ಕಲಬುರಗಿ: ವಿವಿಧ ನೇಮಕಾತಿಯಲ್ಲಿ ಬ್ಲೂಟೂತ್ ಸೇರಿ ವಿವಿಧ ಪ್ರಕಾರದ ಅಕ್ರಮಗಳು ನಡೆದಿರುವ ಕಾರಣ, ಶನಿವಾರ ನಡೆದ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಲೆಕ್ಕ ಸಹಾಯಕರ ಹುದ್ದೆಗಳ ಪರೀಕ್ಷೆಯಲ್ಲಿ ರಿಯಾಯಿತಿ ಇದ್ದರೂ ತಾಳಿ ತೆಗೆಸಿ ಕೇಂದ್ರಕ್ಕೆ ಪ್ರವೇಶ ನೀಡಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಎಸ್‌ಪಿ ಕಚೇರಿ ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಪರೀಕ್ಷಾ ಕೇಂದ್ರದ ಬಳಿ ಅಭ್ಯರ್ಥಿಗಳ ತಾಳಿ ತೆಗೆಸಲಾಯಿತು. ಮಹಿಳೆಯರು ಅನಿವಾರ್ಯವಾಗಿ ತಾಳಿ ತೆಗೆದು ಪರೀಕ್ಷಾ ಕೇಂದ್ರ ಪ್ರವೇಶಿಸಿದರು. ಈ ವೇಳೆ ಕೆಲವರ ಜತೆ ಸಣ್ಣಪುಟ್ಟ ವಾಗ್ವಾದ ನಡೆದರೂ, ಪರೀಕ್ಷಾ ನಿಯಮ ಎಂದು ಸೂಚಿಸಿದ್ದರಿಂದ ಅನಿವಾರ್ಯವಾಯಿತು.
ಎಲ್ಲೆಡೆ ಬಿಗಿ ಬಂದೋಬಸ್ತ್: ನಗರದ ೧೦ ಕೇಂದ್ರಗಳ ಸುತ್ತ ಪೊಲೀಸ್ ಇಲಾಖೆಯಿಂದ ೨೦೦ ಮೀಟವರೆಗೆ ನಿಷೇಧಾಜ್ಞೆ ಜಾರಿ ಮಾಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಭ್ಯರ್ಥಿಗಳನ್ನು ಬಯೋ ಮೆಟ್ರಿಕ್ ಫೇಸ್ ಐಡೇಂಟಿಫಿಕೇಷನ್ ಮಾಡಲಾಯಿತು. ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಮೊದಲ ಬಾರಿ ಪರೀಕ್ಷಾ ಸಂವೀಕ್ಷಕರಿಗೆ ಬಾಡಿ ಕ್ಯಾಮೆರಾ ಅಳವಡಿಸಲಾಗಿತ್ತು.