ಅಡಕೆ ವಹಿವಾಟಿಗೆ ವಿಷನ್ 2020

ಶಿವಮೊಗ್ಗ: ಮ್ಯಾಮೋಸ್(ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ ನಿಯಮಿತ) ಮುಂದಿನ ದಿನಗಳಲ್ಲಿ ‘ವಿಷನ್ 2020 ಯೋಜನೆ’ಯಡಿ ಅಡಕೆ ವಹಿವಾಟಿ ನಡೆಸಲು ನಿರ್ಧರಿಸಿದ್ದು, ಸಂಘದ ಕಾರ್ಯವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸುವ ಚಿಂತನೆ ನಡೆಸಿದೆ.

ಮುಂದಿನ ಒಂದು ವರ್ಷದಲ್ಲಿ ಇ-ಟೆಂಡರ್ ಮೂಲಕ 1 ಲಕ್ಷ ಕ್ವಿಂಟಾಲ್ ಹಾಗೂ ನೇರ ಖರೀದಿ ಮೂಲಕ 50 ಸಾವಿರ ಕ್ವಿಂಟಾಲ್ ಅಡಕೆ ಖರೀದಿ ಗುರಿ ಹೊಂದಲಾಗಿದೆ ಎಂದು ಸಂಘದ ಅಧ್ಯಕ್ಷರೂ ಆದ ಡಿಸಿ ಕೆ.ಬಿ.ಶಿವಕುಮಾರ್ ಹೇಳಿದರು.

ಎಪಿಎಂಸಿ ಆವರಣದ ಮ್ಯಾಮ್ಕೋಸ್ ಸಭಾಂಗಣದಲ್ಲಿ ಶುಕ್ರವಾರ ಮ್ಯಾಮ್ಕೋಸ್​ನ 79ನೇ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತಿಂಗಳಿಗೆ ಸರಾಸರಿ 10ರಿಂದ 12.5 ಸಾವಿರ ಕ್ವಿಂಟಾಲ್ ಅಡಕೆ ಮಾರಾಟ ಮಾಡುವುದು. ಸಂಘದ ವ್ಯಾಪ್ತಿಯಲ್ಲಿ ನೇರ ಖರೀದಿ ಕೇಂದ್ರಗಳನ್ನು ಹಂತ ಹಂತವಾಗಿ ಪ್ರಾರಂಭಿಸುವುದು. ಶಿವಮೊಗ್ಗ, ಚನ್ನಗಿರಿ, ತೀರ್ಥಹಳ್ಳಿ, ಹೊಸನಗರ ಅಥವಾ ಸಾಗರ ಮತ್ತು ಸೊರಬ ತಾಲೂಕಿನಲ್ಲಿ ಗ್ರೇಡಿಂಗ್ ಘಟಕ ಆರಂಭಿಸುವುದು ಹಾಗೂ ಬೇರೆ ಸಹಕಾರ ಸಂಘಗಳಲ್ಲಿಯೂ ಅಡಕೆ ಖರೀದಿಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಆನ್​ಲೈನ್ ವ್ಯಾಪ್ತಿಗೆ ವ್ಯವಹಾರ: ಸಂಘದಲ್ಲಿ ಕಟಾವು ಮತ್ತು ಕೊಳೆ ಔಷಧ ಸಾಲ ಪಡೆದು ಸುಸ್ತಿಯಾಗದೆ ಸಕಾಲದಲ್ಲಿ ಮರುಪಾವತಿ ಮಾಡುವ ಸದಸ್ಯರಿಗೆ ಬಡ್ಡಿದರವನ್ನು ಶೇ 11.50ರಿಂದ 11ಕ್ಕೆ ಇಳಿಸಲಾಗಿದೆ. ಎಲ್ಲ ಪಾವತಿಗಳನ್ನು ಉಳಿತಾಯ ಖಾತೆ ಮೂಲಕವೇ ಮಾಡಲಾಗುತ್ತಿದ್ದು, ಸಂಘದ ಕೇಂದ್ರ ಕಚೇರಿ ಮತ್ತು ಎಲ್ಲ ಶಾಖೆಗಳ ವ್ಯವಹಾರವನ್ನು ಆನ್​ಲೈನ್​ಗೆ ಒಳಪಡಿಸಲಾಗುತ್ತಿದೆ. ಸಂಘದ ಆರು ಶಾಲೆಗಳಲ್ಲಿ ನಿರ್ವಿುಸುತ್ತಿರುವ ಗೋದಾಮು ಮತ್ತು ಕಚೇರಿ ಕಟ್ಟಡಗಳಲ್ಲಿ ಸಾಗರ, ಹೊಸನಗರ, ಕೊಪ್ಪ, ತರೀಕೆರೆ ಮತ್ತು ಬೀರೂರು ಶಾಖೆಗಳಲ್ಲಿ ಕಟ್ಟಡ ಪೂರ್ಣಗೊಂಡಿವೆ ಎಂದರು.

ಅವಶ್ಯಕತೆ ಇರುವೆಡೆ ಸಂಘದ ಶಾಖೆ, ಏಜೆನ್ಸಿ, ಖರೀದಿ ಅಥವಾ ಮಾರಾಟ ಕೇಂದ್ರಗಳನ್ನು ತೆರೆಯುವ ಕುರಿತು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಘದಲ್ಲಿ ಅಡಕೆ ಸಂಸ್ಕರಣಾ, ಸ್ವಚ್ಛಗೊಳಿಸುವ ಯಂತ್ರ, ಅಡಕೆ ಮೂಟೆ ಸಾಗಣೆಗೆ ಯಂತ್ರದ ವ್ಯವಸ್ಥೆ ಇತ್ಯಾದಿ ಯಾಂತ್ರೀಕರಣ ಸೌಲಭ್ಯ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂಘದ ಸದಸ್ಯರು ಮತ್ತು ಅವರ ಕುಟುಂಬ ಹಾಗೂ ಅವರ ಜಮೀನುಗಳಲ್ಲಿ ಕೆಲಸ ಮಾಡುವ ಕೃಷಿ ಕೂಲಿ ಕಾರ್ವಿುಕರಿಗೆ ಸಂಬಂಧಿಸಿದಂತೆ ಗುಂಪು ವಿಮೆ ಯೋಜನೆಯಡಿ 2017-18ರಲ್ಲಿ 20,928 ಹಾಗೂ 20181-18ರಲ್ಲಿ 24,423 ಜನರು ಹೆಸರು ನೋಂದಾಯಿಸಿದ್ದು, ಮತ್ತಷ್ಟು ಸದಸ್ಯರನ್ನು ಈ ಯೋಜನೆ ವ್ಯಾಪ್ತಿಯಲ್ಲಿ ತರಲು ಉದ್ದೇಶಿಸಲಾಗಿದೆ ಎಂದರು.

ಬೆಳೆ ಪರಿಹಾರ ವಿಮೆ ಪರಿಶೀಲನೆ: ಅಡಕೆ ಬೆಳೆ ಪರಿಹಾರ ವಿಮೆ ಜಿಲ್ಲಾಡಳಿತಕ್ಕೆ ಬಂದಿರುವ ಬಗ್ಗೆ ಪರಿಶೀಲಿಸಲಾಗುವುದು. ಜತೆಗೆ ಮುಂದಿನ ವಾರ ವಿಮಾ ಕಂಪನಿಗಳ ಸಭೆ ನಿಗದಿ ಮಾಡಿದ್ದು, ಮ್ಯಾಮ್ಕೋಸ್​ನ ಕೆಲ ನಿರ್ದೇಶಕರನ್ನು ಸಭೆಗೆ ಆಹ್ವಾನಿಸಲಾಗುವುದು. ಆ ಮೂಲಕ ಬೆಳೆ ವಿಮೆ ಪರಿಹಾರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಕೆ.ಬಿ.ಶಿವಕುಮಾರ್ ಹೇಳಿದರು.

ಸಂಘದ ಸದಸ್ಯ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಬೆಳೆ ವಿಮೆ ಎಂಬುದು ಕನ್ನಡಿಯೊಳಗಿನ ಗಂಟಾಗಿದೆ. ಈ ಯೋಜನೆ ಬಹಳಷ್ಟು ನ್ಯೂನತೆಗಳನ್ನು ಹೊಂದಿದೆ. 3,271 ಕೋಟಿ ರೂ. ವಿಮೆ ಪಾವತಿಯಾಗಿದ್ದರೆ ಕಂಪನಿಯವರು ಕೇವಲ 71 ಕೋಟಿ ರೂ. ಪರಿಹಾರ ಪಾವತಿಸಿದ್ದಾರೆ. ಹಾಗಾಗಿ ರೈತರಿಗೆ ಯಾವುದೆ ಬೆಳೆಗಳ ವಿಮೆ ಪಾವತಿಸುವಂತೆ ಕಡ್ಡಾಯ ಮಾಡಬಾರದು. ತಾಲೂಕು ಅಥವಾ ಜಿಲ್ಲಾಮಟ್ಟದಲ್ಲಿ ಕಂಪನಿಗಳ ಮುಖಾಂತರವೆ ಬೆಳೆ ವಿಮೆ ವಿತರಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

2.93 ಕೋಟಿ ರೂ. ಲಾಭದ ಗುರಿ: ಮ್ಯಾಮ್ಕೋಸ್ ಪ್ರಸಕ್ತ ಸಾಲಿನಲ್ಲಿ 2.93 ಕೋಟಿ ರೂ. ಹಾಗೂ 2020-21ರಲ್ಲಿ 2.94 ಕೋಟಿ ರೂ. ಲಾಭ ಗಳಿಸುವ ಗುರಿ ಹೊಂದಿದೆ. ಪ್ರಸಕ್ತ ಅವಧಿಯ ಆಯವ್ಯಯದಲ್ಲಿ ಅಂದಾಜು 30 ಕೋಟಿ ರೂ. ಆದಾಯ ಗಳಿಸಲಿದ್ದು, 27 ಕೋಟಿ ರೂ. ವೆಚ್ಚವಾಗಲಿದೆ. ಅದೇ ರೀತಿ ಮುಂದಿನ ಸಾಲಿನಲ್ಲಿ 31.60 ಕೋಟಿ ರೂ. ಅಂದಾಜು ಆದಾಯ ಮತ್ತು 28.65 ಕೋಟಿ ರೂ. ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಬಿ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಸಾಲಿನಲ್ಲಿ 29.85 ಕೋಟಿ ರೂ. ನಿರೀಕ್ಷಿಸಿದ್ದು, 24.74 ಕೋಟಿ ರೂ. ಆದಾಯವಾಗಿದೆ. 2018-19ನೇ ಸಾಲಿನಲ್ಲಿ ಅಡಕೆ ಖರೀದಿ ದಾಸ್ತಾನು(ಮ್ಯಾಮ್ಕೋಸ್) 37,04,08,479 ರೂ. ಇದ್ದರೆ 123.87 ಕೋಟಿ ರೂ. ಅಡಕೆ ಮಾರಾಟ ಮಾಡಲಾಗಿದ್ದು, 2,99,80,684.43 ಕೋಟಿ ರೂ. ಲಾಭ ಗಳಿಸಲಾಗಿದೆ ಎಂದು ಹೇಳಿದರು.

ಸಭಾ ನಡಾವಳಿಯೇ ವಿಳಂಬ: ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆಯ 2 ತಾಲೂಕುಗಳಿಂದ ಸಂಘದ ಸದಸ್ಯರಿದ್ದಾರೆ. ಸಂಘದ ಕೇಂದ್ರ ಕಚೇರಿ, ಶಾಖೆಗಳು ಅಥವಾ ಏಜೆನ್ಸಿಗಳ ಮೂಲಕ ಸಭೆಯ ನಡಾವಳಿಯನ್ನು ವಿತರಿಸಲಾಗುತ್ತಿದೆ. ಆದರೆ ಸಭೆ ನಡಾವಳಿ ಸದಸ್ಯರ ಕೈ ಸೇರುತ್ತಿರುವುದು ವಿಳಂಬವಾಗುತ್ತಿದೆ ಎಂದು ಸದಸ್ಯರೊಬ್ಬರು ದೂರಿದರು. ಇದಕ್ಕೆ ಧ್ವನಿಗೂಡಿಸಿದ ಮತ್ತೊಬ್ಬ ಸದಸ್ಯ ದೇವಕುಮಾರ್, ಸೆಪ್ಟಂಬರ್​ನಲ್ಲಿ ಮಹಾಸಭೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ದೊಡ್ಡ ಸಂಸ್ಥೆಯಾಗಿರುವುದರಿಂದ ಲೆಕ್ಕ ಮಾಡಿಸಲು ಸಮಸ್ಯೆ ಆಗುವುದಿಲ್ಲ. ಹಾಗಾಗಿ ಆಗಸ್ಟ್​ನಲ್ಲಿ ಸಭೆ ನಡೆಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದರು.

ಪ್ರಾಯೋಗಿಕ ರೂಟ್ ವ್ಯವಸ್ಥೆಗೆ ಕ್ರಮ: ಗ್ರಾಮೀಣ ಭಾಗದ ಅಡಕೆ ವಹಿವಾಟಿಗೆ ಪ್ರಾಯೋಗಿಕವಾಗಿ ರೂಟ್ ವ್ಯವಸ್ಥೆ ಮಾಡುವುದಾಗಿ ಸಂಘದ ಉಪಾಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ಭರವಸೆ ನೀಡಿದರು. ವಾಹನದ ವ್ಯವಸ್ಥೆ ಮಾಡಿದರೆ ರೈತರೇ ನೇರವಾಗಿ ವಹಿವಾಟು ನಡೆಸಲು ಸಾಧ್ಯವಾಗುತ್ತದೆ ಎಂಬ ಸದಸ್ಯ ಎಚ್.ಆರ್.ಬಸವರಾಜಪ್ಪ ಅವರ ಸಲಹೆ ಸ್ವೀಕರಿಸಿದ ಅವರು, ಖಾಲಿ ಲಾರಿ ಬಂದರೆ ನಷ್ಟ ಸಂಭವಿಸುತ್ತದೆ ಎಂಬ ಕಾರಣಕ್ಕೆ ರೂಟ್ ವ್ಯವಸ್ಥೆ ಮಾಡಿಲ್ಲ. ಮುಂಚಿತವಾಗಿಯೆ ವಾಹನದ ವ್ಯವಸ್ಥೆ ಬಗ್ಗೆ ಪ್ರಚಾರ ಮಾಡಲು ಆಡಳಿತ ಮಂಡಳಿಯೊಂದಿಗೆ ರ್ಚಚಿಸಿ ನಿರ್ಧರಿಸಲಾಗುವುದು ಎಂದರು.

ಚನ್ನಗಿರಿಯ ಎಂ.ಪಿ.ನಿರಂಜನ್ ಮಾತನಾಡಿ, ಬೆಳಸಾಲ1 ಲಕ್ಷ ರೂ. ನೀಡುತ್ತಿರುವುದು ಸಾಲುತ್ತಿಲ್ಲ. ಕನಿಷ್ಠ 10 ಲಕ್ಷ ರೂ.ವರೆಗೆ ನೀಡಬೇಕು ಎಂದರು. ಮಾಜಿ ಶಾಸಕ, ಸಂಘದ ಸದಸ್ಯ ಎಚ್.ಎಂ.ಚಂದ್ರಶೇಖರಪ್ಪ ಮಾತನಾಡಿ, ಅಡಕೆ ಎಷ್ಟು ವರ್ಷ ದಾಸ್ತಾನು ಮಾಡಬಹುದು ಹಾಗೂ ಕಳೆದ ಐದಾರು ವರ್ಷದಿಂದ ಎಷ್ಟು ದಾಸ್ತಾನು ಸಂಗ್ರಹವಾಗಿದೆ ಎಂಬ ಮಾಹಿತಿ ನೀಡುವಂತೆ ಸಭೆಗೆ ಆಗ್ರಹಿಸಿದರು. ಇದಕ್ಕೆ ಪ್ರತಿಯಿಸಿದ ವೈ.ಎಸ್.ಸುಬ್ರಹ್ಮಣ್ಯ, ಈ ಬಗ್ಗೆ ಗಂಭೀರ ಯೋಚನೆ ಮಾಡಲಾಗಿದ್ದು, ದಾಸ್ತಾನು ಸಂಗ್ರಹಿಸಿದ್ದರೆ ನಾವೇ ಹೋಗಿ ಮಾರಾಟ ಮಾಡಿಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಮ್ಯಾಮ್ಕೋಸ್ ಕಚೇರಿ ಆವರಣದಲ್ಲಿ ಕೃಷಿ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮ್ಯಾಮ್ಕೋಸ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಆರ್.ರಾಘವೇಂದ್ರ, ನಿರ್ದೇಶಕರಾದ ಎಚ್.ಎಸ್.ಮಹೇಶ್, ಎಚ್.ಆರ್. ಅಶೋಕ ನಾಯಕ, ಕೆ.ನರಸಿಂಹ ನಾಯಕ್, ಬಿ.ಸಿ.ನರೇಂದ್ರ, ಎಚ್.ಸಿ.ನಾಗೇಶರಾವ್, ಜಿ.ಆರ್.ವೆಂಕಪ್ಪ, ಟಿ.ಆರ್.ಭೀಮರಾವ್, ಎಚ್.ಎಂ.ಬಡಿಯಣ್ಣ, ಇ.ಜಿ.ಸೋಮಶೇಖರ್, ಜೆ.ವಿರೂಪಾಕ್ಷಪ್ಪ, ಪಿ.ಎನ್.ಶಶಿಧರ್, ಕೆ.ಕೆ.ಜಯಶ್ರೀ, ವಿಜಯಲಕ್ಷ್ಮೀ ರಾಮಪ್ಪ ಮತ್ತಿತರರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *