ಅಡಕೆ ಮಂಡಳಿ ರಚನೆಗೆ ಯತ್ನಿಸಿ

ಶಿರಸಿ: ಅಡಕೆ ಬೆಳೆಗಾರರು ಸದಾ ದರ ಏರುಪೇರಿನ ಆತಂಕ ಎದುರಿಸುತ್ತಿದ್ದಾರೆ. ಬೆಳೆಗಾರರ ನೆಮ್ಮದಿಗಾಗಿ ಕೇಂದ್ರ ಸರ್ಕಾರದ ಹಂತದಲ್ಲಿ ಅಡಕೆ ಮಂಡಳಿ ರಚನೆ ಯತ್ನ ಮುಂದುವರಿಸಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್. ಪ್ರಕಾಶ ಕಮ್ಮರಡಿ ಹೇಳಿದರು.
ನಗರದ ಟಿಎಂಎಸ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ತೋಟಗಾರಿಕೆ ಬೆಳೆಗಳಿಗೆ ಆಧುನಿಕ ಮಾರುಕಟ್ಟೆ ಹಾಗೂ ಲಾಭದಾಯಕ ಬೆಲೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಅಡಕೆ ಮಂಡಳಿಯಿಂದ ಸಹಕಾರ ಕ್ಷೇತ್ರಕ್ಕೆ ಶಕ್ತಿ ಬರಲಿದೆ. ರೈತರು ಉತ್ಪಾದಿಸುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿರ್ಧರಿಸಲು ಉತ್ಪಾದನೆ ವೆಚ್ಚಗಳ ದಾಖಲೀಕರಣ ಆಗಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಸಂಚರಿಸಿರುವ ನಮ್ಮ ತಂಡ 26 ಬೆಳೆಗಳ ಉತ್ಪಾದನೆ ವೆಚ್ಚ ದಾಖಲಿಸಿದೆ. ಅಡಕೆ ಕನಿಷ್ಠ ಬೆಂಬಲ ಬೆಲೆ 27 ಸಾವಿರ ರೂ. ಘೊಷಣೆಯಾದ ಬಳಿಕ ದರ ಸ್ಥಿರತೆ ಸಾಧ್ಯವಾಗಿದೆ. ರಾಗಿ, ಜೋಳ, ಈರುಳ್ಳಿ ಬೆಂಬಲ ಬೆಲೆ ವ್ಯತ್ಯಾಸ ಮೊತ್ತವನ್ನು ನಾಲ್ಕು ಜಿಲ್ಲೆಗಳಲ್ಲಿ ರೈತರಿಗೆ ಪಾವತಿ ಮಾಡಲಾಗಿದೆ. ಮೆಕ್ಕೆಜೋಳ ದರ ವ್ಯತ್ಯಾಸ ಪಾವತಿಗೆ ಶಿಫಾರಸು ಮಾಡಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಟಿಎಸ್​ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ‘ಅಡಕೆಗೆ ಹೊಗಳುವಷ್ಟು ದರ ಬರದಿದ್ದರೂ ಗಣನೀಯ ಪ್ರಮಾಣದಲ್ಲಿ ದರ ಇಳಿದಿಲ್ಲ. ಅಡಕೆ ಮೇಲಿನ ತೆರಿಗೆ ವಿನಾಯಿತಿಗೆ ಹಲವು ಬಾರಿ ಸರ್ಕಾರಕ್ಕೆ ವಿನಂತಿಸಿದ್ದೇವೆ. ಅಡಕೆ ಅಕ್ರಮ ಆಮದಿನಿಂದಾಗಿ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಸಹಕಾರಿ ಸಂಸ್ಥೆಗಳಿಗೆ ಅನ್ಯಾಯವಾಗುತ್ತಿದೆ’ ಎಂದರು. ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಮಾತನಾಡಿ,‘ಸಾಲ ಮನ್ನಾ ಯೋಜನೆ ರೈತರಿಗೆ ನೆರವಾದರೂ ಸಹಕಾರಿ ಸಂಘಗಳನ್ನು ಸಂಕಷ್ಟಕ್ಕೆ ದೂಡಿವೆ. ಸಮರ್ಪಕ ನೀರಾವರಿ ಮತ್ತು ಬೆಳೆದ ಬೆಳೆಗೆ ಯೋಗ್ಯ ದರ ಲಭಿಸಿದಲ್ಲಿ ಸಹಾಯಧನ ಅಥವಾ ಸಾಲಮನ್ನಾದ ಅವಶ್ಯಕತೆ ಬರುವುದಿಲ್ಲ’ ಎಂದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ನಿರ್ದೇಶಕಿ ವಿಮಲಾ ಹೆಗಡೆ, ಡೆವಲಪ್​ವೆುಂಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಗೋಪಾಲ ಹೆಗಡೆ ಇತರರು ಉಪಸ್ಥಿತರಿದ್ದರು.

ಇತರ ಅಂಶಗಳಿಗೆ ಆದ್ಯತೆ
ಕವಳ, ಗುಟ್ಖಾ ಹೊರತಾಗಿ ಇತರ ಅಂಶಗಳಿಗೆ ಆದ್ಯತೆ ನೀಡಿ ಅಡಕೆಯನ್ನು ಬಳಸಬೇಕಾದ ಅಗತ್ಯತೆ ಇದೆ ಎಂದು ಪ್ರಕಾಶ ಕಮ್ಮರಡಿ ಹೇಳಿದರು. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಅಡಕೆಯಲ್ಲಿನ ಕೊಬ್ಬು ಬಳಸಿ ಚಾಕೋಲೇಟ್, ಐಸ್ಕ್ರೀಂ, ಸಾಬೂನು ತಯಾರಿಸಬಹುದಾಗಿದೆ. ಅಡಕೆ ನೈಸರ್ಗಿಕವಾಗಿಯೇ ಕೆಂಪು ಬಣ್ಣ ಹೊಂದಿದ್ದು, ವಿವಿಧ ವಸ್ತುಗಳ ತಯಾರಿಕೆಯಲ್ಲಿ ಬಳಸಬಹುದಾಗಿದೆ ಎಂದರು. ಸಹಕಾರಿ ಸಂಘಗಳು ಮಾರಾಟ ವ್ಯವಸ್ಥೆ ಮಾತ್ರವಲ್ಲ, ದರವನ್ನು ತೀರ್ವನಿಸುವ ಹಂತಕ್ಕೆ ಬೆಳೆಯಬೇಕು. ಅಡಕೆ ಹಾಗೂ ಭತ್ತದ ಬೆಲೆ ಸ್ಥಿರತೆಗೆ ಆಯೋಗ ಶ್ರಮಿಸುತ್ತಿದೆ. ಅಡಕೆ ಆಹಾರ ವಸ್ತು ಎಂದೇ ಪರಿಗಣಿಸಬೇಕು. ರೈತರು ಗುಣಮಟ್ಟದ ಅಡಕೆ ಪೂರೈಕೆಯತ್ತ ಗಮನ ಹರಿಸಬೇಕು. ನಂಜನಗೂಡಿನ ರಸಬಾಳೆ ಮಾದರಿಯಲ್ಲಿ ರಾಜಮುಡಿ ಭತ್ತಕ್ಕೂ ಭೌಗೋಳಿಕ ಮಾನ್ಯತೆಗೆ ಪ್ರಯತ್ನಿಸುತ್ತಿದ್ದೇವೆ ಎಂದರು.