ಅಡಕೆ ದರ ಕೊಂಚ ಏರಿಕೆ, ರೈತರಲ್ಲಿ ಮೂಡಿದೆ ಆಶಾಭಾವನೆ

ಮಂಜುನಾಥ ಸಾಯೀಮನೆ ಶಿರಸಿ: ಕಳೆದ ಮೂರು ದಿನಗಳಿಂದ ಶಿರಸಿ ಮಾರುಕಟ್ಟೆಯಲ್ಲಿ ರಾಶಿ ಅಡಕೆ ದರ ಕೊಂಚ ಏರಿದೆ. ದರ ಕುಸಿತದಿಂದ ಕಂಗಾಲಾಗಿದ್ದ ರೈತರಲ್ಲಿ ಈಗ ಆಶಾಭಾವನೆ ಮೂಡಿದೆ.

ಕಳೆದ ಎರಡು ತಿಂಗಳಿಂದ ರಾಶಿ ಅಡಕೆಗೆ ಸರಾಸರಿ ದರ 28 ಸಾವಿರ ರೂ. ಪ್ರತಿ ಕ್ವಿಂಟಾಲ್​ಗೆ ಲಭಿಸುತ್ತಿತ್ತು. ಉತ್ತಮ ಗುಣಮಟ್ಟದ ಅಡಕೆಗೆ 30 ಸಾವಿರ ರೂ. ಬೆಲೆ ಇತ್ತು. ಈಗ ಈ ದರ ಏರಿಕೆಯಾಗುತ್ತಿದ್ದು, ಶುಕ್ರವಾರ ಶಿರಸಿ ಮಾರುಕಟ್ಟೆಯಲ್ಲಿ 32,899 ರೂ. ಗರಿಷ್ಠ ದರ ಮತ್ತು 32,092 ರೂ. ಸರಾಸರಿ ದರ ಲಭಿಸಿದೆ. ಚುನಾವಣೆ ಘೊಷಣೆಗೆ ಪೂರ್ವದಲ್ಲಿ ರಾಶಿ ಅಡಕೆಗೆ ಪ್ರತಿ ಕ್ವಿಂಟಾಲ್​ಗೆ 33 ಸಾವಿರ ರೂ. ಸರಾಸರಿ ದರ ಲಭಿಸುತ್ತಿತ್ತು. ಆ ಬಳಿಕ ಒಮ್ಮೆಲೇ ದರ ಕುಸಿತಗೊಂಡು ಈಗ ಚೇತರಿಕೆ ಕಾಣುತ್ತಿದೆ. ಮುಂದಿನ ಕೆಲ ದಿನಗಳ ಕಾಲ ರಾಶಿ ಅಡಕೆಯ ದರ ಏರಿಕೆ ಮುಂದುವರಿಯಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ರಾಶಿ ಅಡಕೆ ದರ ಏರಿಕೆ ಕಾರಣದ ಬಗ್ಗೆ ರೈತರು ಮತ್ತು ವ್ಯಾಪಾರಿಗಳಲ್ಲಿ ಚರ್ಚೆ ನಡೆಯುತ್ತಿದೆ. ಚುನಾವಣೆ ಘೊಷಣೆಯ ಎದುರಿನಲ್ಲಿ ಉತ್ತರ ಭಾರತದ ಅಡಕೆ ದಾಸ್ತಾನುದಾರರು ಒಮ್ಮೆಲೇ ಅಧಿಕ ಪ್ರಮಾಣದಲ್ಲಿ ಅಡಕೆ ಖರೀದಿಸಿದ್ದಾರೆ. ಈ ವೇಳೆ ಜಿಲ್ಲೆಯಲ್ಲಿ ರಾಶಿ ಅಡಕೆ ಇನ್ನೂ ಸಿದ್ಧಗೊಂಡಿರಲಿಲ್ಲ. ಶಿವಮೊಗ್ಗ ಮತ್ತು ಭೀಮಸಮುದ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಶಿ ಅಡಕೆಯನ್ನು ದಾಸ್ತಾನುದಾರರು ಖರೀದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಶಿ ಅಡಕೆ ಮಾರುಕಟ್ಟೆಗೆ ಬರುವ ವೇಳೆ ಬೇಡಿಕೆ ಇರದೇ ದರ ಕುಸಿತವಾಗಿತ್ತು. ಚುನಾವಣೆ ಸಲುವಾಗಿ ಗಡಿ ಮತ್ತು ಬಂದರುಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಿದ್ದರಿಂದ ದೇಶಕ್ಕೆ ಅಕ್ರಮವಾಗಿ ಅಡಕೆ ಬರುವುದು ಕಡಿಮೆಯಾಗಿದೆ. ಇನ್ನೊಂದೆಡೆ ಪಾನ್ ಮಸಾಲಾ ಉತ್ಪಾದಕರು ದಾಸ್ತಾನು ಮಾಡಿದ್ದ ಅಡಕೆ ಈಗ ಖಾಲಿಯಾಗತೊಡಗಿದೆ.

ಜಿಲ್ಲೆಯ ಅಡಕೆಗೆ ದೆಹಲಿ ಮತ್ತು ಕಾನ್ಪುರದಲ್ಲಿ ರಾಶಿ ಅಡಕೆಗೆ ಬೇಡಿಕೆ ಬರಲಾರಂಭಿಸಿದೆ. ಚುನಾವಣೆ ಪ್ರಕ್ರಿಯೆ ಮೇ 23ರವರೆಗೂ ಇರುವುದರಿಂದ ಗಡಿ ಮತ್ತು ಬಂದರಿನಲ್ಲಿ ಭದ್ರತೆ ಇರಲಿದ್ದು, ಅಲ್ಲಿಯವರೆಗೂ ವಿದೇಶದಿಂದ ಅಕ್ರಮವಾಗಿ ಅಡಕೆ ತರಲು ಸಾಧ್ಯವಾಗುವುದಿಲ್ಲ . ಹೀಗಾಗಿ, ದೇಶಿ ಅಡಕೆ ಖರೀದಿಗೆ ಪಾನ್ ಮಸಾಲಾ ತಯಾರಕರು ಮುಂದಾಗಿದ್ದಾರೆ. ಇದರ ಪರಿಣಾಮ ಜಿಲ್ಲೆಯ ಅಡಕೆಗೆ ಬೇಡಿಕೆ ಬರಲಾರಂಭಿಸಿ ದರ ನಿಧಾನ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ಚುನಾವಣೆಯವರೆಗೂ ಇದೇ ರೀತಿ ದರ ಏರುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಸ್ಥರು.

ಚಾಲಿ ಅಡಕೆ ದರದಲ್ಲಿ ಗಮನಾರ್ಹ ಬದಲಾವಣೆಯೇನೂ ಆಗದಿದ್ದರೂ, ಮುಂದಿನ ಕೆಲ ದಿನಗಳಲ್ಲಿ ಅಲ್ಪ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಪ್ರತಿ ಕ್ವಿಂಟಾಲ್ ಚಾಲಿಗೆ 21 ಸಾವಿರ ರೂ. ಸರಸರಿ ದರ ಈಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಗರಿಷ್ಠ 22 ಅಥವಾ 23 ಸಾವಿರ ರೂ. ಮುಂಬರುವ ದಿನಗಳಲ್ಲಿ ಲಭ್ಯವಾಗಬಹುದು ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿದೆ. ತಾಲೂಕಿನ ರೈತರಲ್ಲಿ 35 ಸಾವಿರ ಕ್ವಿಂಟಾಲ್ ರಾಶಿ ಅಡಕೆ ದಾಸ್ತಾನಿದೆ. ರಾಶಿ ಅಡಕೆ ದರ ಏರಿಕೆಯಾಗುತ್ತಿರುವುದರಿಂದ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಅಡಕೆಯನ್ನು ರೈತರು ತರಲಾರಂಭಿಸಿದ್ದಾರೆ. ಶಿರಸಿ ಮಾರುಕಟ್ಟೆಗೆ ಶುಕ್ರವಾರ 1200 ಕ್ವಿಂಟಾಲ್​ಗಳಷ್ಟು ಅಡಕೆಯನ್ನು ರೈತರು ತಂದಿದ್ದಾರೆ.

ಶ್ರೀಲಂಕಾದಲ್ಲಿ ಉಗ್ರಗಾಮಿಗಳು ಬಾಂಬ್ ಸ್ಪೋಟಿಸಿದ ಕಾರಣ ಅಲ್ಲಿಂದ ಅಡಕೆ ಅಕ್ರಮ ಆಮದಾಗುತ್ತಿಲ್ಲ ಎಂಬ ಗಾಳಿ ಸುದ್ದಿಯೂ ಹರಿದಾಡುತ್ತಿದೆ. ರಾಶಿ ಅಡಕೆ ದರ ಏರಿಕೆ ತಾತ್ಕಾಲಿಕವಾಗಿರುವ ಸಾಧ್ಯತೆ ಇದೆ. | ಜಿ. ಎಂ. ಹೆಗಡೆ ಮುಳಖಂಡ, ಅಡಕೆ ವ್ಯಾಪಾರಸ್ಥ, ಶಿರಸಿ

Leave a Reply

Your email address will not be published. Required fields are marked *