ಅಘನಾಶಿನಿ, ಗಂಗಾವಳಿ ಜಲಮೂಲಕ್ಕೆ ವಿಘ್ನ

ಕುಮಟಾ: ತಾಲೂಕಿನ 23 ಪಂಚಾಯಿತಿಗಳ ಪೈಕಿ ಬಹುತೇಕ ಕಡೆ ಅಂತರ್ಜಲ ಮಟ್ಟ ತಳಪಾಯ ಕಂಡಿದ್ದು, ಕೆರೆ-ಹೊಳೆಗಳು ಬತ್ತಿವೆ. ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿತ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದರೂ ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳಿಗೆ ಬಿಸಿ ತಟ್ಟಿಲ್ಲ. ಅಂತರ್ಜಲ ಮರುಪೂರಣ ಸಂಪೂರ್ಣ ನಿರ್ಲಕ್ಷ್ಯ್ಕೊಳಗಾಗಿದೆ.

ತಾಲೂಕಿನಲ್ಲಿ ಸೊಪ್ಪಿನಹೊಸಳ್ಳಿ ಹಾಗೂ ಸಂತೇಗುಳಿ ಪಂಚಾಯಿತಿ ಹೊರತುಪಡಿಸಿದರೆ ಉಳಿದ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ 50ಕ್ಕೂ ಹೆಚ್ಚು ಬೋರ್​ವೆಲ್​ಗಳು, ಸರ್ಕಾರಿ ಬಾವಿಗಳ ಜಾಲವೇ ಇದೆ. ಖಾಸಗಿಯವರು ಕೊರೆಸಿದ್ದು ಲೆಕ್ಕಕ್ಕಿಲ್ಲ. ಇದರಲ್ಲಿ ಶೇ. 40 ರಷ್ಟು ಬೋರ್​ವೆಲ್ ಹಾಗೂ ತೆರೆದ ಬಾವಿಗಳಲ್ಲಿ ನೀರಿಲ್ಲ ಅಥವಾ ಪ್ರಯೋಜನಕ್ಕಿಲ್ಲ. ಶೇ.25ರಷ್ಟು ಬೋರ್​ವೆಲ್​ಗಳು ನೀರಿದ್ದರೂ ವಿವಿಧ ತಾಂತ್ರಿಕ ಸಮಸ್ಯೆಯಿಂದ ಬಳಕೆಯಿಂದ ದೂರವಾಗಿವೆ. ತೆರೆದ ಬಾವಿಗಳ ಹೂಳು ತೆಗೆಯುವ ಕಾರ್ಯವೂ ಅಷ್ಟಕ್ಕಷ್ಟೇ ಎಂಬಂತಿದೆ.

ವಿಚಿತ್ರವೆಂದರೆ ಸರ್ಕಾರದ ದುಡ್ಡಿನಲ್ಲಿ ಹೂಳೆತ್ತಿದ ಕೆರೆಗಳ ದುಸ್ಥಿತಿ ಬದಲಾಗಿಲ್ಲ. ಆದರೆ, ಸೇವಾಪರತೆಯಿಂದ ಸಂಘಟನೆಗಳು ಹೂಳೆತ್ತಿದ ಕೆರೆಗಳಲ್ಲಿ ನೀರಿದೆ. ಕೆರೆಗಳು ಮಾತ್ರವಲ್ಲ. ಅಘನಾಶಿನಿ ಹಾಗೂ ಗಂಗಾವಳಿ ನದಿಯ ಜಲಮೂಲಗಳು ಬರಿದಾಗುತ್ತಿವೆ. ಈ ನದಿಗಳನ್ನೇ ಆಶ್ರಯಿಸಿದ ಬೃಹತ್ ನೀರು ಪೂರೈಕೆ ಯೋಜನೆಗಳು ಕಡುಬೇಸಿಗೆಯಲ್ಲಿ ನೀರು ಕೊಡಲಾಗದ ಸ್ಥಿತಿಗೆ ತಲುಪಿವೆ. ಬರ್ಗಿ, ಮಿರ್ಜಾನ, ಹೊಲನಗದ್ದೆ, ಹೆಗಡೆ ಮುಂತಾದ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾವಿ ತೋಡುವುದಕ್ಕೂ ಹಿಂದು-ಮುಂದು ನೋಡಬೇಕಾದ ಸ್ಥಿತಿ ಬಂದಿದೆ.

ಹಿಂದೆ ಜಲಾನಯನ ಇಲಾಖೆಯಡಿ ಅಂತರ್ಜಲ ಮರುಪೂರಣದ ಯೋಜನೆಗಳು ಅಲ್ಲಲ್ಲಿ ಅನುಷ್ಠಾನಗೊಳ್ಳುತ್ತಿದ್ದವು. ಜಲಾನಯನ ಇಲಾಖೆ ಕೃಷಿ ಇಲಾಖೆಯೊಂದಿಗೆ ಸಮ್ಮಿಳಿತಗೊಂಡ ಬಳಿಕ ಈ ಉದ್ದೇಶಕ್ಕಾಗಿ ಅನುದಾನ ಹಾಗೂ ಯೋಜನೆಗಳು ಕಡಿಮೆಯಾಗಿವೆ ಎನ್ನಲಾಗಿದೆ. ಕೃಷಿ ಹೊಂಡ, ಚೆಕ್ ಡ್ಯಾಂಗಳತ್ತ ಇಲ್ಲಿನ ರೈತರ ಆಸಕ್ತಿ ಕಡಿಮೆ. ಅರಣ್ಯ ಇಲಾಖೆ ತನ್ನ ಕ್ಷೇತ್ರ ವ್ಯಾಪ್ತಿಯೊಳಗೆ ಮಳೆಗಾಲದ ನೀರಿನ ಹರಿವನ್ನು ಅನುಸರಿಸಿ ಇಂಗುಹೊಂಡ, ಟ್ರೆಂಚ್​ಗಳನ್ನು ಮಾಡುತ್ತಿವೆಯಾದರೂ ಪರಿಣಾಮ ಕಾಣದಾಗಿದೆ.

ಕಾಳಜಿ ಇಲ್ಲ: ಇಡೀ ತಾಲೂಕಿನಲ್ಲಿ ಬೆರಳೆಣಿಕೆಯಷ್ಟು ಮಂದಿ ಮಳೆ ನೀರು ಕೊಯ್ಲು ಸ್ವಂತಕ್ಕೆ ಮಾಡಿಕೊಂಡಿದ್ದಾರೆ. ಇಲಾಖೆಗಳಿಂದ ಅಂತರ್ಜಲ ಮರುಪೂರಣಕ್ಕಾಗಿ ತೆರೆದ ಬಾವಿ ಅಥವಾ ಬೋರ್​ವೆಲ್​ಗಳಿಗೆ ಮಳೆ ನೀರಿಂಗಿಸುವ ವ್ಯವಸ್ಥೆ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ. ಅಂತರ್ಜಲ ಮರುಪೂರಣದ ಬಗ್ಗೆ ಸಾರ್ವಜನಿಕರಲ್ಲಿ, ಜನಪ್ರತಿನಿಧಿಗಳಲ್ಲಿ ಜಾಗೃತಿ ಹಾಗೂ ಮಾಹಿತಿ ತುಂಬುವ ಯಾವ ಪ್ರಯತ್ನವೂ ಇಲಾಖೆಗಳಿಂದ ನಡೆಯುತ್ತಿಲ್ಲ. ವಾಹನದಲ್ಲಿ ನೀರು ಹಂಚುವ ದಂಧೆ ವಿರಾಟ್ ರೂಪ ಪಡೆದುಕೊಂಡಿದೆ. ನೀರು ಬರುವುದಿಲ್ಲ ಎಂದು ಗೊತ್ತಿದ್ದೂ ಅನುದಾನಕ್ಕೆ ಖರ್ಚು ಹಾಕುವ ಉದ್ದೇಶದಿಂದ ಕಡು ಬೇಸಿಗೆಯಲ್ಲಿ ಬಾವಿ ತೋಡುವ ಪರಿಪಾಠ ನಡೆಯುತ್ತದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದತ್ತ ಯಾರಿಗೂ ಪ್ರಾಮಾಣಿಕ ಕಾಳಜಿಯಿಲ್ಲ ಎಂಬ ಅಸಮಾಧಾನ ಜನರಿಂದ ಕೇಳಿಬಂದಿದೆ.

ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸುವ ಅನಿವಾರ್ಯತೆ ಇದೆ. ಭವಿಷ್ಯದ ದಿನಗಳಲ್ಲಿ ನೀರಿನ ಕೊರತೆ ಇರುವಲ್ಲಿ ಟ್ಯಾಂಕರ್ ನೀರು ಕೊಟ್ಟು ಪೂರೈಸುವುದು ಕಷ್ಟವಾಗಬಹುದು. ಈಗಾಗಲೇ ಜಿಪಂ ಸಿಇಒ ಅವರು ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆದ ಹಾಗೂ ಕೊಳವೆ ಬಾವಿಗಳಿಗೆ ಜಲ ಮರುಪೂರಣಕ್ಕೆ(ರಿಚಾರ್ಜ್) ಕಾರ್ಯವನ್ನು ಕೈಗೆತ್ತಿಕೊಳ್ಳಲು ಸೂಚಿಸಿದ್ದಾರೆ. ಇದಕ್ಕಾಗಿ ಪ್ರತಿ ಪಂಚಾಯಿತಿಗೆ 62,000 ರೂ. ಮೀಸಲಿದೆ. ನರೇಗಾ ಯೋಜನೆದಡಿ ಕೂಲಿ ಮಾಡಬಹುದಾಗಿದೆ.| ಸಿ.ಟಿ.ನಾಯ್ಕ ತಾಪಂ ಕಾರ್ಯನಿರ್ವಹಣಾಧಿಕಾರಿ

ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿತ್ಯ 36 ಸಾವಿರ ಲೀಟರ್ ಟ್ಯಾಂಕರ್ ನೀರು ಕೊಡಲಾಗುತ್ತಿದೆ. ನಮ್ಮಲ್ಲಿ ಅಂತರ್ಜಲದ ಸಮಸ್ಯೆ ಮಿತಿಮೀರಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲೇಬೇಕು. ನಮಗೆ ಸರಿಯಾದ ಇಲಾಖೆ ನಿರ್ದೇಶನ, ಉಪಯುಕ್ತ ತಾಂತ್ರಿಕತೆಯ ಪರಿಚಯ ಆಗಬೇಕಿದೆ. ಅಂತರ್ಜಲ ಮರುಪೂರಣದ ಉಪಾಯಗಳನ್ನು ಆಳವಡಿಸಲು ನಾವು ಸಿದ್ಧರಿದ್ದೇವೆ. | ರಾಮ ಪಟಗಾರ, ಬರ್ಗಿ ಪಂಚಾಯಿತಿ ಅಧ್ಯಕ್ಷ

ಅಂತರ್ಜಲ ಹೆಚ್ಚಿಸುವ ಕಾರ್ಯಕ್ಕೆ ಕಡ್ಡಾಯ ಗುರಿ ಬೇಕು. ಯೋಜನೆಗಳು ಹಾಗೂ ಅನುದಾನ ಹೆಚ್ಚಬೇಕು. ನಮ್ಮ ಇಲಾಖೆಯಿಂದ ಕೃಷಿಹೊಂಡ, ಚೆಕ್ ಡ್ಯಾಂ ಮುಂತಾದವುಗಳನ್ನು ಮಾಡಲು ಮಾತ್ರ ಅವಕಾಶವಿದೆ. | ಶಂಕರ ಹೆಗಡೆ, ಕೃಷಿ ಸಹಾಯಕ ನಿರ್ದೇಶಕ, ಕುಮಟಾ