ಅಗಸರ ಹಳ್ಳದ ಒತ್ತುವರಿ ತೆರವು

ನರೇಗಲ್ಲ: ಜಕ್ಕಲಿ ಗ್ರಾಮದ ಅಗಸರ ಹಳ್ಳದ ಒತ್ತುವರಿಯನ್ನು ತಹಸೀಲ್ದಾರ್ ಶರಣಮ್ಮ ಕಾರಿ ನೇತೃತ್ವದಲ್ಲಿ ಗುರುವಾರ ತೆರವು ಮಾಡಲಾಯಿತು.

ಗ್ರಾಮದ ಸವಡಿ ರಸ್ತೆಯ ಅಗಸರ ಹಳ್ಳದ ಸುತ್ತಲಿನ ಜಮೀನು ಒತ್ತುವರಿಯಾದ ಕಾರಣ ಆ ಭಾಗದಲ್ಲಿ ಬರುವ ಇತರೆ ಜಮೀನುಗಳಿಗೆ ತೆರಳಲು ತೊಂದರೆಯಾಗುತ್ತಿತ್ತು. ಹಳ್ಳ ಒತ್ತುವರಿಯಾದ ಪರಿಣಾಮ ನೀರು ಸರಾಗವಾಗಿ ಹರಿದು ಹೋಗುತ್ತಿರಲಿಲ್ಲ. ಹೀಗಾಗಿ ಹಳ್ಳದ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತ, ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದ ಕಾರಣ ಅವರಿಗೆ ಸರ್ವೆ ನಡೆಸಲು ಆದೇಶಿಸುವಂತೆ ತಹಸೀಲ್ದಾರ್​ಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು. ಅದಕ್ಕೆ ಸ್ಪಂದಿಸಿದ ರೋಣ ತಹಸೀಲ್ದಾರ್ ಶರಣಮ್ಮ ಕಾರಿ, ಸ್ಥಳಕ್ಕೆ ಬುಧವಾರ ಭೇಟಿ ನೀಡಿ, ಹಳ್ಳ ಹಾಗೂ ರಸ್ತೆಯ ಹದ್ದನ್ನು ಗುರುತಿಸಿ ಗುರುವಾರ ಜೆಸಿಬಿ ಮೂಲಕ ತೆರವುಗೊಳಿಸಿದರು. ತಾಲೂಕಾಡಳಿತದ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರಾದ ಶಿವನಾಗಪ್ಪ ದೊಡ್ಡಮೇಟಿ, ಎಚ್.ಎನ್. ಜಂಗಣ್ಣವರ, ಕೆ.ಕೆ. ಕಾರಡಗಿ, ಪಿ.ಎ. ಹೊಸಮನಿ, ಎಸ್.ಜಿ. ದೊಡ್ಡಮೇಟಿ, ವೀರಪ್ಪ ಮುಗಳಿ, ಎಂ.ಎಂ. ಮೇಟಿ, ಎಚ್.ಎಸ್. ಮೇಟಿ, ಎಂ.ಬಿ. ರೇಣುಕಮಠ, ಎಂ.ಎಲ್. ಶ್ಯಾಶಟ್ಟಿ, ಎಂ.ಎಸ್. ನಿಡಗುಂದಿ, ಎ.ಬಿ. ಬೇನಹಾಳ ಸೇರಿದಂತೆ ಗ್ರಾಮಸ್ಥರು, ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಪಿಎಸ್​ಐ ರಾಜೇಶ ಬಟಕುರ್ಕಿ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಅಗಸರ ಹಳ್ಳ, ರಸ್ತೆ ಒತ್ತುವರಿ ಕುರಿತು ಜಕ್ಕಲಿ ಗ್ರಾಮಸ್ಥರು ಇತ್ತೀಚೆಗೆ ಮನವಿ ಸಲ್ಲಿಸಿದ್ದರು. ಸರ್ವೆ ಕಾರ್ಯ ಸ್ವಲ್ಪ ವಿಳಂಬವಾಗಿತ್ತು. ಬುಧವಾರ ರಸ್ತೆ ಹಾಗೂ ಹಳ್ಳದ ಸರ್ವೆ ನಡೆಸಿ, ಗುರುವಾರ ತೆರವು ಮಾಡಲಾಗಿದೆ. ಸರ್ಕಾರದ ಆಸ್ತಿಗಳ ಒತ್ತುವರಿಯನ್ನು ಮುಲಾಜಿಲ್ಲದೇ ತೆರವು ಮಾಡಲಾಗುತ್ತದೆ.
| ಶರಣಮ್ಮ ಕಾರಿ, ತಹಸೀಲ್ದಾರ್, ರೋಣ.

Leave a Reply

Your email address will not be published. Required fields are marked *