ಅಕ್ಷಯ್-ವಿದ್ಯಾ ಮಂಗಳಯಾನ

‘ಹೇ ಬೇಬಿ’ ಮತ್ತು ‘ಭೂಲ್ ಭುಲಯ್ಯ’ ಚಿತ್ರಗಳಲ್ಲಿ ಅಕ್ಷಯ್ ಕುಮಾರ್ ಮತ್ತು ವಿದ್ಯಾ ಬಾಲನ್ ಜತೆಯಾಗಿ ನಟಿಸಿದ್ದರು. ಬಹುವರ್ಷಗಳ ಬಳಿಕ ಈ ಜೋಡಿಯನ್ನು ಬೆಳ್ಳಿಪರದೆ ಮೇಲೆ ಒಂದಾಗಿಸಲು ಈಗ ಮತ್ತೆ ಪ್ಲಾ್ಯನ್ ಸಿದ್ಧಗೊಳ್ಳುತ್ತಿದೆ. ಭಾರತ 2013ರಲ್ಲಿ ಮಂಗಳಗ್ರಹಕ್ಕೆ ಉಪಗ್ರಹ ಉಡಾವಣೆ ಮಾಡಿದ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಆರ್. ಬಾಲ್ಕಿ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ವಿದ್ಯಾ ಮತ್ತು ಅಕ್ಷಯ್ ಕುಮಾರ್ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಇಬ್ಬರೂ ಜತೆಯಾಗಿ ನಟಿಸುತ್ತಾರೆ ಎಂದ ಮಾತ್ರಕ್ಕೆ ಅವರು ಪ್ರೇಮಿಗಳಾಗಿಯೋ ಅಥವಾ ಗಂಡ-ಹೆಂಡತಿ ಆಗಿಯೋ ಕಾಣಿಸಿಕೊಳ್ಳುತ್ತಾರೆ ಎಂದುಕೊಳ್ಳುವಂತಿಲ್ಲ. ಮೂಲಗಳ ಪ್ರಕಾರ, ವಿದ್ಯಾಗೆ ಇಲ್ಲಿ ವಿಜ್ಞಾನಿ ಪಾತ್ರ ನೀಡಲಾಗಿದೆಯಂತೆ. ಅದಕ್ಕಾಗಿ ಅವರು ಡಿಸೆಂಬರ್ ತಿಂಗಳಿನಿಂದ ತರಬೇತಿಯನ್ನೂ ಪಡೆಯಲಿದ್ದಾರೆ. ಇನ್ನು, ಈವರೆಗೂ ಡಿಫರೆಂಟ್ ಸಿನಿಮಾಗಳನ್ನೇ ಮಾಡಿಕೊಂಡು ಬಂದಿರುವ ಆರ್. ಬಾಲ್ಕಿ ಇದೇ ಮೊದಲ ಬಾರಿಗೆ ಅಂತರಿಕ್ಷಯಾನ ಕುರಿತ ಕಥೆ ಆಯ್ದುಕೊಂಡಿರುವುದು ವಿಶೇಷ. ಎಲ್ಲವೂ ಅಂದುಕೊಂಡಂತೆ ನಡೆದರೆ 2019ರ ಜನವರಿ ವೇಳೆಗೆ ಈ ಚಿತ್ರಕ್ಕೆ ಶೂಟಿಂಗ್ ಶುರುವಾಗಲಿದೆ. ಅಂದಹಾಗೆ, ಮಂಗಳಯಾನ ಕುರಿತ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ದೇಶಕರು ತೊಡಗಿಕೊಂಡಿದ್ದಾರೆ. ಇದೊಂದು ಬಹುತಾರಾಗಣದ ಚಿತ್ರ ಆಗಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ವಿದ್ಯಾ ಬಾಲನ್ ಮಾತ್ರವಲ್ಲದೆ ಇನ್ನೂ ಮೂವರು ನಟಿಯರು ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರಂತೆ. -ಏಜೆನ್ಸೀಸ್