ಅಕ್ರಮ ಮಣ್ಣು ಸಾಗಾಟ, ನಾಲ್ವರ ಬಂಧನ

ಮುಂಡರಗಿ: ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ವ್ಯಾಪ್ತಿಯ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗುಡ್ಡದ ಮಣ್ಣನ್ನು ಸಾಗಾಟ ಮಾಡುತ್ತಿದ್ದ ವಾಹನ ಮತ್ತು ವಾಹನ ಚಾಲಕರನ್ನು ವಲಯ ಅರಣ್ಯ ಇಲಾಖೆ ಅಧಿಕಾರಿ ಎಂ.ಎಸ್. ಶಿವರಾತ್ರೇಶ್ವರಸ್ವಾಮಿ ನೇತೃತ್ವದ ತಂಡ ಗುರುವಾರ ಮಧ್ಯರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯಲ್ಲಿ 1 ಜೆಸಿಬಿ, 5 ಟ್ರ್ಯಾಕ್ಟರ್, ನಾಲ್ವರು ಚಾಲಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಅರಣ್ಯ ಇಲಾಖೆಯ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿ ಸಂದರ್ಭದಲ್ಲಿ ಇಬ್ಬರು ವಾಹನ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಲಯ ಅರಣ್ಯಾಧಿಕಾರಿ ಎಂ.ಎಸ್. ಶಿವರಾತ್ರೇಶ್ವರಸ್ವಾಮಿ ಅವರು, ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಣ್ಣು ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇಲಾಖೆಯ ನಿಯಮಾನುಸಾರ ವಾಹನ ಮತ್ತು ನಾಲ್ವರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
ಅರಣ್ಯ ಇಲಾಖೆ ಸಿಬ್ಬಂದಿ ಎಸ್.ಎಸ್. ಪೂಜಾರ, ಮೌಲಾಸಾಬ್ ಬನ್ನಿಕೊಪ್ಪ, ಕೆ.ವೈ. ಕಾಶಿ, ಶಂಕ್ರಪ್ಪ ಎಲಿವಲ್ಲಿ, ನಾಗರಾಜ ನಾಯ್ಕರ, ಅಮರಪ್ಪ ರಾಥೋಡ, ಶಶಿಕುಮಾರ ಕೊಡಗಿ, ಶಿವಕುಮಾರ, ಯಲ್ಲಪ್ಪ, ಮತ್ತಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.
“ತಾಲೂಕಿನ ತಾಂಬ್ರಗುಂಡಿ-ಹೆಸರೂರು ರಸ್ತೆ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಮಹೇಶ ಮುಂಡರಗಿ ಎಂಬುವರು ಮಣ್ಣನನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. ಅವರ ಮೇಲೆಯೂ ಪ್ರಕರಣ ದಾಖಲಿಸಿದ್ದೇವೆ.”
| ಎಂ.ಎಸ್. ಶಿವರಾತ್ರೇಶ್ವರಸ್ವಾಮಿ, ವಲಯ ಅರಣ್ಯ ಅಧಿಕಾರಿ ಮುಂಡರಗಿ