ಅಕ್ರಮ ಮದ್ಯದ್ದೇ ಕಾರುಬಾರು

ಶಿವರಾಜ ಎಂ. ಬೆಂಗಳೂರು

ಲೋಕಸಭಾ ಚುನಾವಣೆ ಕಾವೇರುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮದ್ಯ ಅಕ್ರಮ ಮಾರಾಟ ಬಿರುಸುಗೊಂಡಿದೆ. ಪೊಲೀಸ್ ಹಾಗೂ ಅಬಕಾರಿ ಇಲಾಖೆ ಹದ್ದಿನ ಕಣ್ತಪ್ಪಿಸಿ ಮದ್ಯದ ಹೊಳೆ ಹರಿಯುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ 85 ಸಾವಿರ ಲೀಟರ್ ಅಕ್ರಮ ಮದ್ಯ ಜಪ್ತಿಯಾಗಿತ್ತು. ಈ ಲೋಕಸಭಾ ಚುನಾವಣೆಯಲ್ಲಿ ಇದರ ಪ್ರಮಾಣ ದುಪ್ಪಟ್ಟಗಾಲಿದೆ ಎಂಬ ಮಾತು ಕೇಳಿಬಂದಿದೆ.

ಮಾ.10ರಂದು ನೀತಿ ಸಂಹಿತೆ ಜಾರಿಯಾದ ಬಳಿಕ ಇದುವರೆಗೆ ಅಬಕಾರಿ ಹಾಗೂ ಪೊಲೀಸ್ ಇಲಾಖೆ ದಾಳಿಯಲ್ಲಿ 7,564 ಲೀಟರ್ ಅಕ್ರಮ ಮದ್ಯ ಜಪ್ತಿಯಾಗಿದೆ. ಮುಖ್ಯವಾಗಿ ಗೂಡಂಗಡಿಗಳು, ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಪ್ರಮಾಣ ಹೆಚ್ಚಿದೆ. ಉಳಿದಂತೆ ಮಾಂಸಾಹಾರಿ ಹೋಟೆಲ್​ಗಳು, ಹೆದ್ದಾರಿ ಬಳಿಯ ಡಾಬಾಗಳಲ್ಲಿ ಇವುಗಳ ಮಾರಾಟ ಜೋರಾಗಿದೆ.

196 ಪ್ರಕರಣ ದಾಖಲು:

ಇದುವರೆಗೆ ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 196 ಪ್ರಕರಣ ದಾಖಲಾಗಿದ್ದು, 19 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 7 ಮಂದಿ ಜೈಲುಪಾಲಾಗಿದ್ದಾರೆ. ವಿಶೇಷವೆಂದರೆ ಅಕ್ರಮ ಮದ್ಯ ಮಾರಾಟ ಸಂಬಂಧ ನಡೆದ ದಾಳಿಯಲ್ಲಿ ಇಬ್ಬರು ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ನೆಲಮಂಗಲ ತಾಲೂಕು ನರಸೀಪುರದಲ್ಲಿ ಪೆಟ್ಟಿಗೆ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಆರೋಪದ ಮೇಲೆ ಸುಮಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಅದೇ ರೀತಿ ಹೊಸಕೋಟೆ ತಾಲೂಕಿನ ಪಿಳ್ಳಂಗುಪ್ಪ ಗ್ರಾಮದ ರತ್ನಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಡಿಸ್ಟಿಲರಿಗಳ ಮೇಲೂ ಕಣ್ಣು:

ಕಳೆದ ವಿಧಾನಸಭಾ ಚುನಾವಣೆ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳು ಡಿಸ್ಟಿಲರಿಗಳ ಮೇಲೂ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 4 ಸಾವಿರ ಲೀಟರ್​ನಷ್ಟು ಸ್ಪಿರಿಟ್ ವಶಪಡಿಸಿಕೊಂಡಿದ್ದರು. ಮದ್ಯ ಮಾರಾಟದೊಂದಿಗೆ ಇಂಥ ಸ್ಟಿರಿಟ್ ಅಕ್ರಮ ದಾಸ್ತಾನುಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚೆಕ್​ಪೋಸ್ಟ್​ಗಳಲ್ಲಿ ಕಟ್ಟೆಚ್ಚರ: ಮಾಮೂಲಿ ದಿನಗಳಲ್ಲಿ ಗೂಡಂಗಡಿಗಳವರು ಸರಾಗವಾಗಿ ಮದ್ಯ ಸಾಗಣೆ ಮಾಡುತ್ತಿದ್ದರು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚೆಕ್​ಪೋಸ್ಟ್​ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಅಕ್ರಮ ಮದ್ಯ ಸಾಗಣೆ ಕಷ್ಟವಾಗಿದೆ. ಆದರೂ ಚೆಕ್​ಪೋಸ್ಟ್​ಗಳ ರಸ್ತೆ ಬದಲಿಸಿ ಕಳ್ಳ ಮಾರ್ಗಗಳಲ್ಲಿ ಮದ್ಯ ಸಾಗಣೆ ನಡೆಯುತ್ತಿದೆ ಎನ್ನಲಾಗಿದೆ.

ಜಪ್ತಿ ಮದ್ಯ ನಾಶ: ಇಲಾಖೆಗಳು ಜಪ್ತಿ ಮಾಡಿದ ಮದ್ಯವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ನಂತರ ಆ ಮದ್ಯದ ಮರುಬಳಕೆ ಸಾಧ್ಯವಿಲ್ಲ. ಅವುಗಳನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 ವರ್ಷ ಜೈಲು ಶಿಕ್ಷೆ: ಅಬಕಾರಿ ನಿಯಮ ಉಲ್ಲಂಘನೆ ಕಾಯ್ದೆಯಡಿ ಅಕ್ರಮವಾಗಿ ಮದ್ಯ ಮಾರಾಟ ಆರೋಪ ಸಾಬೀತಾದರೆ ಅಪರಾಧಿಗಳಿಗೆ 5 ವರ್ಷದವರೆಗೆ ಜೈಲು ಶಿಕ್ಷೆಯಾಗಲಿದೆ. ಈ ಬಗ್ಗೆ ಅರಿವಿಲ್ಲದೆ ಗ್ರಾಮಾಂತರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಪೆಟ್ಟಿಗೆ ಅಂಗಡಿ, ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಕ್ರಮವಾಗಿ ಮದ್ಯ ಮಾರುವವರು ಹಾಗೂ ಮಾರಾಟಕ್ಕೆ ಸಹಕಾರ ನೀಡುವವರು ಇಬ್ಬರ ಮೇಲೂ ಪ್ರಕರಣ ದಾಖಲಾಗಲಿದ್ದು, ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ಅರಿವು ಅಗತ್ಯ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ಸನಿಹದಲ್ಲಿ ಹೊಳೆ: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಕ್ರಮ ಮದ್ಯ ಮಾರಾಟ ಚುರುಕುಗೊಂಡಿದೆ. ಚುನಾವಣೆ ಸನಿಹದಲ್ಲಿ ಇದರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಹೆಂಡದ ಆಮಿಷ ತೋರಿಸಿ ಮತಗಿಟ್ಟಿಸಲು ಅಭ್ಯರ್ಥಿಗಳು ಅನೇಕ ವಾಮಮಾರ್ಗ ಅನುಸರಿಸುತ್ತಾರೆ. ಇದಕ್ಕೆ ಇಂಥ ಪೆಟ್ಟಿ ಅಂಗಡಿ, ಗೂಡಂಗಡಿಯವರೇ ಬಲಿಪಶುಗಳಾಗುತ್ತಾರೆ. ಸರಿಯಾದ ಕಾನೂನು ಅರಿವಿಲ್ಲದೆ ಹೆಚ್ಚು ಹಣದ ಆಮಿಷ ತೋರಿಸಿ ಅಕ್ರಮವಾಗಿ ಮದ್ಯ ಹಂಚಲು ಇವರನ್ನು ಬಳಸಲಾಗುತ್ತದೆ. ಅಭ್ಯರ್ಥಿಗಳ ಹಿಂಬಾಲಕರು ಪ್ರಭಾವಿಗಳ ಹೆಸರು ಹೇಳಿ ಏನೇ ಬಂದರೂ ನಾವು ನೋಡಿಕೊಳ್ಳುತ್ತೇವೆ, ಹೆದರಬೇಡಿ ಎಂದು ಅಭಯ ನೀಡುತ್ತಾರೆ. ಆದರೆ ಇಲಾಖೆಗಳ ದಾಳಿಯಲ್ಲಿ ಸಿಕ್ಕಿಬಿದ್ದು ಬಲಿಪಶುಗಳಾಗುವ ಮದ್ಯ ಮಾರಾಟಗಾರರ ಭವಿಷ್ಯವೇ ಹಾಳಾಗುತ್ತದೆ.

2.3 ಲೀಟರ್ ಮೇಲಿದ್ದರೆ ಅಕ್ರಮ: ಮನೆ, ಅಂಗಡಿ ಮತ್ತಿತರ ಎಲ್ಲೇ ಆದರೂ 2.3 ಲೀಟರ್​ಗಿಂತ ಹೆಚ್ಚು ಪ್ರಮಾಣದ ಮದ್ಯ ದಾಸ್ತಾನು ಕಂಡುಬಂದರೆ ಅದನ್ನು ಅಕ್ರಮ ಮದ್ಯ ಎಂದೇ ಪರಿಗಣಿಸಲಾಗುತ್ತದೆ. ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ ಸಾಗಿಸುತ್ತಿದ್ದವನ ಬಂಧನ:  ದಾಖಲೆ ರಹಿತವಾಗಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಪಟ್ಟಣದ ಮೂರ್ತಿ (47) ಎಂಬಾತನನ್ನು ಅಬಕಾರಿ ಇನ್​ಸ್ಪೆಕ್ಟರ್ ಸೌಮ್ಯಾ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ. ದೇವನಹಳ್ಳಿ ಹೊರವಲಯದಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ತಪಾಸಣೆ ಮಾಡಿದಾಗ 8,640 ಲೀಟರ್​ನಷ್ಟು ಮದ್ಯ ಕಂಡು ಬಂದಿವೆ. ಆರೋಪಿ ಹಾಗೂ ದ್ವಿಚಕ್ರವಾಹನವನ್ನು ಮಾಲು ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಕ್ರಮ ಮದ್ಯ ಮಾರಾಟ ಹಾಗೂ ಸಾಗಣೆದಾರರ ಮೇಲೆ ಕಣ್ಣಿಟ್ಟಿದ್ದು, ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಆರೋಪ ಸಾಬೀತಾದರೆ 5 ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

| ವಿವೇಕ್  ಡೆಪ್ಯೂಟಿ ಕಮೀಷನರ್ ಅಬಕಾರಿ ಇಲಾಖೆ