ಅಖಾಡಕ್ಕಿಳಿದ ಯೋಗೇಶ್ವರ್

ರಾಮನಗರ: ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ನಂತರ ರಾಜಕೀಯದಿಂದ ದೂರವೇ ಉಳಿದಿದ್ದ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಇದೀಗ ಸದ್ದಿಲ್ಲದೆ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ.

ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಹೈಜಾಕ್ ಆಗಿದ್ದರಿಂದ ಮುಖಭಂಗಕ್ಕೀಡಾಗಿದ್ದ ಯೋಗೇಶ್ವರ್ ಆನಂತರ ತೆರೆಮರೆಗೆ ಸರಿದಿದ್ದರು. ಆಪರೇಷನ್ ಕಮಲದಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಸೋಮವಾರ (ಫೆ.18) ಚನ್ನಪಟ್ಟಣದ ನಿವಾಸದಲ್ಲಿ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಕಣಕ್ಕೆ ಇಳಿಯುವ ಸಿದ್ದತೆ?: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯೋಗೇಶ್ವರ್, ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅನಿರೀಕ್ಷಿತ ಸೋಲು ಕಂಡಿದ್ದರು. ಇದಾದ ನಂತರ ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕೆ ಇಳಿಯುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದರೂ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಪುತ್ರ ಎಲ್.ಚಂದ್ರಶೇಖರ್​ರನ್ನು ಕಣಕ್ಕಿಳಿಸಿ ಪ್ರಶಂಸೆಗೆ ಒಳಗಾಗಿದ್ದರು. ಆದರೆ ಚಂದ್ರಶೇಖರ್ ಆಪರೇಷನ್​ಗೆ ಒಳಗಾಗಿ ಮತ್ತೆ ಕೈ ಅಂಗಳದಲ್ಲಿ ಗುರ್ತಿಸಿಕೊಂಡಿದ್ದರಿಂದ ಯೋಗೇಶ್ವರ್ ಮುಖಭಂಗಕ್ಕೆ ಒಳಗಾಗಿದ್ದರು. ಇದೀಗ ಯೋಗೇಶ್ವರ್ ಅವರನ್ನೇ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿಸಬೇಕು ಎನ್ನುವ ಮಾತು ವ್ಯಾಪಕವಾಗಿ ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ರಾಜಕೀಯ ಚಟುವಟಿಕೆಯನ್ನು ಬಹಿರಂಗವಾಗಿ ನಿಲ್ಲಿಸಿದ್ದ ಸಿಪಿವೈ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ.

ಆಕಾಂಕ್ಷಿಗಳ ದಂಡು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ.ಕೆ.ಸುರೇಶ್ ಕಣಕ್ಕೆ ಇಳಿಯುವುದು ನಿಶ್ಚಿತ. ಇವರಿಗೆ ಪ್ರಬಲ ಎದುರಾಳಿಯನ್ನು ಕಣಕ್ಕೆ ಇಳಿಸಬೇಕು ಎನ್ನುವ ಲೆಕ್ಕಾಚಾರ ಬಿಜೆಪಿಯದ್ದು. ಇದಕ್ಕಾಗಿ ತೀವ್ರ ಹುಡುಕಾಟವನ್ನು ನಡೆಸಿತ್ತು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿರುವ ನಡುವೆಯೇ, ಬಿಜೆಪಿ ರಾಜ್ಯ ವಕ್ತಾರರಾದ ಅಶ್ವಥನಾರಾಯಣ ಗೌಡ ಹೆಸರು ತೇಲಿ ಬಂದಿತ್ತು. ಜತೆಗೆ ಕನಕಪುರ ಕ್ಷೇತ್ರದ ಮಾಜಿ ಸಂಸದೆ ತೇಜಶ್ವಿನಿಗೌಡ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಸ್ವತಃ ಯೋಗೇಶ್ವರ್ ಅವರೇ ತಾವು ಸ್ಪರ್ಧೆ ಮಾಡಿದರೆ ಆಗುವ ಲಾಭ ನಷ್ಟಗಳು ಮತ್ತು ಪಕ್ಷಕ್ಕೆ ಇರುವ ಬೆಂಬಲದ ಬಗ್ಗೆ ಆಪ್ತರೊಂದಿಗೆ ರ್ಚಚಿಸಿದ್ದಾರೆ.

ಕ್ಷೇತ್ರಕ್ಕೆ ಇದೆ ಬಿಜೆಪಿ ಬಲ: ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದರೂ, ಬಿಜೆಪಿ ಶಕ್ತಿಯನ್ನು ಅಲ್ಲಗಳೆಯುವಂತಿಲ್ಲ. ಈ ಹಿಂದೆ ಕನಕಪುರ ಲೋಕಸಭಾ ಕ್ಷೇತ್ರವಾಗಿದ್ದಾಗ ಬಿಜೆಪಿಯ ಶ್ರೀನಿವಾಸ್ ಗೆಲುವು ಸಾಧಿಸಿರುವುದೇ ಇದಕ್ಕೆ ಸಾಕ್ಷಿ. ಕ್ಷೇತ್ರ ವ್ಯಾಪ್ತಿಯ ಆನೇಕಲ್, ಕುಣಿಗಲ್, ಮಾಗಡಿ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ವೋಟ್ ಬ್ಯಾಂಕ್ ಹೊಂದಿದೆ. ಅಲ್ಲದೆ, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯೂ ಕೆಲಸ ಮಾಡುವುದರಿಂದ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಮೈತ್ರಿಯ ಹೊರತಾಗಿಯೂ ಸಂಸದ ಡಿ.ಕೆ.ಸುರೇಶ್ ಪಾಲಿಗೆ ಈ ಕ್ಷೇತ್ರ ಕಬ್ಬಿಣದ ಕಡಲೆಯಾಗಲಿದೆ. ಈ ಎಲ್ಲ ಲೆಕ್ಕಾಚಾರಗಳನ್ನು ಯೋಗೇಶ್ವರ್ ಹಾಕಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಚುನಾವಣೆ ಯಲ್ಲಿ ಸ್ಪರ್ಧಿಸುವ ಬಗ್ಗೆ ಚಿಂತಿಸಿಲ್ಲ. ಪಕ್ಷ ತೆಗೆದುಕೊಳ್ಳುವ ತೀರ್ವನಕ್ಕೆ ಬದ್ದನಾಗಿರುತ್ತೇನೆ. ಈ ಬಗ್ಗೆ ಆಪ್ತರೊಂದಿಗೆ ಮಾತನಾಡಿದ್ದೇನೆ ಅಷ್ಟೇ. ಯಾವುದೇ ಸಭೆ ನಡೆಸಿಲ್ಲ.

| ಸಿ.ಪಿ.ಯೋಗೇಶ್ವರ್ ಮಾಜಿ ಸಚಿವ