ಅಕ್ರಮ ಮದ್ಯ ಮಾರಾಟ ಅವ್ಯಾಹತ

ರಾಣೆಬೆನ್ನೂರ: ಗ್ರಾಮೀಣ ಪ್ರದೇಶದಲ್ಲಿ ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಆರೋಪಗಳ ನಡುವೆ ಕೆಲ ಬಾರ್​ಗಳ ಮಾಲೀಕರು ನೇರವಾಗಿ ಗ್ರಾಮೀಣ ಪ್ರದೇಶಕ್ಕೆ ಮದ್ಯವನ್ನು ಸರಬರಾಜು ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನ ಕುಪ್ಪೇಲೂರ ಗ್ರಾಮದ ಬಾರ್ ಒಂದರಿಂದ ಜೋಹಿಸರಹರಳಹಳ್ಳಿ, ಉಕ್ಕುಂದ, ತೊರವಂದ, ಹೆಡಿಯಾಲ, ಕುಸಗೂರು, ಅಸುಂಡಿ ಸೇರಿ ಹಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಗಾರರಿಗೆ ಸರಬರಾಜು ಮಾಡಲಾಗುತ್ತಿದೆ.

ಹೇಗೆ ಸಾಗಾಟ: ವಾರದಲ್ಲಿ ಮೂರು ದಿನ ಅಥವಾ ಎರಡು ದಿನಕ್ಕೊಮ್ಮೆ ಆಟೋಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅಲ್ಲಿನ ಪ್ರದೇಶದಲ್ಲಿ ಬೇಡಿಕೆ ಇರುವ ಮದ್ಯವನ್ನು ಪೂರೈಸಲಾಗುತ್ತಿದೆ. ಸಾಮಾನ್ಯವಾಗಿ ತಂಪು ಪಾನೀಯ ವಿತರಕರು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಮಾರುಕಟ್ಟೆ ವಿಸ್ತಿರಿಸಿದ ರೀತಿಯಲ್ಲಿಯೇ ಮದ್ಯವನ್ನು ಪೂರೈಸಲಾಗುತ್ತಿದೆ. ಅಲ್ಲದೆ, ಗ್ರಾಮೀಣ ಪ್ರದೇಶಗಳಿಗೆ ಅಕ್ರಮವಾಗಿ ಮದ್ಯ ಪೂರೈಸಲು ಟೆಂಡರ್ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಅಧಿಕಾರಿಗಳ ಕೃಪೆ: ಜೋಹಿಸರಹರಳಹಳ್ಳಿ, ಕುಸಗೂರ ಹಾಗೂ ಇತರ ಗ್ರಾಮಗಳಲ್ಲಿನ ಮೂರ್ನಾಲ್ಕು ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಕೃಷಿ ಕಾರ್ವಿುಕರು, ಯುವಕರು ಮದ್ಯದ ಚಟಕ್ಕೆ ದಾಸರಾಗುತ್ತಿದ್ದಾರೆ. ಆದರೆ, ಇದಕ್ಕೆಲ್ಲ ಇತಿಶ್ರೀ ಹಾಡಬೇಕಾದ ಅಧಿಕಾರಿಗಳು ಅಕ್ರಮಕ್ಕೆ ಸಹಕರಿಸುತ್ತಿರುವುದು ಗ್ರಾಮಸ್ಥರಲ್ಲಿ ಅಸಮಾಧಾನ ಉಂಟಾಗಿದೆ. ಹಲಗೇರಿ ಪೊಲೀಸ್ ಠಾಣೆಯ ಪೇದೆಯೊಬ್ಬರು ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟಗಾರರು ಹಾಗೂ ಪೂರೈಕೆದಾರರೊಂದಿಗೆ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದ್ದು, ಇಲಾಖೆಯ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ.

ಹೈವೇ ಪಕ್ಕದಲ್ಲೇ ಮದ್ಯ ಸಿಗುತ್ತೆ!

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಮದ್ಯದ ಅಂಗಡಿಗಳನ್ನು ತೆರವುಗೊಳಿಸುವಂತೆ ಸವೋಚ್ಚ ನ್ಯಾಯಾಲಯ ಆದೇಶ ಮಾಡಿದ್ದರಿಂದ ಹೆದ್ದಾರಿ ಪಕ್ಕದ 500 ಮೀಟರ್ ಸುತ್ತಳತೆಯ ಅಂತರದಲ್ಲಿನ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಆದರೆ, ತಾಲೂಕಿನ ಚಳಗೇರಿ ಗ್ರಾಮದಲ್ಲಿ ಹೆದ್ದಾರಿ ಪಕ್ಕದಲ್ಲಿಯೇ ಹಗಲು-ರಾತ್ರಿ ಎನ್ನದೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಬಕಾರಿ ಇಲಾಖೆಯ ಟಾರ್ಗೆಟ್ ತಲುಪಲು ಮದ್ಯದಂಗಡಿಯ ಮಾಲೀಕರು ಈ ರೀತಿಯ ಅನ್ಯ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಜಾಲದ ಜತೆಗೆ ಪೂರೈಕೆ ಜಾಲವೂ ವಿಸ್ತಾರವಾಗಿ ಬೆಳೆಯುತ್ತಿದೆ. ಅಬಕಾರಿ ಇಲಾಖೆ ಇಂಥ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

ಕಾಯಂ ಸಿಬ್ಬಂದಿ ಕೊರತೆ

ಅಕ್ರಮ ಮದ್ಯ ಮಾರಾಟ ಮತ್ತು ವಿತರಣೆ ಕುರಿತು ಅಧಿಕಾರಿಗಳನ್ನು ಸಂರ್ಪಸಿದಾಗ ಅವರಿಂದ ಸಮರ್ಪಕ ಉತ್ತರ ಲಭಿಸಲಿಲ್ಲ. ಅಬಕಾರಿ ಇಲಾಖೆಯಲ್ಲಿ ಕಾಯಂ ಸಿಬ್ಬಂದಿ ಕೊರತೆ ಇದೆ. ಸವಣೂರಿನ ಅಬಕಾರಿ ನಿರೀಕ್ಷಕ ಅನಂದ ಅಡಿಗಲ್, ಶಿಗ್ಗಾಂವಿಯ ಅಬಕಾರಿ ಎಸ್​ಐ ಎಚ್.ಡಿ. ಅಣ್ಣೇರ, ಹಾವೇರಿಯ ಮಹೇಶಗೌಡ ಪಾಟೀಲ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಯಂ ಸಿಬ್ಬಂದಿಯ ಕೊರತೆಯೂ ಅಕ್ರಮ ಮದ್ಯ ತಡೆಗಟ್ಟಲು ಅಡಚಣೆಯಾಗುತ್ತಿದೆ ಎಂದು ಅಬಕಾರಿ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಶ್ರೇಣೀಕೃತ ಜಾಲ

ಅಕ್ರಮ ಮದ್ಯ ಮಾರಾಟದ ಹಿಂದೆ ಶ್ರೇಣೀಕೃತ ಜಾಲವೇ ಅಡಗಿದೆ. ಕಿರಿಯ ಅಧಿಕಾರಿಗಳಿಂದ ಮೇಲಧಿಕಾರಿಗಳ ವರೆಗೂ ಮಾಮೂಲಿ ಹೋಗುತ್ತದೆ. ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕೃಪಾಕಟಾಕ್ಷವಿದೆ. ಹಲಗೇರಿ ವ್ಯಾಪ್ತಿ ಹಾಗೂ ಚಳಗೇರಿ ಸುತ್ತ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಉಳಿದಂತೆ ಗ್ರಾಮೀಣ ಭಾಗದಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಬೀಟ್ ಪದ್ಧತಿ ಅಳವಡಿಸಿದ್ದರೂ ಯಾವುದೇ ಅಕ್ರಮ ಮದ್ಯವನ್ನು ಮಟ್ಟ ಹಾಕಿರುವ ದಾಖಲೆ ಇಲ್ಲ. ಸರ್ಕಾರಕ್ಕೆ ವರದಿ ಸಲ್ಲಿಸಲು ಒಂದೆರಡು ಸಣ್ಣಪುಟ್ಟ ಪ್ರಕರಣಗಳು ನೆಪ ಮಾತ್ರಕ್ಕೆ ದಾಖಲಿಸುತ್ತಾರೆ ಎಂದು ರೈತ ಮುಖಂಡರೊಬ್ಬರು ಆರೋಪಿಸಿದ್ದಾರೆ.