ಅಡಕೆ ದರಕ್ಕೆ ಚುನಾವಣೆ ಬರೆ

ಮಂಜುನಾಥ ಸಾಯೀಮನೆ ಶಿರಸಿ
ಲೋಕಸಭೆ ಚುನಾವಣೆ ಘೂಷಣೆಯಾಗುತ್ತಿದ್ದಂತೆಯೇ ಅಡಕೆ ಮಾರುಕಟ್ಟೆಯಲ್ಲಿ ದರ ಕುಸಿಯಲಾರಂಭಿಸಿದೆ. ಶಿರಸಿ ಮಾರುಕಟ್ಟೆಯಲ್ಲಿ ಕಳೆದೊಂದು ವಾರದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಕೆಯ ಬೆಲೆ 3 ಸಾವಿರ ರೂ.ನಷ್ಟು ಕುಸಿತವಾಗಿದೆ. ದರ ಕಾಯ್ದುಕೊಳ್ಳಲು ವಹಿವಾಟು ನಡೆಸುವ ಸಂಸ್ಥೆಗಳೇ ಟೆಂಡರ್ ಬರೆದು ಖರೀದಿಸಲಾರಂಭಿಸಿವೆ.

ಮಲೆನಾಡಿನಾದ್ಯಂತ ಈಗ ಅಡಕೆ ಕೊಯ್ಲು ಮುಕ್ತಾಯಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೈತರು ರಾಶಿ ಅಡಕೆ ಸಿದ್ಧಪಡಿಸಿದ ಪ್ರಮಾಣ ಕಡಿಮೆ. ಈ ವರ್ಷ ಕೃಷಿ ಕಾರ್ವಿುಕರ ಅಭಾವ ಮತ್ತು ಹವಾಮಾನದ ಬಲಾವಣೆಯಿಂದ ಅಡಕೆ ಬೆಳೆಯುವ ಪ್ರಮಾಣ ಕಡಿಮೆಯಾಗಿದ್ದು, ತಾಲೂಕಿನಲ್ಲಿ ಕಳೆದ ವರ್ಷದಷ್ಟು ರಾಶಿ ಅಡಕೆಯನ್ನು ರೈತರು ಸಿದ್ಧಪಡಿಸಿಲ್ಲ. ಪ್ರತಿ ಕ್ವಿಂಟಾಲ್ ರಾಶಿ ಅಡಕೆಗೆ 40 ಸಾವಿರ ರೂ. ಬರಬಹುದು ಎಂಬ ರೈತರ ನಿರೀಕ್ಷೆ ಸುಳ್ಳಾಗಿ, ಫೆಬ್ರವರಿ ತಿಂಗಳ ಅಂತ್ಯದವರೆಗೆ ಸರಾಸರಿ 33 ಸಾವಿರ ರೂ. ದರ ಲಭಿಸಿದೆ.

ಆದರೆ, ಲೋಕಸಭೆ ಚುನಾವಣೆ ಘೊಷಣೆಯಾದ ಬಳಿಕ ರಾಶಿ ಅಡಕೆ ದರವು ಪ್ರತಿ ದಿನ ಇಳಿಮುಖವಾಗಿದ್ದು, ಈಗ ಕ್ವಿಂಟಾಲ್​ಗೆ ಸರಾಸರಿ 29 ಸಾವಿರ ರೂ. ಲಭಿಸಲಾರಂಭಿಸಿದೆ. ಇದೇ ರೀತಿ ಚಾಲಿಯ ದರವೂ ಕುಸಿತವಾಗಿದೆ. ಫೆಬ್ರವರಿ ತಿಂಗಳ ಅಂತ್ಯಕ್ಕೆ ಪ್ರತಿ ಕ್ವಿಂಟಾಲ್​ಗೆ ಸರಾಸರಿ 26 ಸಾವಿರ ರೂ. ದರವಿದ್ದ ಚಾಲಿ ಈಗ 22 ಸಾವಿರ ರೂ.ಗೆ ಕುಸಿದಿದೆ.

ಈ ರೀತಿ ದರ ಕುಸಿತದ ಬಗ್ಗೆ ಮಾರುಕಟ್ಟೆ ತಜ್ಞರಲ್ಲಿ ಚರ್ಚೆಯೂ ಜೋರಾಗಿ ನಡೆಯಲಾರಂಭಿಸಿದೆ. ಮುಖ್ಯವಾಗಿ, ಉತ್ತರ ಭಾರತದ ವ್ಯಾಪಾರಸ್ಥರಿಂದ ಅಡಕೆಗೆ ಬೇಡಿಕೆ ಬರುತ್ತಿಲ್ಲ. ಅಡಕೆಯ ಅಕ್ರಮ ಆಮದು ಮತ್ತು ದಾಸ್ತಾನು ಇದಕ್ಕೆ ಕಾರಣ ಎಂದು ವಿಷ್ಲೇಶಿಸಲಾಗುತ್ತಿದೆ. ಇತರ ದೇಶಗಳಿಂದ ಅಡಕೆ ಆಮದು ಮಾಡಿಕೊಳ್ಳುವ ಶ್ರೀಲಂಕಾವು ನೇಪಾಳಕ್ಕೆ ಮಾರಾಟ ಮಾಡುತ್ತಿದೆ. ಇದಕ್ಕಾಗಿ ಭಾರತದ ಬಂದರನ್ನು ಬಳಸಿಕೊಳ್ಳುತ್ತಿದ್ದು, ಈ ಅಡಕೆ ನೇಪಾಳಕ್ಕೆ ಹೋಗದೇ ಭಾರತೀಯ ದಾಸ್ತಾನುಗಾರರ ಗೋದಾಮು ಸೇರುತ್ತಿರುವುದು ಹೊಸ ವಿಷಯವಲ್ಲ. ಈ ಬಾರಿ ಚುನಾವಣೆ ಘೊಷಣೆಯಾಗಲಿರುವ ಕಾರಣ ಪಾನ್ ಮಸಾಲಾ ಉತ್ಪಾದಕರು ಮುಂದಿನ ಮೂರು ತಿಂಗಳಿಗೆ ಸಾಕಾಗುವಷ್ಟು ಅಡಕೆಯನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರ ಅಡಕೆ ಮಾರುಕಟ್ಟೆಯನ್ನು ಜಿಎಸ್​ಟಿ ವ್ಯಾಪ್ತಿಯಲ್ಲಿ ತಂದಿದ್ದರೂ ದೊಡ್ಡ ಪ್ರಮಾಣದಲ್ಲಿ ಹವಾಲಾ ಮೂಲಕ ವಹಿವಾಟು ನಡೆದೇ ಇದೆ ಎಂಬುದನ್ನು ಸ್ವತಃ ಅಡಕೆ ವ್ಯಾಪಾರಸ್ಥರೂ ಒಪ್ಪಿಕೊಳ್ಳುತ್ತಿದ್ದಾರೆ. ಚುನಾವಣೆಯ ವೇಳೆ ಹಣ ಸಾಗಾಟ ಕಷ್ಟವಾದ್ದರಿಂದ ಮುಂದಿನ ಮೂರು ತಿಂಗಳಿಗೆ ಬೇಕಾದ ಅಡಕೆಯನ್ನು ಪಾನ್ ಮಸಾಲಾ ಉತ್ಪಾದಕರು ಮುಂಚಿತವಾಗಿ ಖರೀದಿಸಿದ್ದಾರೆ. ಆದರೆ, ಅಕ್ರಮ ಆಮದಿನ ಅಡಕೆ ಖಾಲಿಯಾದ ಬಳಿಕವೇ ಮಲೆನಾಡಿನ ಅಡಕೆಗೆ ಬೇಡಿಕೆ ಬರಬೇಕಿದೆ. ಸದ್ಯ ಜಿಎಸ್​ಟಿ ಮೂಲಕ ವಹಿವಾಟು ನಡೆಸುವ ಕೆಲ ವರ್ತಕರು ಮಾತ್ರ ಅಡಕೆ ಮಾರುಕಟ್ಟೆಯಲ್ಲಿ ಟೆಂಡರ್ ಬರೆಯುತ್ತಿದ್ದರೂ ದರ ಕಡಿಮೆ ಇದೆ. ಹೀಗಾಗಿ, ರೈತರು ಸಂಕಷ್ಟಕ್ಕೆ ಬೀಳುವುದನ್ನು ತಪ್ಪಿಸಲು ಸಹಕಾರಿ ಸಂಘಗಳಾದ ಟಿಎಸ್​ಎಸ್, ಟಿಎಂಎಸ್​ನಂತಹ ಸಂಸ್ಥೆಗಳು ರಾಶಿ ಅಡಕೆಗೆ 30 ಸಾವಿರ ರೂ. ಮತ್ತು ಚಾಲಿ ಅಡಕೆಗೆ 23 ಸಾವಿರ ರೂ. ಪ್ರತಿ ಕ್ವಿಂಟಾಲ್​ನಂತೆ ಟೆಂಡರ್ ಬರೆದು ಖರೀದಿಸಿ ತಮ್ಮ ಗೋದಾಮು ಸೇರಿಸುತ್ತಿವೆ. ಶಿರಸಿ ಮಾರುಕಟ್ಟೆಗೆ ಪ್ರತಿ ದಿನ 500 ಕ್ವಿಂಟಾಲ್​ಗಳಷ್ಟು ಅಡಕೆಯನ್ನು ರೈತರು ತರುತ್ತಿದ್ದಾರೆ. 300ರಿಂದ 350 ಕ್ವಿಂಟಾಲ್​ಗಳಷ್ಟು ಅಡಕೆಯನ್ನು ಸಂಘ ಸಂಸ್ಥೆಗಳೇ ಖರೀದಿಸುತ್ತಿವೆ.