ಗುಂಡ್ಲುಪೇಟೆ: ತಾಲೂಕಿನ ದೇಪಾಪುರ ಗ್ರಾಮದ ಯುವತಿ ಅಗ್ನಿವೀರ್ ಯೋಜನೆಯಲ್ಲಿ ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಜಿಲ್ಲೆಯ ಮೊದಲಿಗಳಾದ ಹೆಮ್ಮೆಗೆ ಪಾತ್ರಳಾಗಿದ್ದಾಳೆ.
ಸೇನೆಗೆ ಆಯ್ಕೆಯಾದ ಮೂವರು ಯುವತಿಯರಲ್ಲಿ ಈಕೆಯೂ ಒಬ್ಬರಾಗಿದ್ದಾರೆ. ಗ್ರಾಮದ ಚಂದ್ರಶೇಖರ ಹಾಗೂ ಅಕ್ಕಮಹಾದೇವಮ್ಮ ಅವರ ಪುತ್ರಿ ಡಿ.ಸಿ.ಮೌಲ್ಯಾ ಅಗ್ನಿವೀರ್ ಮಿಲಿಟರಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಆರು ತಿಂಗಳ ಮಿಲಿಟರಿ ತರಬೇತಿ ಪಡೆದಿದ್ದಾರೆ.
ಶಿಸ್ತಿನಿಂದ ಹೆಜ್ಜೆ ಹಾಕುತ್ತಾ ತಾನು ಪ್ರತಿನಿಧಿಸಿದ ತಂಡವನ್ನು ಮುನ್ನಡೆಸುತ್ತಿರುವ ಯುವತಿ ಜಿಲ್ಲೆಗೆ ಕೀರ್ತಿ ತಂದ ಹಿರಿಮೆಗೆ ಪಾತ್ರರಾಗಿದ್ದಾರೆ.
ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಗುಂಡ್ಲುಪೇಟೆಯ ಆದರ್ಶ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಸರಗೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದರು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ದೊಡ್ಡಮ್ಮ ದೈಹಿಕ ಶಿಕ್ಷಣ ಶಿಕ್ಷಕಿ ಅನ್ನಪೂರ್ಣಮ್ಮ ಅವರಿಂದ ದೇಶಾಭಿಮಾನ ಹಾಗೂ ಸ್ವಾತಂತ್ರೃ ಯೋಧರ ತ್ಯಾಗ, ಬಲಿದಾನ ಹಾಗೂ ದೇಶ ರಕ್ಷಣೆಯ ಬಗ್ಗೆ ಪ್ರೇರಣೆ ಪಡೆದರು. ಮುಂದೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ವಿಷಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವಾಗಲೇ ದೇಶ ಸೇವೆ ಮಾಡಬೇಕೆಂಬ ಹಂಬಲ ಹಾಗೂ ಯೋಧಳಾಗಬೇಕೆಂಬ ಛಲದಿಂದ ಅಗ್ನಿವೀರ್ ಯೋಜನೆಗೆ ಅರ್ಜಿ ಹಾಕಿದ್ದರು.
ಆನ್‌ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬೆಂಗಳೂರು ಸೇನಾ ತರಬೇತಿ ಕೇಂದ್ರದಲ್ಲಿ ಆರು ತಿಂಗಳ ಕಠಿಣ ತರಬೇತಿಯನ್ನು ಪಡೆದು ಭಾರತೀಯ ಸೈನ್ಯಕ್ಕೆ ಸೇರಿದ್ದಾರೆ. ಇವರೊಂದಿಗೆ ಬೆಳಗಾವಿಯ ಮತ್ತಿಬ್ಬರು ಯುವತಿಯರೂ ಆಯ್ಕೆಯಾಗಿದ್ದಾರೆ.
ಮೌಲ್ಯಾ ಹಾಗೂ ಆಕೆಯ ಸಹೋದರಿ ಸರ್ವಮಂಗಳಾ ಅವರಿಗೆ ನಾನೇ ಶಿಕ್ಷಣ ಹಾಗೂ ಮಾರ್ಗದರ್ಶನ ನೀಡಿ ಬೆಳೆಸಿದ್ದೇನೆ. ಮೌಲ್ಯಾಳಿಗೆ ಭೂಸೇನೆ ಸೇರುವ ಆಸೆಯಿದ್ದರೂ ಕಾಲೇಜಿನ ಎನ್‌ಸಿಸಿಯಲ್ಲಿ ನೌಕಾದಳದ ಕೋರ್ಸ್ ಇದ್ದಿದ್ದರಿಂದ ಅಲ್ಲಿಗೆ ಆಯ್ಕೆಯಾಗಿದ್ದಾಳೆ. ತರಬೇತಿ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾಳೆ.
ಅನ್ನಪೂರ್ಣಮ್ಮ, ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ