ಅಕ್ಷರ ಗುಡಿ ಶಾಲೆಗೆ ನಡಿ

ಗದಗ: 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವಕ್ಕೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ‘ಅಕ್ಷರ ಗುಡಿ ಜಾಥಾ’ ಎಂಬ ವಿನೂತನ ಯೋಜನೆ ರೂಪಿಸಿದೆ.

ಮೇ 31ರಂದು ಬಹುಪಾಲು ಮಕ್ಕಳು ಶಾಲೆಗೆ ಬರುವಂತೆ ಪ್ರೇರೇಪಿಸಲು ಜಿಲ್ಲೆಯ ಪ್ರತಿ ತಾಲೂಕು ಮತ್ತು ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ‘ಅಕ್ಷರ ಗುಡಿ ಶಾಲೆಗೆ ನಡಿ’ ಘೊಷವಾಕ್ಯದೊಂದಿಗೆ ಜನರಿಗೆ ಜಾಗೃತಿ ಮೂಡಿಸುವ ಜಾಥಾ ಹಮ್ಮಿಕೊಂಡಿದೆ.

ಜಿಲ್ಲೆಯ ಪ್ರತಿ ಮಕ್ಕಳು ಶಿಕ್ಷಣ ಪಡೆಯಬೇಕು ಜತೆಗೆ ಪಾಲಕರು ಸಹ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂಬ ಜಾಗೃತಿ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ವಿಶೇಷ ಅಭಿಯಾನ ಶೈಕ್ಷಣಿಕ ಕಳಕಳಿ ಹೊಂದಿದೆ.

ಏನಿದು ಅಕ್ಷರ ಗುಡಿ

ಜಿಲ್ಲೆ ಮತ್ತು ತಾಲೂಕು ಮತ್ತು ಪ್ರಮುಖ ಹೋಬಳಿಗಳಲ್ಲಿ ಅಕ್ಷರ ಗುಡಿ ವಿನ್ಯಾಸ ರೂಪಿಸಬೇಕು. ಮೇ 29ರೊಳಗೆ ಅಕ್ಷರ ಗುಡಿ ವಿನ್ಯಾಸ (ತಿಳುವಾದ ಕಬ್ಬಿಣದಿಂದ ನಿರ್ವಣ) ಸಿದ್ಧಗೊಳಿಸಿ 407 ವಾಹನದಲ್ಲಿ ಜೋಡಿಸಿಡಬೇಕು. ಜತೆಗೆ ವಾಹನವನ್ನು ತಳಿರು ತೋರಣ, ಹೂವಿನಹಾರ, ಬಾಳೆ ಕಂಬ ಮುಂತಾದವುಗಳಿಂದ ಶೃಂಗರಿಸಬೇಕು. ವಾಹನದ ಮುಂಭಾಗದಲ್ಲಿ ಸರಸ್ವತಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಸಿದ್ದಪಡಿಸಬೇಕು.

ಅಕ್ಷರ ಗುಡಿಯ ಮೊದಲ ಸ್ತರ 12 ಅಡಿ ಅಗಲ, 10 ಅಡಿ ಎತ್ತರ ಜತೆಗೆ ಮೇಲೊಂದು ಗೋಪುರ ಹೊಂದಿರುತ್ತದೆ. ಮೊದಲ ಸ್ತರದಲ್ಲಿ ಜಿಲ್ಲೆಯ ಪ್ರಮುಖ ಗುಡಿಗಳ ಭಾವಚಿತ್ರಗಳನ್ನು ಬಳಸಿಕೊಳ್ಳಬೇಕು (ಉದಾ: ವೀರನಾರಾಯಣ ದೇವಸ್ಥಾನ, ಡಂಬಳ ಸೋಮೇಶ್ವರ ದೇವಾಲಯ), 2ನೇ ಸ್ತರದಲ್ಲಿ 10 ಅಡಿ ಸುತ್ತಳತೆಯ ವ್ಯಾಸ ಹೊಂದಿದ್ದು, ಇಲ್ಲಿ ಜಿಲ್ಲೆಯ ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳನ್ನು ಬಳಸಿಕೊಳ್ಳಬಹುದು (ಕುಮಾರವ್ಯಾಸ, ಚಾಮರಸ, ಭೀಮಸೇನ ಜೋಶಿ), 3ನೇ ಸ್ತರದಲ್ಲಿ 8 ಅಡಿ ಸುತ್ತಳತೆ ವ್ಯಾಸದಲ್ಲಿ ಕನ್ನಡ ಅಂಕಿಗಳು, ನಲಿಕಲಿ ಲೋಗೋಗಳು, ಕನ್ನಡ ಅಕ್ಷರ ಹಾಕಲಾಗುವುದು, 4ನೇ ಸ್ತರದಲ್ಲಿ 6 ಅಡಿ ವ್ಯಾಸದಲ್ಲಿ ಕನ್ನಡ ಸಾಹಿತ್ಯ ಲೋಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಹಾಕಲಾಗುವುದು, 5ನೇ ಸ್ತರದ 4 ಅಡಿ ವ್ಯಾಸದಲ್ಲಿ ಇಲ್ಲಿ ಜ್ಞಾನ ದೇವತೆ ಸರಸ್ವತಿ ಫೋಟೋ ಗುಮ್ಮಟ ಮಾದರಿಯಲ್ಲಿ ಸಿದ್ಧಪಡಿಸಬೇಕು. ಕೊನೆಯ 2 ಅಡಿಯಲ್ಲಿ ಶಿಖರ ಕಳಸ ಸಿದ್ಧಪಡಿಸಬೇಕು.

ಒಂದು ತಾಲೂಕು ಕೇಂದ್ರದಲ್ಲಿರುವ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿಯೊಂದು ಶಾಲೆಯವರು ತಮ್ಮ ಶಾಲೆಯ ಬ್ಯಾನರ್, ಕವಾಯತು ಮತ್ತು ಜಾನಪದ ಮೇಳ ತರಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು, ಶಾಸಕರು ಸೇರಿ ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು.

ಅಕ್ಷೆರ ಪ್ರಾರಂಭೋತ್ಸವ ಕಾರ್ಯಕ್ರಮ ಜಿಲ್ಲಾ, ತಾಲೂಕು ಕೇಂದ್ರಗಳ ಜತೆಗೆ ಲಕ್ಷೆ್ಮೕಶ್ವರ, ಗಜೇಂದ್ರಗಡ, ನರೇಗಲ್, ಮುಳಗುಂದ, ಡಂಬಳ ಸೇರಿ ಪ್ರಮುಖ ಸ್ಥಳಗಳಲ್ಲಿ ಮೆರವಣಿಗೆ ನಡೆಸಬೇಕು ಎಂದು ಬಿಇಒ ಅವರಿಗೆ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.

ಪಾಲಕರು ಜಾಗೃತರಾಗಬೇಕು, ಮಕ್ಕಳು ಶಾಲೆಗೆ ಬರಬೇಕು, ಶಿಕ್ಷಣದ ಮಹತ್ವ ತಿಳಿಸುವುದು, ಸರ್ಕಾರಿ ಶಾಲೆಗಳು ಸದೃಢವಾಗಿವೆ ಎಂದು ತೋರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, 5 ವರ್ಷ 10 ತಿಂಗಳು ಪೂರೈಸಿದ ಪ್ರತಿ ಮಗು ಶಿಕ್ಷಣ ಪಡೆಯಬೇಕು. ಶೇ. 100ರಷ್ಟು ದಾಖಲಾತಿ ಆಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಅಕ್ಷರ ಗುಡಿ ಯೋಜನೆ ಜಾಗೃತಿಗಾಗಿ ಕರಪತ್ರವನ್ನೂ ಹಂಚಲಾಗುತ್ತಿದೆ.

ಎನ್.ಎಚ್. ನಾಗೂರು, ಉಪನಿರ್ದೇಶಕ

ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ

Leave a Reply

Your email address will not be published. Required fields are marked *