ಅಜ್ಜಿ ಹೇಳಿದ ಮದ್ದು!

ಮುಂದೆ ಜನಿಸಲಿರುವ ಮಗುವಿನ ಸ್ವಾಸ್ಥ್ಯ ದೃಷ್ಟಿಯಿಂದ ಗರ್ಭವತಿಯರು ಏನೇನು ಮಾಡಬಾರದೆಂಬುದನ್ನು ಆಯುರ್ವೆದ ವಿವರಿಸಿದೆ. ಖಾರದ ಆಹಾರ, ವ್ಯಾಯಾಮ, ಲೈಂಗಿಕ ಕ್ರಿಯೆಗಳಿಂದ ದೂರವಿರಬೇಕು. ಸುಲಭವಾಗಿ ಜೀರ್ಣಗೊಳ್ಳದ ಆಹಾರ, ಅತ್ಯುಷ್ಣ ಆಹಾರಗಳೂ ಉತ್ತಮವಲ್ಲ. ಕೆಂಪುಬಣ್ಣದ ವಸ್ತ್ರಗಳು, ತೀವ್ರ, ಒರಟುತನದ ಕೆಲಸಗಳು, ಮದ್ಯಪಾನ, ಮಾಂಸ ಸೇವನೆ, ಅತಿಯಾದ ಪ್ರಯಾಣ, ಇಂದ್ರಿಯಗಳಿಗೆ ತೊಂದರೆ ಉಂಟುಮಾಡುವ ಅನ್ನಪಾನಾದಿಗಳನ್ನು ವರ್ಜಿಸಬೇಕೆಂದಿರುವ ಚರಕಸಂಹಿತೆಯು ಇನ್ನೊಂದು ಮಹತ್ವದ ಅಂಶವನ್ನು ಹೊರಹಾಕಿದೆ. ಮನೆತನದ ಹಿರಿಯ ವೃದ್ಧೆಯರು ಅನುಭವದಿಂದ ಹೇಳುವ ಮಾತನ್ನೂ ಪರಿಪಾಲಿಸಬೇಕು!

ಅತೀವಾಹಾರ ಸೇವನೆ, ಅತ್ಯಲ್ಪ ಭೋಜನ, ಹಗಲು ನಿದ್ರೆ, ರಾತ್ರಿ ಜಾಗರಣೆ, ಬೇಸರ, ಭಯದಿಂದಲೇ ಜೀವನ ಸಾಗಿಸುವುದು, ದೂರಪ್ರಯಾಣ, ಮಲಮೂತ್ರಗಳ ವೇಗ ಬಹಳಕಾಲ ತಡೆಹಿಡಿಯುವುದು, ಶುಚಿತ್ವ ಕಾಪಾಡದೆ ಇರುವುದು, ಬೆಚ್ಚಿಬೀಳಿಸುವ ಕಥೆ ಕೇಳುವುದು, ಒಣ, ಹಳೆಯ, ಹಳಸಲು ಆಹಾರ ಸೇವಿಸುವುದು, ಏಕಾಂತದಲ್ಲಿ ಕಾಲಹರಣ, ಒಬ್ಬರೇ ತಿರುಗಾಡುವುದು, ಏರುದನಿಯಲ್ಲಿ ಕೋಪದಿಂದ ಮಾತನಾಡುವುದು, ಅತಿಯಾದ ದೈಹಿಕ ಕೆಲಸಗಳೆಲ್ಲ ಗರ್ಭಸ್ಥ ಶಿಶುವಿನ ಮೇಲೆ ದುಷ್ಪರಿಣಾಮ ಉಂಟುಮಾಡುವುದರಿಂದ ವರ್ಜಿಸಲೇಬೇಕೆಂಬುದು ಸುಶ್ರುತಸಂಹಿತೆಯ ಸ್ಪಷ್ಟೋಕ್ತಿ. ಬಿಸಿಲು, ಬೆಂಕಿಯ ಬಳಿ ಹೆಚ್ಚುಕಾಲ ಕಳೆಯುವುದು ಒಳ್ಳೆಯದಲ್ಲ. ಪದ್ಮಾಸನ, ಕಷ್ಟಕರವಾದ ಆಸನ, ಮೇಲ್ಮಖವಾಗಿ ಮಲಗುವುದು ವಿಹಿತವಲ್ಲ. ಆರಂಭದ ತಿಂಗಳಲ್ಲಿ ತೈಲಾಭ್ಯಂಗ ಮಾಡಬಾರದು. ಶರೀರಶುದ್ಧಿಗಾಗಿ ಹೇಳಲ್ಪಟ್ಟ ಪಂಚಕರ್ಮ ಚಿಕಿತ್ಸೆಯನ್ನೂ ಈ ಸಮಯದಲ್ಲಿ ಅಳವಡಿಸಬಾರದು ಎಂಬುದಾಗಿ ವಾಗ್ಭಟಾಚಾರ್ಯರು ಉಪದೇಶಿಸಿದ್ದಾರೆ.

ಶೀತಲಜಲ, ಬೆಳ್ಳುಳ್ಳಿ, ಹೆಚ್ಚುಕಾಲ ನಿಂತಿರುವುದು ಒಳ್ಳೆಯದಲ್ಲ ಎಂಬುದು ಕಾಶ್ಯಪಸಂಹಿತೆಯ ಹಿತವಚನ. ಹೊಟ್ಟೆ ಉಬ್ಬರ ಅಥವಾ ಉರಿ ಉಂಟುಮಾಡುವ ಬೇಳೆ ಕಾಳುಗಳ ಉಪಯೋಗ, ನೀರುಳ್ಳಿ, ತುಂಬಾ ಬಿಸಿಹಾಲು, ಸುವರ್ಣಗಡ್ಡೆಗಳೂ ಬೇಡವೆನ್ನುವ ಮಾತು ಹಾರೀತಸಂಹಿತೆಯದ್ದು. ನದಿದಂಡೆಯಲ್ಲಿ, ಎತ್ತರದ ಸ್ಥಳಗಳಲ್ಲಿ ಕೂತಿರುವುದು, ಮಳೆನೀರು ಕುಡಿಯುವುದು, ಮೆತ್ತನೆಯ ಹಾಸಿಗೆಯಲ್ಲಿ ಮಲಗುವುದೂ ಭ್ರೂಣಕ್ಕೆ ಒಳಿತಲ್ಲ ಎಂಬುದನ್ನು ಭಾವಪ್ರಕಾಶ ಗ್ರಂಥ ಉಲ್ಲೇಖಿಸಿದೆ.

ಸಿಹಿ ಆಹಾರದ ನಿತ್ಯ ಅತಿಸೇವನೆಯಿಂದ ಮಗುವು ಸ್ಥೂಲಕಾಯ, ಕಿವಿ ಕೇಳದಿರುವುದು, ಮಧುಮೇಹ ಸೇರಿದಂತೆ ಮೂತ್ರಮಾರ್ಗದ ತೊಂದರೆಗಳಿಗೆ ಈಡಾಗುವ ಅಪಾಯವಿದೆ. ಹುಳಿಗೇ ಅತಿಯಾಗಿ ಶರಣಾದರೆ ಚರ್ಮ, ಕಣ್ಣು ಹಾಗೂ ರಕ್ತಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಉಪ್ಪನ್ನು ಮಿತಿಮೀರಿ ತಿನ್ನುತ್ತಿದ್ದರೆ ಹುಟ್ಟುವ ಮಗುವಿಗೆ ಪ್ರಾಯವಾದಂತೆ ಬಿಳಿಗೂದಲು, ಬೊಕ್ಕತಲೆ, ಚರ್ಮ ಸುಕ್ಕುಗಟ್ಟುವಿಕೆ ಬೇಗನೆ ಆಗುತ್ತದೆ. ಕಹಿಯನ್ನು ಅತಿಯಾಗಿ ಪ್ರತಿನಿತ್ಯ ಬಳಸಿದರೆ ದುರ್ಬಲ, ನಪುಂಸಕ ಮಗು ಜನಿಸಬಹುದು. ಖಾರವನ್ನೇ ಹೆಚ್ಚು ತಿಂದು ಖುಷಿಪಟ್ಟರೆ ಮಗುವು ತೆಳ್ಳಗಿದ್ದು ದೇಹದಲ್ಲಿ ನೀರು ತುಂಬಿ ಜೀರ್ಣಶಕ್ತಿ, ಶರೀರಶಕ್ತಿಗಳೆರಡೂ ದುರ್ಬಲವಾಗುತ್ತದೆ. ಒಗರುರಸ ದಿನವೂ ಹೆಚ್ಚು ಬಳಸಿದರೆ ಹೊಟ್ಟೆಯುಬ್ಬರ, ತೇಗು ಮೊದಲಾದ ಪಚನತೊಂದರೆಗಳು ಬಾಧಿಸುವುದು.

ಪಂಚಸೂತ್ರಗಳು

  • ಸುವರ್ಣಗಡ್ಡೆ: ಅಸ್ತಮಾ ಗುಣಕಾರಿ.
  • ಸಬ್ಬಸಿಗೆ: ಹೊಟ್ಟೆನೋವು ನಿಯಂತ್ರಿಸುವುದು.
  • ದೊಡ್ಡ ಏಲಕ್ಕಿ: ದೊಡ್ಡಕರುಳಿನ ಜಾರುವಿಕೆ ತಡೆಯುತ್ತದೆ.
  • ಗೇರುಮರದ ಚಿಗುರು: ಸರ್ಪವಿಷದ ಚಿಕಿತ್ಸೆಯಲ್ಲಿ ಉಪಯುಕ್ತ.
  • ಅನಾನಸು: ಪೂರ್ತಿ ಹಣ್ಣಾಗದಿದ್ದಾಗ ಗರ್ಭಕೋಶಕ್ಕೆ ಬಲ ನೀಡುತ್ತದೆ.

Leave a Reply

Your email address will not be published. Required fields are marked *