ಅಕ್ರಮ ಮದ್ಯ ವಶ

ನರಗುಂದ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 42 ಲಕ್ಷ 24 ಸಾವಿರದ 933 ರೂ. ಮೌಲ್ಯದ ಮದ್ಯವನ್ನು ತಾಲೂಕಿನ ಆಚಮಟ್ಟಿ ಕ್ರಾಸ್ ಬಳಿ ಚೆಕ್​ಪೋಸ್ಟ್​ನಲ್ಲಿ ಶುಕ್ರವಾರ ಬೆಳಗಿನ ಜಾವ 6 ಗಂಟೆ ಸುಮಾರಿಗೆ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಲಾರಿಯಲ್ಲಿ ವಿವಿಧ ಕಂಪನಿಗಳ 1700 ಬಾಕ್ಸ್ ಮದ್ಯ ಸಾಗಿಸಲಾಗುತ್ತಿತ್ತು. ಲಾರಿಯು ಬೆಂಗಳೂರಿನ ಜಾನ್ ಡಿಸ್ಟಿಲರಿಯಿಂದ ಗೋಕಾಕ ಕೆಎಸ್​ಬಿಸಿಎಲ್ ಅಬಕಾರಿ ಡಿಪೋಗೆ ತೆರಳುತ್ತಿತ್ತು. ಲಾರಿ ಮಾರ್ಗದಲ್ಲಿ ಚಿತ್ರದುರ್ಗ, ತುಮಕೂರು ಎಂದು ಮಾತ್ರ ನಮೂದಿಸಲಾಗಿದೆ. ಆದರೆ, ಅಬಕಾರಿ ಪರ್ವಿುಟ್ ನಿಯಮದ ಪ್ರಕಾರ ರಸ್ತೆ ಮಾರ್ಗದ ಊರುಗಳ ಹೆಸರುಗಳನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ನರಗುಂದ ಮಾರ್ಗವಾಗಿ ಗೋಕಾಕಕ್ಕೆ ತೆರಳುವಾಗ ಆಚಮಟ್ಟಿ ಕ್ರಾಸ್ ಬಳಿಯ ಚೆಕ್​ಪೋಸ್ಟ್​ನಲ್ಲಿ ಚುನಾವಣೆಗೆ ನಿಯುಕ್ತಿಗೊಂಡಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಲಾರಿ ಹಾಗೂ ಎಚ್.ಡಿ. ಕೋಟೆಯ ಲಾರಿ ಚಾಲಕ ಮೋಹನ್ ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಾರ್ಚ್ 14 ರಂದು 76 ಲಕ್ಷ ರೂ., 21 ರಂದು 47 ಲಕ್ಷ ರೂ. ಮೌಲ್ಯದ ಮದ್ಯ ಸಾಗಿಸುತ್ತಿದ್ದ ಲಾರಿಗಳನ್ನು ಅಧಿಕಾರಿಗಳು ಇದೇ ಚೆಕ್​ಪೋಸ್ಟ್​ನಲ್ಲಿ ವಶಕ್ಕೆ ಪಡೆದಿದ್ದರು. ಒಂದು ವಾರದ ಅವಧಿಯಲ್ಲಿ ಮತ್ತದೇ ಘಟನೆ ಮರುಕಳಿಸಿದ್ದು ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳು ಮೂಡುವಂತಾಗಿದೆ.

ಅಬಕಾರಿ ಇಲಾಖೆಯ ಗದಗ ಜಿಲ್ಲಾಧಿಕಾರಿ ಅಬೀದ ಹುಸೇನ್, ತಹಸೀಲ್ದಾರ್ ಆಶೆಪ್ಪ ಪೂಜಾರ, ಅಬಕಾರಿ ಇಲಾಖೆ ಸಿಪಿಐ ರವಿ ಮುರಗೋಡ, ಅಬಕಾರಿ ಉಪನಿರೀಕ್ಷಕ ಮಹ್ಮದ್ ಹುಸೇನ್, ಎಚ್.ಎಸ್. ನಿರಂಜನ ಮೂರ್ತಿ, ಎ.ಎಸ್. ಹೊಸಮನಿ, ಕಾಶೆಣ್ಣವರ, ಎಸ್.ಬಿ. ವಾಲ್ಮೀಕಿ, ಮಹೇಶ ಹಾಗೂ ಹೋಂ ಗಾರ್ಡ್ಸ್, ಎಸ್​ಎಸ್​ಟಿ ತಂಡದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.

Leave a Reply

Your email address will not be published. Required fields are marked *