆ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಆಹಾರ ಮಾದರಿ ಪರೀಕ್ಷೆ ನಂತರವೇ ಸಾರ್ವಜನಿಕರಿಗೆ ಉಣಬಡಿಸುವ ವ್ಯವಸ್ಥೆ ಮಾಡಲಾಗಿದೆ.
| ಸದಾಶಿವ ಮರ್ಜಿ, ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಧಾರವಾಡ