ಅಘನಾಶಿನಿ ಜನ್ಮ ಸ್ಥಳದಲ್ಲಿ ನೀರಿಗೆ ಹಾಹಾಕಾರ!

ಮಂಜುನಾಥ ಸಾಯೀಮನೆ ಶಿರಸಿ
ಅಘನಾಶಿನಿ ನದಿಯ ಹುಟ್ಟೂರಾದ ಮಂಜುಗುಣಿಯಲ್ಲಿ ಈಗ ಹನಿ ನೀರಿಗೆ ಹಾಹಾಕಾರವೆದ್ದಿದೆ. ತಾಲೂಕಾಡಳಿತಕ್ಕೆ ತಿಳಿಸಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಿದ್ದ ಗ್ರಾಮ ಪಂಚಾಯಿತಿಯು ಮುಗಿಲು ನೋಡುತ್ತ ಮಳೆಗಾಗಿ ಕಾದಿದೆ!

ಇಲ್ಲಿಯ ಮಂಜುಗುಣಿ, ಖುರ್ಸೆ ಇನ್ನಿತರ ಮಜರೆಗಳ ಬಾವಿಗಳೆಲ್ಲ ಈಗ ಬರಿದಾಗಿ, ಪ್ರತಿ ದಿನ ಒಂದೆರಡು ಕೊಡ ನೀರು ಮಾತ್ರ ಲಭ್ಯವಾಗುತ್ತಿದೆ. ಈ ನೀರು ಪಡೆದುಕೊಳ್ಳಲೂ ಕೆಲವೆಡೆ ನಿತ್ಯ ಜಗಳ ನಡೆಯುತ್ತಿದೆ. ಮಂಜುಗುಣಿಯ ಹೊಸಪೇಟೆಯಲ್ಲಿ ಹಿಂದುಳಿದ ಸಮಾಜದ ಚಲವಾದಿಗಳು, ಭಂಡಾರಿಗಳು ಅಧಿಕವಾಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ಈ ಪ್ರದೇಶದಲ್ಲಿರುವ ಐದು ಬಾವಿಗಳು ಸಂಪೂರ್ಣ ಬರಿದಾಗಿವೆ. ಒಂದು ತಿಂಗಳಿಂದ ಇಲ್ಲಿ ನೀರಿನ ಸಮಸ್ಯೆ ಆರಂಭವಾಗಿದ್ದು, ಕಳೆದೊಂದು ವಾರದಿಂದ ಇನ್ನಷ್ಟು ತೀವ್ರಗೊಂಡಿದೆ.

ಮಂಜುಗುಣಿ ದೇವಾಲಯಕ್ಕೆ ಸಂಬಂಧಿಸಿದ ತೀರ್ಥ ಕೆರೆಯಲ್ಲಿ ನೀರಿದ್ದರೂ ಅದು ಬಳಸಲಾರದ ಸ್ಥಿತಿ ಇದೆ. ಹೀಗಾಗಿ, ಬೋರ್​ವೆಲ್ ನೀರು ಮತ್ತು ಪಂಚಾಯಿತಿ ಬಾವಿಯ ನೀರನ್ನು ಬಳಸಿಕೊಂಡು ಪ್ರತಿ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಆದರೆ, ಹೊಸಪೇಟೆ ಪ್ರದೇಶವು ಎತ್ತರದ ಜಾಗದಲ್ಲಿರುವ ಕಾರಣ ನೀರು ಈ ಮಟ್ಟಕ್ಕೇರುತ್ತಿಲ್ಲ. ಇಲ್ಲಿಯ ಹರಿಜನ ಕೇರಿಯ ಕೆಲವು ನಲ್ಲಿಗಳಲ್ಲಿ ಮಾತ್ರ ಗ್ರಾಮ ಪಂಚಾಯಿತಿ ಒದಗಿಸುವ ನೀರು ಬರುತ್ತಿದ್ದು, ಅರ್ಧ ಗಂಟೆ ಬಂದರೆ ಅದೇ ಹೆಚ್ಚು. ಅಲ್ಲದೆ, ಹರಿಜನ ಕೇರಿಯಲ್ಲಿ ಜನವಸತಿ ಅಧಿಕವಾಗಿರುವ ಕಾರಣ ಅವರಿಗೂ ನೀರು ಸಾಕಾಗದ ಸ್ಥಿತಿ ಇದೆ.

ಬಾವಿ ಆಳ ಹೆಚ್ಚಿಸಿ: ಹೊಸಪೇಟೆಯಲ್ಲಿರುವ 4 ಸರ್ಕಾರಿ ಬಾವಿಗಳ ಆಳ ಹೆಚ್ಚಿಸಬೇಕು ಎಂದು ಇಲ್ಲಿಯ ನಿವಾಸಿಗಳು ಗ್ರಾಮ ಪಂಚಾಯಿತಿಯನ್ನು ಆಗ್ರಹಿಸಿದ್ದಾರೆ. ‘ಈ ಭಾಗದಲ್ಲಿ ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕಳೆದ ಬೇಸಿಗೆಗಿಂತ ಈ ವರ್ಷ ನೀರಿನ ಸಮಸ್ಯೆ ತೀವ್ರವಾಗಿದೆ. ಇಲ್ಲಿಯ ಬಾವಿಯ ಆಳ ಹೆಚ್ಚಿಸಿದರೆ ಮುಂಬರುವ ವರ್ಷಗಳಲ್ಲಾದರೂ ಸಮಸ್ಯೆಗೆ ಪರಿಹಾರ ಒದಗಿಸಬಹುದು’ ಎನ್ನುತ್ತಾರೆ ಇಲ್ಲಿಯ ನಿವಾಸಿ ಅಜೀಜ್.

ಮಂಜುಗುಣಿ ಮತ್ತು ಸುತ್ತಲಿನ ಹಳ್ಳಿಯ ನೀರಿನ ಸಮಸ್ಯೆ ಗ್ರಾಮ ಪಂಚಾಯಿತಿಗೆ ತಲೆನೋವಾಗಿ ಪರಿಣಮಿಸಿದೆ. ತಾಲೂಕಾಡಳಿತಕ್ಕೆ ತಿಳಿಸಿ, ಟ್ಯಾಂಕರ್ ಮೂಲಕ ನೀರಿನ ಸರಬರಾಜು ವ್ಯವಸ್ಥೆ ಮಾಡಬೇಕಿದ್ದ ಮಂಜುಗುಣಿ ಗ್ರಾಮ ಪಂಚಾಯಿತಿ ಇನ್ನೂ ಮಳೆಗಾಗಿ ಕಾದು ನೋಡುವ ತಂತ್ರಕ್ಕೆ ನೆಚ್ಚಿಕೊಂಡಿದೆ. ‘ಗ್ರಾಮ ಪಂಚಾಯಿತಿಯ ಹಲವೆಡೆ ನೀರಿನ ಸಮಸ್ಯೆ ಇದೆ. ಏನು ಮಾಡಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವೇರಿ ಗಣಪಾ ಗೌಡ!

ಖುರ್ಸೆ, ಮಂಜುಗುಣಿ, ಒಕ್ಕಲಿಗರ ಕೇರಿ ಭಾಗದಲ್ಲಿ 75ಕ್ಕೂ ಅಧಿಕ ಕುಟುಂಬಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಕೆಲವೆಡೆ ಬೋರ್​ವೆಲ್​ನಲ್ಲಿಯೂ ನೀರಿಲ್ಲದೆ ಸಮಸ್ಯೆ ಆಗಿದ್ದು, ತಾಲೂಕಾಡಳಿತಕ್ಕೆ ತಿಳಿಸಲಿದ್ದೇವೆ. | ಕಾವೇರಿ ಗಣಪಾ ಗೌಡ ಮಂಜುಗುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ

Leave a Reply

Your email address will not be published. Required fields are marked *