ಸಿದ್ದಾಪುರ: ಆಗಸ್ಟ್ನಲ್ಲಿ ಸುರಿದ ಮಳೆ ಗಾಳಿಗೆ ತಾಲೂಕಿನಾದ್ಯಂತ ಹಾನಿಯಾದ ಅಡಕೆ ತೋಟಗಳಿಗೆ ಎಕರೆ ಒಂದಕ್ಕೆ 60 ರಿಂದ 70ಸಾವಿರ ರೂ. ಪರಿಹಾರ ನೀಡುವಂತೆ ಹೆಮ್ಮನಬೈಲ್ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಈ ಕುರಿತು ಗುರುವಾರ ತಹಸೀಲ್ದಾರ್ ಮಂಜುಳಾ ಎಸ್.ಭಜಂತ್ರಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಆಗಸ್ಟ್ 5,6 ಹಾಗೂ 7ರಂದು ಬೀಸಿದ ಗಾಳಿ ಹಾಗೂ ಸುರಿದ ಮಳೆಗೆ ಪ್ರತಿ ಎಕರೆ ಅಡಕೆ ತೋಟದಲ್ಲಿ ಸರಾಸರಿ 20ರಿಂದ 25 ಅಡಕೆ ಮರಗಳು ಬಿದ್ದಿವೆ. ಅಲ್ಲದೆ, ಅಡಕೆ ಮಿಳ್ಳೆಗಳು ಉದುರಿವೆ. ಪ್ರತಿಯೊಬ್ಬ ರೈತರಿಂದ ಅರ್ಜಿ ಪಡೆದು ತೋಟಗಾರಿಕೆ ಇಲಾಖೆಯವರು ಸ್ಥಳ ಪರಿಶೀಲಿಸಿ ಸರಾಸರಿ ಎಲ್ಲ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೆಮ್ಮನಬೈಲ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಆರ್. ನಾಯ್ಕ, ಉಪಾಧ್ಯಕ್ಷ ಎನ್.ಜಿ. ಹೆಗಡೆ, ಎನ್.ಎಲ್. ಗೌಡ ಕಿಲವಳ್ಳಿ, ರಾಮಚಂದ್ರ ನಾಯ್ಕ, ಗಣಪತಿ ಈರ ಗೌಡ, ಮೋಹನ ಗೌಡ, ಎಸ್.ಕೆ. ನಾಯ್ಕ ಇತರರಿದ್ದರು.