ಅಕ್ಷರ ಜಾತ್ರೆಗೆ ಸಾಕ್ಷಿಯಾದ 3 ಲಕ್ಷ ಸಾಹಿತ್ಯಪ್ರಿಯರು

ಧಾರವಾಡ: ಸಾಹಿತ್ಯದ ತವರು ಧಾರವಾಡದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಭಾನುವಾರ ಅದ್ದೂರಿ ತೆರೆ ಕಂಡಿತು. ಮೂರು ದಿನಗಳ ಕಾಲ ಸಮ್ಮೇಳನದ ಅವಧಿಯಲ್ಲಿ 3 ಲಕ್ಷಕ್ಕಿಂತ ಅಧಿಕ ಸಾಹಿತ್ಯಪ್ರಿಯರು, ಭೇಟಿ ನೀಡಿ ಅಕ್ಷರ ಜಾತ್ರೆ ಸುಂದರ ಕ್ಷಣಗಳನ್ನು ಸವಿದರು. ಹಲವು ಪುಸ್ತಕಗಳು, ಕರಕುಶಲ ವಸ್ತುಗಳು ಮತ್ತು ಬಟ್ಟೆ-ಬರೆ ಖರೀದಿಸಿ ಖುಷಿಪಟ್ಟರು.

ಸಮ್ಮೇಳನದ ಕೊನೆಯ ದಿನದಂದು ಭಾನುವಾರದ ಸರ್ಕಾರಿ ರಜೆ ಇದ್ದಕಾರಣ ಜನದಟ್ಟಣೆ ಹೆಚ್ಚಾಗಿಯೇ ಇತ್ತು. ಸಮ್ಮೇಳನದ ಮುಖ್ಯವೇದಿಕೆ, ಪುಸ್ತಕ ಮಳಿಗೆ, ವಾಣಿಜ್ಯ ಪ್ರದರ್ಶನ ಮಳಿಗೆ, ರೈತ ಜ್ಞಾನಾಭಿವೃದ್ಧಿ ಕೇಂದ್ರ, ಪ್ರೇಕ್ಷಾಗೃಹ ಹೀಗೆ… ಎತ್ತ ಕಣ್ಣು ಹಾಯಿಸಿದರೂ ಜನರ ರಾಶಿಯೇ ಕಣ್ಣಿಗೆ ಬೀಳುತ್ತಿತ್ತು.

ಪುಸ್ತಕ ಮಳಿಗೆಯಲ್ಲಿ ನೂಕುನುಗ್ಗಲು

ಊಟದ ವ್ಯವಸ್ಥೆ ಮಾಡಿದ್ದ ಸ್ಥಳ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ ಹಾಗೂ ಮುಖ್ಯವೇದಿಕೆ ಬಳಿ ಜನರ ನೂಕುನುಗ್ಗಲು ಕಂಡುಬಂತು. ಪುಸ್ತಕ ಮಳಿಗೆಯಲ್ಲಿ ಒಂದೊಂದು ಹೆಜ್ಜೆ ಇಡಲು ಪುಸ್ತಕಪ್ರಿಯರು ಹರಸಾಹಸ ಪಟ್ಟರು. ಧೂಳು ಬಿಟ್ಟುಬಿಡದೇ ಸಾಹಿತ್ಯಪ್ರಿಯರನ್ನು ಕಾಡಿತು. ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಆಡಳಿತ ಯಂತ್ರ ಶಪಿಸುತ್ತ ಮುಂದೆ ಸಾಗಿದರು. ಈ ನಡುವೆ ಸಂಘಟಕರು ಧೂಳು ಹೆಚ್ಚಿರುವ ಕಡೆಗಳಲ್ಲಿ ನೀರು ಸಿಂಪಡಿಸಿ ಧೂಳಿನ ಅಬ್ಬರಕ್ಕೆ ತುಸು ಬ್ರೇಕ್ ಹಾಕಿದರು. ಬೆಳಗ್ಗೆಯಿಂದ ತಡರಾತ್ರಿಯವರೆಗೂ ಸಾಹಿತ್ಯಪ್ರಿಯರ ದಂಡು ಸಮ್ಮೇಳನ ವೇದಿಕೆಯತ್ತ ಹರಿದುಬಂತು. ನಗರದ ಬಸ್ ನಿಲ್ದಾಣದಿಂದ ಕೃಷಿ ವಿವಿ ಆವರಣದವರೆಗೆ ಉಚಿತವಾಗಿ ಬಸ್ ಸೇವೆ ಒದಗಿಸಿದ ಸಾರಿಗೆ ಸಂಸ್ಥೆಯ ಸೇವೆಗೂ ಶ್ಲಾಘನೆ ವ್ಯಕ್ತವಾಯಿತು.

ಅಪಾರ ಪ್ರಮಾಣದ ಜನಸಂಖ್ಯೆ ಬಂದರೂ ಯಾವುದೇ ಕಡೆ ಗದ್ದಲ-ಗಲಾಟೆಗಳು ನಡೆದಿಲ್ಲ. ಪುಸ್ತಕ ಮಳಿಗೆಯಲ್ಲಿ ಶುಕ್ರವಾರ, ಶನಿವಾರ ಯಾವುದೇ ಕಡೆಯಿಂದಲೂ ಪುಸ್ತಕಪ್ರಿಯರು ಸಂಚರಿಸಬಹುದಿತ್ತು. ಆದರೆ, ಜನ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕಾರಣ ಪುಸ್ತಕ ಮಳಿಗೆಗೆ ತೆರಳಲು, ವಾಪಸ್ ಬರಲು ಎರಡು ಪ್ರತ್ಯೇಕ ದ್ವಾರ ಮಾಡಿದ್ದೇವೆ ಎಂದು ಸಂಘಟಕರು ಮಾಹಿತಿ ನೀಡಿದರು.