ಅಕ್ರಮದ ತಾಣ ಈ ಹೈಟೆಕ್ ಬಸ್ ನಿಲ್ದಾಣ

ಹಾನಗಲ್ಲ: ಕಳೆದ ನಾಲ್ಕು ವರ್ಷಗಳ ಹಿಂದೆ 3 ಕೋಟಿ ರೂ.ಗಳಲ್ಲಿ ನಿರ್ವಣಗೊಂಡ ಪಟ್ಟಣದ ಹೈಟೆಕ್ ಬಸ್ ನಿಲ್ದಾಣ, ಇದೀಗ ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.

ಬಸ್ ಹತ್ತುವ ಇಳಿಯುವ ಸಂದರ್ಭದಲ್ಲಿ ಸಾರ್ವಜನಿಕರ ಮೊಬೈಲ್​ಫೋನ್ ಹಾಗೂ ಹಣ ಎಗರಿಸುವ ಪ್ರಕರಣಗಳು ಸಾಮಾನ್ಯವಾಗಿವೆ. ನಿಲ್ದಾಣದಲ್ಲಿ ಪೊಲೀಸ್ ಚೌಕಿ ಇದ್ದರೂ ಈವರೆಗೂ ಅಲ್ಲೊಬ್ಬ ಪೊಲೀಸ್ ಬಂದು ಕುಳಿತಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ರೀತಿಯ ಗಲಾಟೆಗಳು ನಡೆದರೂ ಅವುಗಳನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಹಾಡಹಗಲೇ ಕಳ್ಳರು ಕೈಚಳಕ ತೋರಿಸುತ್ತಿದ್ದರೂ, ಪೊಲೀಸ್ ಇಲಾಖೆ ಇದ್ಯಾವುದಕ್ಕೂ ಸ್ಪಂದಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಪಡ್ಡೆಗಳ ಹಾವಳಿ: ಇತ್ತೀಚೆಗಷ್ಟೇ ಶಾಲಾ ಶಿಕ್ಷಕಿಯ ಕೊರಳಲ್ಲಿನ ಮಾಂಗಲ್ಯ ಸರವನ್ನು ಹಗಲು ವೇಳೆಯಲ್ಲಿ ಕಸಿದುಕೊಳ್ಳಲು ಯತ್ನ ನಡೆದಿದೆ. ಪ್ರತಿನಿತ್ಯ ನಿಲ್ದಾಣದ ಹೊರ ಮತ್ತು ಒಳಭಾಗದಲ್ಲಿ ವಿದ್ಯಾರ್ಥಿನಿಯರ ಗಮನ ಸೆಳೆಯಲು ಪಡ್ಡೆ ಹುಡುಗರು ತರುವ ಬೈಕ್​ಗಳ ಕರ್ಕಶ ಧ್ವನಿಯ ಹಾವಳಿಯೂ ಮಿತಿಮೀರಿದೆ. ಸಾರಿಗೆ ಸಂಸ್ಥೆಯ ಸಿಬ್ಬಂದಿ ಇದೆಲ್ಲವನ್ನೂ ನಿಭಾಯಿಸಲಾಗದೇ ಕಂಡೂ ಕಾಣದಂತೆ ತಮ್ಮ ಕೆಲಸ-ಕಾರ್ಯದಲ್ಲಿ ನಿರತರಾಗುತ್ತಾರೆ.

ಇತ್ತೀಚೆಗಷ್ಟೇ ಬಸ್ ನಿಲ್ದಾಣದ ಒಳಭಾಗದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್​ಗೆ ರಾತ್ರಿ ವೇಳೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೊತ್ತದ ಫ್ರಿಜ್, ಆಹಾರ ಸಾಮಗ್ರಿ ಬೆಂಕಿಗಾಹುತಿಯಾದವು. ಶಾಕ್ ಸರ್ಕ್ಯೂಟ್​ನಿಂದ ಅವಘಡ ಸಂಭವಿಸಿತೋ ಅಥವಾ ದುಷ್ಕರ್ವಿುಗಳು ಬೆಂಕಿ ಹಚ್ಚಿದರೋ ಎಂಬ ಅನುಮಾನ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರನ್ನು ಕಾಡುತ್ತಿದೆ.

ಎರಡು ವರ್ಷಗಳ ಹಿಂದೆ ಪರಿಸರ-ಮಾಲಿನ್ಯ ಇಲಾಖೆ ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣದ ಗೋಡೆಗೆ ಅಳವಡಿಸಿದ ಎಲ್​ಸಿಡಿ ಟಿವಿ ಕಾರ್ಯನಿರ್ವಹಿಸಿದ್ದು ಬೆರಳೆಣಿಕೆಯಷ್ಟು ದಿನ ಮಾತ್ರ. ಇತ್ತೀಚೆಗೆ ಸಂಭವಿಸಿದ ಬೆಂಕಿ ಅನಾಹುತದಿಂದ ಅದೂ ಕರಕಲಾಗಿದೆ. ನಿಲ್ದಾಣದಲ್ಲಿನ ವಿದ್ಯುತ್ ವೈರ್​ಗಳು ಬೆಂಕಿ ಅವಘಡದಿಂದ ಸುಟ್ಟಿವೆ. ಬಸ್ ನಿಲ್ದಾಣದಲ್ಲಿರುವ ಮಹಿಳೆಯರ ವಿಶ್ರಾಂತಿ ಕೊಠಡಿಯಲ್ಲೂ ಯುವಕರ ಗುಂಪು ಕುಳಿತುಕೊಳ್ಳುತ್ತಿರುವುದರಿಂದ ವಿದ್ಯಾರ್ಥಿನಿಯರು, ಮಹಿಳಾ ಪ್ರಯಾಣಿಕರು ಬೇರೆಡೆ ವಿಶ್ರಮಿಸುವ ಅನಿವಾರ್ಯತೆ ಎದುರಾಗುತ್ತಿದೆ. ಬಸ್ ನಿಲ್ದಾಣದ ಗೋಡೆಗಳೆಲ್ಲ ಗುಟ್ಖಾ ಪ್ರಿಯರಿಂದಾಗಿ ಕೆಂಪು ಬಣ್ಣದಿಂದ ತುಂಬಿವೆ. ಇದನ್ನು ತಡೆಯಲು ಎಷ್ಟೇ ಗೋಡೆ ಬರಹ, ಪ್ರಕಟಣೆ ನೀಡಿದ್ದರೂ ಪ್ರಯೋಜನವಾಗುತ್ತಿಲ್ಲ. ಧ್ವನಿವರ್ಧಕದಲ್ಲಿ ನೀಡುವ ಮಾಹಿತಿಗೆ ಯಾರೂ ಕಿವಿಗೊಡುವುದಿಲ್ಲ.

ಒಟ್ಟಾರೆ ಬಸ್ ನಿಲ್ದಾಣ ಅವ್ಯವಸ್ಥೆಗಳ ಕೇಂದ್ರವಾಗಿದೆ. ಸಾರ್ವಜನಿಕರಿಗೆ ಇಲ್ಲಿರುವ ಸೌಕರ್ಯ ಸದ್ಬಳಕೆ ಮಾಡಿಕೊಳ್ಳಲು ಆಗದಂಥ ಪರಿಸ್ಥಿತಿ ತಲೆದೋರಿದೆ.

ಸಿಸಿ ಕ್ಯಾಮರಾ ಎಲ್ಲಿ?: ಸಿಸಿ ಕ್ಯಾಮರಾ ಅಗತ್ಯವಿದ್ದರೂ ನಿಲ್ದಾಣದಲ್ಲಿ ಎಲ್ಲೂ ಅಳವಡಿಸದಿರುವುದು ಅಕ್ರಮ ಚಟುವಟಿಕೆಗೆ ಅನುಕೂಲ ಕಲ್ಪಿಸಿದಂತಾಗಿದೆ. ಧ್ವನಿವರ್ಧಕದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾಗಿ ಹೇಳುತ್ತಾರೆ. ಆದರೆ, ಎಲ್ಲಿಯೂ ಕ್ಯಾಮರಾ ಕಂಡುಬರುತ್ತಿಲ್ಲ. ರಸ್ತೆ ಸಾರಿಗೆ ಸಂಸ್ಥೆ ಕ್ಯಾಮರಾ ಅಳವಡಿಸಿದರೆ ಒಂದಷ್ಟು ಸಮಸ್ಯೆಗಳಿಗಾದರೂ ಕಡಿವಾಣ ಹಾಕಿದಂತಾಗುತ್ತದೆ. ಇದನ್ನು ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಬಸ್ ನಿಲ್ದಾಣದ ಆವರಣದಲ್ಲಿ ಖಾಸಗಿ ವಾಹನಗಳು, ಅನವಶ್ಯಕವಾಗಿ ಓಡಾಡುವ ಬೈಕ್​ಗಳು, ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಪಡ್ಡೆ ಹುಡುಗರನ್ನು ನಿಭಾಯಿಸಲು ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕಾಗಿದೆ. ಮಹಿಳಾ ಪ್ರಯಾಣಿಕರು ನಿರ್ಭೀತಿಯಿಂದ ಕುಳಿತುಕೊಳ್ಳುವ ವಾತಾವರಣ ನಿರ್ವಣವಾಗಬೇಕಿದೆ.

| ಮಧುಮತಿ ಪೂಜಾರ, ಸ್ನೇಹಾ ಮಹಿಳಾ ಮಂಡಳ ಅಧ್ಯಕ್ಷೆ ಹಾನಗಲ್ಲ