ಶಿರಸಿ: ಅಡಕೆ ಕೊಳೆ ರೋಗದಿಂದ ಕಂಗಾಲಾಗಿರುವ ತಾಲೂಕಿನ ಬೆಳೆಗಾರರಿಗೆ ಈಗ ಮತ್ತೊಂದು ಆತಂಕ ಕಾಡಿದೆ. ತಾಲೂಕಿನ ಕೆಲವು ಭಾಗಗಳಲ್ಲಿ ಅಡಕೆ ಮರದ ಚಂಡೆ ಕೊಳೆ ರೋಗ ಕಾಣಿಸಿಕೊಂಡಿದೆ.
ಶಿರಸಿ- ಯಲ್ಲಾಪುರ ರಸ್ತೆಯ ಪಕ್ಕದಲ್ಲೇ ಇರುವ ತಾರಗೋಡ ಸಮೀಪದ ದಾಸನಗದ್ದೆಯ ತೋಟದಲ್ಲಿ ಅಡಕೆ ಚಂಡೆ ಕೊಳೆ ರೋಗ ವ್ಯಾಪಕವಾಗಿದೆ. ಇಲ್ಲಿಯ ಏಳು ರೈತರ ಎಂಟು ಎಕರೆ ತೋಟದಲ್ಲಿ ನೂರಾರು ಅಡಕೆ ಮರಗಳ ಚಂಡೆ ಹಳದಿಯಾಗಿ ಕೊಳೆಯುತ್ತಿವೆ. ಇನ್ನೂ ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತಿವೆ. ಇತರ ಕೆಲವೆಡೆಯೂ ಈ ರೋಗ ಲಕ್ಷಣ ಕಂಡುಬರುತ್ತಿದ್ದು, ರೈತರು ಆತಂಕಗೊಂಡಿದ್ದಾರೆ.
ಭೇಟಿ:
ತೀವ್ರ ಚಂಡೆ ಕೊಳೆರೋಗ ಬಾಧಿತ ತೋಟಕ್ಕೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮತ್ತು ಹಾರ್ಟಿ ಕ್ಲಿನಿಕ್ನ ವಿಷಯ ತಜ್ಞ ವಿ.ಎಂ. ಹೆಗಡೆ ಭೇಟಿ ನೀಡಿ, ಪರಿಶೀಲಿಸಿ ಜಾಗೃತಿ ಮೂಡಿಸಿದರು. ಅಪ್ಪು ಶೆಟ್ಟಿ, ಜನಾರ್ದನ ಶೆಟ್ಟಿ, ಕೃಷ್ಣ ಶೆಟ್ಟಿ, ಗಣಪತಿ ಶೆಟ್ಟಿ, ಪಾಂಡುರಂಗ ಶೆಟ್ಟಿ, ಸುರೇಶ ಶೆಟ್ಟಿ, ಜಗನ್ನಾಥ ಶೆಟ್ಟಿ ಇದ್ದರು.
ಕೊಳೆ ರೋಗದ ಮುಂದಿನ ಭಾಗ:
ಕಾಯಿ ಕೊಳೆ ರೋಗದ ಮುಂದಿನ ಭಾಗವೇ ಚಂಡೆ ಕೊಳೆ ರೋಗ. ಅರೇ ರೋಗಾಣುಗಳು ಅಡಕೆ ಕೊನೆಯ ಭಾಗಗಳಿಗೆ ಮಾತ್ರ ಸೀಮಿತವಾಗಿರದೆ ಮರದ ಸುಳಿ ಮತ್ತು ಇತರೇ ಮೃದುವಾದ ಭಾಗಗಳಿಗೂ ತಗುಲಬಹುದು. ಮರದ ನಂತರ ಚಂಡೆಯೇ ಕೊಳೆತು ಹೋಗಿ ಮುರಿದು ಬಿದ್ದು ಮರ ಸಾಯುತ್ತದೆ. ಇಲ್ಲಿ ರೋಗಾಣು ಅಡಕೆ ಕೊನೆಯ ಬುಡಭಾಗದ ಮೂಲಕ ಅಥವಾ ಎಲೆಯ ಬುಡ ಭಾಗದಲ್ಲಿರುವ ಹಾಳೆಯ ಮೂಲಕ ಕಾಂಡದೊಳಗೆ ಪ್ರವೇಶ ಪಡೆಯಬಹುದು. ಈ ರೋಗದಿಂದಾಗಿ ಜನವರಿ, ಫೆಬ್ರವರಿವರೆಗೂ ಮರದ ಚಂಡೆ ಹಳದಿಯಾಗಿ ಸಾಯುತ್ತಿರುತ್ತದೆ. ಕೊಳೆ ರೋಗವಿರುವ ತೋಟಗಳಲ್ಲಿ ಮಳೆಗಾಲದ ಕೊನೆಯಲ್ಲಿ ಮಳೆ ಕಡಿಮೆಯಾದಾಗ ಮೆಟಾಲಾಕ್ಸಿಲ್ 35 ಡಬ್ಲ್ಯುಎಸ್ -1 ಗ್ರಾಂ ಅಥವಾ ಮೆಟಾಲಾಕ್ಸಿಲ್ ಎಂಝುಡ್ -2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಗೊನೆ ಮತ್ತು ಚಂಡೆಗೆ ಸಿಂಪಡಿಸುವುದರಿಂದ ಚಂಡೆ ಕೊಳೆ ಬಾರದಂತೆ ತಡೆಯಬಹುದು. ತೋಟಕ್ಕೆ ಸುಣ್ಣ ಹಾಕುವುದು ಮತ್ತು ಬಸಿಗಾಲುವೆಗಳನ್ನು ವ್ಯವಸ್ಥಿತವಾಗಿಡುವುದು ಮುಂತಾದ ಕ್ರಮಗಳನ್ನು ಅನುಸರಿಸಬೇಕು. ರೋಗದಿಂದ ಸತ್ತಿರುವ ಮರದ ಚಂಡೆಗಳನ್ನು ತೆಗೆದು ತೋಟದಿಂದ ಹೊರಹಾಕಿ ಸುಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಈ ವರ್ಷದ ಅತಿವೃಷ್ಟಿಯ ತೀವ್ರ ಪರಿಣಾಮಗಳು ವಿವಿಧ ಬೆಳೆಗಳಲ್ಲಿ ಗೋಚರವಾಗುತ್ತಿವೆ. ಭೂಮಿಯಲ್ಲಿ ಮತ್ತು ವಾತಾವರಣದಲ್ಲಿ ಹೆಚ್ಚಾದ ತೇವಾಂಶದಿಂದಾಗಿ ಚಂಡೆ ಕೊಳೆ ರೋಗವು ತೀವ್ರವಾಗುವ ಲಕ್ಷಣಗಳು ಕಂಡುಬರುತ್ತಿದೆ.
-ಸತೀಶ ಹೆಗಡೆ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ
ಈ ಬಾರಿ ಶಿರಸಿ ಭಾಗದಲ್ಲಿ ಚಂಡೆ ಕೊಳೆ ವ್ಯಾಪಕವಾಗುತ್ತಿದೆ. ರೋಗ ಬಂದ ನಂತರ ಹತೋಟಿ ಮಾಡುವುದಕ್ಕಿಂತ ರೋಗ ಬರದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.
-ವಿ.ಎಂ. ಹೆಗಡೆ, ಹಾರ್ಟಿ ಕ್ಲಿನಿಕ್ ವಿಷಯ ತಜ್ಞ